ಪ್ರಧಾನಿ ಮಾಡಿ ನಿಮ್ಮ ಕಾವಲುಗಾರನಾಗ್ತೇನೆ ಎಂದು, ಆಗಿದ್ದು ಅಂಬಾನಿ, ಅದಾನಿ ಚೌಕೀದಾರ: ರಾಹುಲ್
ಕಲಬುರಗಿ, ಮಾರ್ಚ್ 18: ನನ್ನನ್ನು ದೇಶದ ಪ್ರಧಾನಿ ಮಾಡಿ ನಾನು ನಿಮ್ಮ ಕಾವಲುಗಾರನಾಗುತ್ತೇನೆ ಎಂದು ಮೋದಿ ಸುಳ್ಳು ಭರವಸೆ ಕೊಟ್ಟು ಬಳಿಕ ಅಂಬಾನಿ, ಅದಾನಿಯ ಕಾವಲುಗಾರರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಎರಡನೇ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮನ್ನು ರಕ್ಷಣೆ ಮಾಡುತ್ತೇನೆ ನಿಮ್ಮ ಕಾವಲುಗಾರನಾಗಿರುತ್ತೇನೆ ಎಂದು ನಂಬಿಸಿ ಪ್ರಧಾನಿ ಹುದ್ದೆಗೆ ಏರಿದ ಮೋದಿ ಬಳಿಕ ದೇಶವನ್ನು ಕೊಳ್ಳೆ ಹೊಡೆಯಲು ಸಹಕರಿಸಿ ಅಂಬಾನಿ, ಅದಾನಿ ಅವರ ಕಾವಲುಗಾರರಂತೆ ವರ್ತಿಸಿದ್ದಾರೆ ಎಂದರು.
ಕರ್ನಾಟಕಕ್ಕೆ ಸಿಗಬೇಕಾಗಿದ್ದ ಯುದ್ಧ ವಿಮಾನ ತಯಾರಿಕಾ ಒಪ್ಪಂದವನ್ನು ರದ್ದುಗೊಳಿಸಿದ ನಮ್ಮ ಕಳ್ಳ ಕಾವಲುಗಾರ ಮೋದಿಯವರು ಅದನ್ನು ಯಾವುದೇ ಅನುಭವ ಇಲ್ಲದ ಒಂದು ವಿಮಾನವನ್ನೂ ತಯಾರಿಸದ ಅನಿಲ್ ಅಂಬಾನಿಗೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಹೇಳುತ್ತದೆ ಸಿಬಿಐ ನಿರ್ದೇಶಕರನ್ನು ವಾಪಸ್ ತನ್ನಿ ಎಂದು.

ಆದರೆ ನಮ್ಮ ಚೌಕೀದಾರ ಎಷ್ಟೊಂದು ಕಪಟರೆಂದರೆ ಅವರನ್ನು ವಾಪಸ್ ಕರೆತಂದ ಒಂದೇ ಘಂಟೆಯಲ್ಲಿ ಮತ್ತೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುತ್ತಾರ ಎಂದು ಹೇಳಿದರು.
ಇದೀಗ ದೇಶದ ಎಲ್ಲಾ ಬಿಜೆಪಿ ನಾಯಕರನ್ನು ಇವರು ಚೌಕೀದಾರರನ್ನಾಗಿ ಮಾಡಿದ್ದಾರೆ. ಆದರೆ ಇವರನ್ನು ಹಿಂಬಾಲಿಸಿ ಚೌಕೀದಾರ್ ಎಂದು ಕರೆದುಕೊಂಡ ಎಲ್ಲರೂ ಸಹ ಕಳ್ಳರೇ ಆಗಿದ್ದಾರೆ ಎಂಬುದು ಸತ್ಯವಾಗಿದೆ.ಕಾಂಗ್ರೆಸ್ ಪಕ್ಷವು ಜಾರಿಗೊಳಿಸಿದ 371 ಜೆ ಕಾಯ್ದೆಯಿಂದ ಮತ್ತು ರೈತರ ಸಾಲಮನ್ನಾದಂತಹ ಕಾರ್ಯಕ್ರಮದಿಂದ ಕರ್ನಾಟಕದ ಬಹಳಷ್ಟು ಜನರಿಗೆ ಉಪಯೋಗವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಈಗಿರುವ ಜನ ವಿರೋಧಿ, ಸಣ್ಣ ವ್ಯಾಪಾರಿಗಳ ವಿರೋಧಿಯಾಗಿರುವ ಜಿಎಸ್ ಟಿಯನ್ನು ರದ್ದುಗೊಳಿಸಿ ಜನಪರವಾದ ಮತ್ತು ಜನರಿಗೆ ಹೊರೆ ಆಗದಂತಹ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ. ಇದು ಕಾಂಗ್ರೆಸ್ ಪಕ್ಷವು ತಮಗೆ ನೀಡುತ್ತಿರುವ ವಚನವಾಗಿದೆ ಎಂದು ಹೇಳಿದರು.












Click it and Unblock the Notifications