ಸ್ವಾಮಿ ವಿವೇಕಾನಂದರ ಎರಡನೇ ಅವತಾರವೇ ನರೇಂದ್ರ ಮೋದಿ: ಡಾ. ಜಾಧವ್
ಕಲಬುರಗಿ, ಮೇ 5: ಸ್ವಾಮಿನಿಷ್ಠೆಯ ಪರಾಕಾಷ್ಠೆ ಎನ್ನಬಹುದಾದ ಹೇಳಿಕೆಯೊಂದರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್, ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಮಿ ವಿವೇಕಾನಂದ ಅವರಿಗೆ ಹೋಲಿಸಿದ್ದಾರೆ.
ಚಿಂಚೋಳಿ ಅಸೆಂಬ್ಲಿ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಮತ್ತು ತಮ್ಮ ಸಹೋದರರೂ ಆಗಿರುವ ಅವಿನಾಶ್ ಜಾಧವ್ ಪರ ಮತಯಾಚಿಸುತ್ತಾ, ಕಾಂಗ್ರೆಸ್ ಪಕ್ಷವನ್ನು ನಾನು ತೊರೆಯುವ ಹಿಂದೆ, ಯಾವುದೇ ಸ್ವಾರ್ಥ ಅಡಗಿರಲಿಲ್ಲ ಎಂದು ಉಮೇಶ್ ಜಾಧವ್ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರು ನಮ್ಮ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು. ಈ ಶತಮಾನದಲ್ಲಿ ವಿವೇಕಾನಂದರು, ಮೋದಿಯ ರೂಪದಲ್ಲಿ ಜನಿಸಿ, ಇಡೀ ವಿಶ್ವ ಭಾರತದತ್ತ ತಿರುಗಿ ನೋಡುವಂತೆ ಮೋದಿ ಮಾಡುತ್ತಿದ್ದಾರೆ ಎಂದು ಡಾ. ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದಾಗ, ಸಚಿವ ಪ್ರಿಯಾಂಕ್ ಖರ್ಗೆ, ಪಂಚತಾರಾ ಹೊಟೇಲ್ ನಲ್ಲಿ ಸರಕಾರೀ ಕಾರ್ಯಕ್ರಮ ಆಯೋಜಿಸಿದ್ದ ವಿಚಾರ ಗೊತ್ತೇ ಇದೆ. ಈ ಕಾರಣಕ್ಕಾಗಿ ಅವರನ್ನು ಪಕ್ಷದಿಂದ ವಜಾ ಮಾಡಬೇಕೆಂದು ನಾನು ಒತ್ತಾಯಿಸಿದಾಗ, ನನ್ನ ವಿರುದ್ದವೇ ತಿರುಗಿಬಿದ್ದರು ಎಂದು ಉಮೇಶ್ ಜಾಧವ್ ಬೇಸರ ವ್ಯಕ್ತ ಪಡಿಸಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಳ್ಳಲು ಎರಡು ಬೇಡಿಕೆಯನ್ನು ಇಟ್ಟಿದ್ದೆ, ಅದನ್ನು ಪಕ್ಷ ಈಡೇರಿಸದೇ ಇದ್ದಿದ್ದರಿಂದ ನಾನು ಕಾಂಗ್ರೆಸ್ ತೊರೆಯಬೇಕಾಯಿತು ಎಂದು ಡಾ. ಉಮೇಶ್ ಜಾಧವ್ ಹೇಳಿದ್ದಾರೆ.
ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಉಮೇಶ್ ಜಾಧವ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಹೆವಿವೈಟ್ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧಿಸಿದ್ದಾರೆ. ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಚುನಾವಣೆ ಈಗಾಗಲೇ ಮುಗಿದಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications