ಮೈತ್ರಿ ಸರ್ಕಾರಕ್ಕೆ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು : ಎಚ್‌ಡಿಕೆ
Recommended Video
ಕಲಬುರಗಿ, ಮೇ 14 : 'ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಅವರೇ ಆಗಬೇಕಿತ್ತು. ಆದರೆ, ಹೈಕಮಾಂಡ್‌ಗೆ ಕೊಟ್ಟ ಮಾತಿಗೆ ಬದ್ಧರಾಗಿದ್ದಾರೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಂಗಳವಾರ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದರು. 'ಚಿಂಚೋಳಿ ಅಭಿವೃದ್ಧಿಗೆ ಬೇಕಾದ ಕೆಲಸವನ್ನು ಮೈತ್ರಿ ಸರ್ಕಾರ ಮಾಡಲಿದೆ' ಎಂದು ಜನರಿಗೆ ಭರವಸೆ ನೀಡಿದರು.
'ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜಕೀಯವಾಗಿ ಬೆಳೆದವರು ಇಂದು ಅವರ ವಿರುದ್ಧವೇ ತೊಡೆ ತಟ್ಟಿ ಭಾಷಣ ಮಾಡುತ್ತಿದ್ದಾರೆ. ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಪ್ರಾಮಾಣಿಕ ಕೊಡುಗೆ ಕೊಟ್ಟ ಖರ್ಗೆ ಅವರನ್ನು ಟೀಕಿಸಲಾಗುತ್ತಿದೆ' ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮೇ 19ರಂದು ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಸುಭಾಷ್ ರಾಥೋಡ್ ಕಣದಲ್ಲಿದ್ದಾರೆ. ಬಿಜೆಪಿಯಿಂದ ಅವಿನಾಶ್ ಜಾಧವ್ ಅಭ್ಯರ್ಥಿಯಾಗಿದ್ದಾರೆ. ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದಾಗಿ ಚಿಂಚೋಳಿಯಲ್ಲಿ ಉಪ ಚುನಾವಣೆ ಎದುರಾಗಿದೆ. ಉಮೇಶ್ ಜಾಧವ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಡುವಿನ ಪ್ರತಿಷ್ಠೆ ಉಪ ಚುನಾವಣೆಯಲ್ಲಿ ಅಡಗಿದೆ.
ಕುಮಾರಸ್ವಾಮಿ ಹೇಳಿದ್ದೇನು?
* ಮಾಧ್ಯಮಗಳ ವರದಿ ನೋಡಿ ತಲೆ ಕೆಡಿಸಿಕೊಳ್ಳಬೇಡಿ. ಯಡಿಯೂರಪ್ಪ 11 ತಿಂಗಳಿನಿಂದ ಡೆಡ್‌ಲೈನ್ ಕೊಡುತ್ತಲೇ ಬಂದಿದ್ದಾರೆ. ಮೇ 23ಕ್ಕೆ ಸಮ್ಮಿಶ್ರ ಸರ್ಕಾರ ರಚನೆಯಾಗಿ 1 ವರ್ಷವಾಗುತ್ತದೆ.
* ಸಾಲಮನ್ನಾ ಮಾಡದಿದ್ದರೆ ಪ್ರತಿಭಟನೆ ಮಾಡುತ್ತಾರಂತೆ, ಯಡಿಯೂರಪ್ಪ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಾರೆ. ಮೇ 23ಕ್ಕೆ ಮತ್ತೊಂದು ಡೆಡ್‌ಲೈನ್ ಕೊಡುತ್ತಾರೆ.
* ಚಿಂಚೋಳಿ ವಿಧಾನಸಭಾ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿ ಕೆಲಸ ಮಾಡಲಾಗುತ್ತದೆ. ಚಿಂಚೋಳಿ ಅಭಿವೃದ್ಧಿಗೆ ಏನು ಬೇಕೋ ಅದನ್ನು ಮಾಡುತ್ತೇವೆ.












Click it and Unblock the Notifications