ಕಲಬುರಗಿಯಲ್ಲಿ ವಕೀಲನ ಹತ್ಯೆ ಖಂಡಿಸಿ ಪ್ರತಿಭಟನೆ!
ಕಲಬುರಗಿ ಡಿಸೆಂಬರ್ 7: ಕಲಬುರಗಿಯಲ್ಲಿ ವಕೀಲನ ಹತ್ಯೆಯನ್ನು ಖಂಡಿಸಿ ವಕೀಲರು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಸರ್ದಾರ್ ವಲ್ಲಾಬಾಯ್ ಪಟೇಲ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ವಕೀಲರು ಆಕ್ರೋಶ ಹೊರಹಾಕಿದರು.
ಕಳೆದ ದಿನ ಬೆಳಗ್ಗೆ ವಕೀಲ ಹಿರಣ್ಣ ಗೌಡ ಎಂಬುವವರನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಿದ ಭಯಾನಕ ಘಟನೆ ನಡೆದಿದೆ. ಕಲಬುರಗಿಯ ಅಪಾರ್ಟ್‌ಮೆಂಟ್ ಬಳಿ 40 ವರ್ಷದ ವಕೀಲರನ್ನು ಅಪರಿಚಿತ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾರೆ.

ಮೃತರನ್ನು ಹಿರಣ್ಣ ಗೌಡ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ.ಈ ವೇಳೆ ಅವರು ನ್ಯಾಯಾಲಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಒಂದೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಆತನನ್ನು ಹಿಂಬಾಲಿಸಿದ ಹಂತರು ದಾಳಿ ಬಳಿಕ ಪರಾರಿಯಾಗಿದ್ದಾರೆ.
ಮಾರಕಾಸ್ತ್ರಗಳೊಂದಿಗೆ ವಕೀಲರನ್ನು ಬೆನ್ನಟ್ಟುತ್ತಿರುವ ದೃಶ್ಯಗಳು ಅಪಾರ್ಟ್‌ಮೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಿರಣ್ಣ ಅವರು ಈ ವೇಳೆ ಪರವಾನಗಿ ಪಡೆದ ಬಂದೂಕನ್ನು ಹೊಂದಿದ್ದರು ಎಂದು ವರದಿಯಾಗಿದೆ. ತನ್ನನ್ನು ರಕ್ಷಿಸಿಕೊಳ್ಳಲು ಬಂದೂಕು ತೆಗೆಯುವ ಮುನ್ನವೇ ಅವರ ಮೇಲೆ ಹಂತರು ದಾಳಿ ಮಾಡಿದ್ದಾರೆ.
ಅಪರಾಧಿಗಳ ಪತ್ತೆಗೆ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಕಲಬುರಗಿ ಪೊಲೀಸ್ ಕಮಿಷನರ್ ಆರ್ ಚೇತನ್ ಅವರು ಮಾರಣಾಂತಿಕ ದಾಳಿಯ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
'ಗುರುವಾರ ಬೆಳಗ್ಗೆ ವಕೀಲ ಹಿರಣ್ಣ ಗೌಡ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅವರ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ನಾವು ಎರಡು ತಂಡಗಳನ್ನು ರಚಿಸಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ವಕೀಲರ ಬಳಿ ಗನ್ ಇತ್ತು. ಅವರು ಅದನ್ನು ಬಳಸಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ. ಎಫ್‌ಎಸ್‌ಎಲ್ ವರದಿ ಬಂದ ನಂತರ ನಮಗೆ ಅದರ ಬಗ್ಗೆ ತಿಳಿಯುತ್ತದೆ' ಎಂದು ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ದಿನವೂ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಕಲಬುರಗಿ ಜಿಲ್ಲಾ ವಕೀಲರ ಸಂಘದ ಸದಸ್ಯರು ನಗರದ ಎಸ್‌ವಿಪಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.












Click it and Unblock the Notifications