ಹೆದರುಪುಕ್ಕಲನಿಗೆ ಭಾರತರತ್ನ ನೀಡಲು ಮುಂದಾದ ಮೋದಿ: ಕನ್ಹಯ್ಯ ಕುಮಾರ್ ವಾಗ್ದಾಳಿ
ಕಲಬುರಗಿ, ಅ 16: ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಅಂಬೇಡ್ಕರ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ಮಾತನಾಡುತ್ತಿದ್ದ ಕನ್ಹಯ್ಯ, "ಕೈಲಾಗದೇ ಓಡಿಹೋದ, ಹೆದರುಪುಕ್ಕಲನಿಗೆ ಭಾರತರತ್ನ ಕೊಡಲು ಮೋದಿ ಸರಕಾರ ಮುಂದಾಗಿದೆ" ಎಂದು ಪರೋಕ್ಷವಾಗಿ, ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯನ್ನು ಟೀಕಿಸಿದ್ದಾರೆ.
"ಈ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸಾವಿರಾರು ಜನರ ಪರಿಶ್ರಮವಿದೆ. ಅವರನ್ನೆಲ್ಲಾ ಬಿಟ್ಟು, ಮೋದಿ ಸರಕಾರ, ಬ್ರಿಟಿಷರ ಪರವಾಗಿದ್ದ, ರಣಹೇಡಿಗೆ ಭಾರತರತ್ನ ನೀಡಲು ಮುಂದಾಗಿರುವುದು, ಬಹುದೊಡ್ಡ ದುರಂತ" ಎಂದು ಕನ್ಹಯ್ಯ, ಪರೋಕ್ಷವಾಗಿ ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ.

"ಪ್ರಧಾನಿ ಮೋದಿ, ತಮಾಷೆ ಮಾಡುವುದನ್ನು ಬಿಟ್ಟು, ಕೆಲಸ ಮಾಡುವುದನ್ನು ಕಲಿಯಲಿ. ಜನರ ತೆರಿಗೆ ಹಣದಲ್ಲಿ ವಿದೇಶ ಪ್ರವಾಸ ಮಾಡುವ ಮೋದಿ, ನಾಟಕ ಮಾಡುವುದನ್ನು ಮೊದಲು ಕಮ್ಮಿ ಮಾಡಲಿ" ಎಂದು ಕನ್ಹಯ್ಯ ಕುಮಾರ್. ಪ್ರಧಾನಿಗೆ ಸಲಹೆಯನ್ನು ನೀಡಿದ್ದಾರೆ.
'ಇಡಿ, ಸಿಬಿಐ ಸೇರಿದಂತೆ, ಕೇಂದ್ರದ ತನಿಖಾ ದಳವನ್ನು ತೋರಿಸಿ, ಬೆದರಿಸಲು ನಾವೇನೂ ಅಂತಹ ನಾಯಕರಲ್ಲ" ಎಂದ ಕನ್ಹಯ್ಯ, ಭಾರತವನ್ನು ಮತ್ತೊಮ್ಮೆ ಇಬ್ಬಾಗ ಮಾಡಲು ಮೋದಿ ಸರಕಾರ ಮುಂದಾಗಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇಗುಸರಾಯಿ ಕ್ಷೇತ್ರದಿಂದ, ಸಿಪಿಐ ಟಿಕೆಟಿನಿಂದ ಸ್ಪರ್ಧಿಸಿದ್ದ ಕನ್ಹಯ್ಯ ಕುಮಾರ್, ಬಿಜೆಪಿಯ ಗಿರಿರಾಜ್ ಸಿಂಗ್ ಎದುರು 4.2ಲಕ್ಷಕ್ಕೂ ಅಧಿಕ ಮತಗಳಿಂದ ಹೀನಾಯವಾಗಿ ಸೋಲುಂಡಿದ್ದರು.












Click it and Unblock the Notifications