PSI Recruitment Scam: ಪಿಎಸ್ಐ ಪರೀಕ್ಷಾ ಅಕ್ರಮ; ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್ ಬಂಧನ
ಕಲಬುರಗಿ, ಏಪ್ರಿಲ್ 23: ರಾಜ್ಯದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಅನೇಕ ರಾಜಕೀಯ ಮುಖಂಡರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸ್ಥಳೀಯ ಮುಖಂಡರು ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಹೊರಬೀಳುತ್ತಿದೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಈವರೆಗೆ ಒಟ್ಟು 13 ಜನರ ಬಂಧನ ಮಾಡಲಾಗಿದೆ.
545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಪೊಲೀಸರು ಕಲಬುರಗಿ ಜಿಲ್ಲೆಯ ಅಫಜಲ್‌ಪುರದ ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್‌ನನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಕಿಂಗ್ ಪಿನ್ ಎನ್ನಲಾಗುತ್ತಿರುವ ರುದ್ರಗೌಡ ಪಾಟೀಲ್ ತಲೆಮರೆಸಿಕೊಂಡಿದ್ದನು, ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಸೊಲ್ಲಾಪುರದಲ್ಲಿ ರುದ್ರೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರದಂದು ರುದ್ರಗೌಡ ಪಾಟೀಲ್ ಸಹೋದರ, ಅಫಜಲ್‌ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್ ಪಾಟೀಲ್‌ನನ್ನು ಸಿಐಡಿ ಬಂಧಿಸಿತ್ತು.
ಮಲ್ಲಿಕಾರ್ಜುನ ಖರ್ಗೆ ಆಪ್ತ ಮಹಾಂತೇಶ ಪಾಟೀಲ್
ಪಿಎಸ್‌ಐ ನೇಮಕ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ಜಿಲ್ಲೆಯ ಅಫಜಲ್‌ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪ್ತ ಮಹಾಂತೇಶ ಪಾಟೀಲ್ ಸೇರಿದಂತೆ ಮತ್ತೆ ಮೂವರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಇದೇ ವೇಳೆ ಇನ್ನಿಬ್ಬರು ಆರೋಪಿಗಳಾದ ವಿಶಾಲ್ ಮತ್ತು ಶರಣಬಸಪ್ಪ ಎಂಬುವರನ್ನು ಬಂಧಿಸಲಾಗಿದೆ. ಆ ಮೂಲಕ ಈ ಅಕ್ರಮದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿದಂತಾಗಿದೆ.
ವಿಶಾಲ್ ಎಂಬಾತ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೆ ಸೇರಿದ ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದು, ಶರಣಬಸಪ್ಪ ಎಂಬಾತ ನಿನ್ನೆ ಬಂಧಿತನಾಗಿರುವ ಅಫಜಲ್‌ಪುರ ಶಾಸಕ ಎಂ.ವೈ. ಪಾಟೀಲರ ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿಗೆ ಬ್ಲೂಟೂತ್ ಡಿವೈಸ್ ಮೂಲಕ ಸಹಾಯ ಮಾಡಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ.
ಇದುವರೆಗೆ ಬಿಜೆಪಿಗೆ ನಾಯಕಿ ದಿವ್ಯಾ ಹಾಗರಗಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಪಿಎಸ್ಐ ನೇಮಕಾತಿ ಅಕ್ರಮ ಈಗ ಕಾಂಗ್ರೆಸ್‌ಗೂ ಅಂಟಿಕೊಂಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೇ ನೇರವಾಗಿ ನಂಟು ಹೊಂದಿರುವುದು ಕೈ ಪಾಳಯಕ್ಕೆ ಬಲವಾದ ಹೊಡೆತ ಬಿದ್ದಿಂತಾಗಿದ್ದು, ಅಕ್ರಮದಲ್ಲಿ ಎರಡೂ ಪಕ್ಷಗಳ ಮುಖಂಡರು ಭಾಗಿಯಾಗಿರುವುದು ಸಾಬೀತಾಗಿದೆ.
ಮಹಾಂತೇಶ್ ಪಾಟೀಲ್ ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯರಾಗಿ ಕೆಲಸ ಮಾಡಿದ್ದರು. ಅಫಜಲಪುರ ತಾಲೂಕಿನಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೂರು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅಚ್ಚರಿ ಎಂದರೆ ಇಂದು (ಶನಿವಾರ) ಅಫಜಲ್‌ಪುರದಲ್ಲಿ 101 ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ಮುನ್ನಾದಿನವೇ ಜೈಲು ಸೇರಿದ್ದಾರೆ.












Click it and Unblock the Notifications