ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ ಏಕೈಕ ಅರಸು ಟಿಪ್ಪು: ಖರ್ಗೆ
ಕಲಬುರಗಿ, ನವೆಂಬರ್ 10: ಟಿಪ್ಪು ಸುಲ್ತಾನ್ ಯುದ್ಧ ನೀತಿ ನಿಪುಣ, ತನ್ನ 14ನೇ ವಯಸ್ಸಿನಲ್ಲಿಯೇ ಯುದ್ಧಭೂಮಿಗೆ ಧುಮಿಕಿ ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿ ಏಕೈಕ ನಾಯಕ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಯುದ್ದ ನೀತಿ ನಿಪುಣನಾಗಿದ್ದ ಎನ್ನುವುದಕ್ಕೆ ಸಾಕ್ಷಿಯಾಗಿ ಆತ ಯುದ್ಧ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಫ್ರಾನ್ಸ್ ದೇಶದ ಜತೆ ಒಪ್ಪಂದ ಮಾಡಿಕೊಂಡಿದ್ದ.
ನಾಲ್ಕನೆಯ ಆಂಗ್ಲೋ ಮೈಸೂರು ಕದನದಲ್ಲಿ ಟಿಪ್ಪು ಶ್ರೀರಂಗಪಟ್ಟಣದಲ್ಲಿ ವೀರಮರಣವನ್ನಪ್ಪಿದಾಗ ಬ್ರಿಟಿಷರಿಗೆ ಅಂದು ಸುಮಾರು 7000 ತೋಪುಗಳು ಸಿಕ್ಕಿದ್ದವು ಎಂದರೆ ಟಿಪ್ಪು ಅಂದು ಬ್ರಿಟೀಷರ ವಿರುದ್ದದ ಹೋರಾಟಕ್ಕೆ ತಯಾರಿ ಮಾಡಿಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ ಎಂದರು.

ನೀರಾವರಿ ಯೋಜನೆ, ಆಣೆಕಟ್ಟು ಕಟ್ಟುವುದರ ಜೊತೆಗೆ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದ. ರೇಷ್ಮೆಗೆ ಉತ್ತೇಜನ ನೀಡಲು ರೇಷ್ಮೆ ಹುಳುಗಳನ್ನು ಮಸ್ಕಟ್ ಹಾಗೂ ಬಂಗಾಳಗಳಿಂದ ತಂದಿದ್ದ. ರೇಷ್ಮೇ ಬೆಳೆ ಮಾರಾಟ ಮಾಡಲು 34 ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದ್ದ.
ಬೆಂಗಳೂರಿನ ಲಾಲ್ ಬಾಗ್ ನಿರ್ಮಾಣ ಮಾಡಿದ್ದು ಟಿಪ್ಪು ಸುಲ್ತಾನ್. ಆದರೆ, ಇಂದಿನ ಜನರಿಗೆ ಇಂತಹ ಅರಸನ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿಲ್ಲ. ಟಿಪ್ಪು ಮೈಸೂರು ರಾಜ್ಯದ ಅನುಕೂಲಕ್ಕೆ ಬೇಕಾದಾಗ ಯುದ್ದ ಮಾಡಿದ್ದಾರೆ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ಟಿಪ್ಪು ವನ್ನು ವಿರೋಧಿಸುವವರು ಇತಿಹಾಸವನ್ನು ಓದಿಕೊಳ್ಳಲ ಎಂದು ಹೇಳಿದರು.
ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಆರೋಪ ಮಾಡುತ್ತಿದ್ದಾರೆ ಆದರೆ ಕಂಚಿ, ಶೃಂಗೇರಿ ಮಠ ಸೇರಿದಂತೆ ಹಲವಾರು ಮಠಗಳಿಗೆ ಧನ ಸಹಾಯ ಮಾಡಿದ್ದಾರೆ. ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ ಟಿಪ್ಪು ತನ್ನ ಸೈನ್ಯ ಕಳಿಸಿ ಮರಾಠರನ್ನು ಹಿಮ್ಮೆಟ್ಟಿಸಿ ಮಠವನ್ನು ರಕ್ಷಿಸಿದರು. ಕೇವಲ ಶೃಂಗೇರಿ ಮಾತ್ರವಲ್ಲದೇ ಮೈಸೂರು ತಾಲುಕಿನ 156 ಮಠಗಳಿಗೆ ಆರ್ಥಿಕ ಸಹಾಯ ಮಾಡಿದ್ದರು ಎಂದರು.












Click it and Unblock the Notifications