ಕಾಂಗ್ರೆಸ್ ನಾಯಕತ್ವದ ಹೊಣೆ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ?
Recommended Video
ಕಲಬುರಗಿ, ಜೂನ್ 12: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ತೋರಿದ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ರಾಹುಲ್ ಗಾಂಧಿ ಸಿದ್ಧರಾಗಿದ್ದು, ಸದ್ಯಕ್ಕೆ ಅವರ ಮನವೊಲಿಸಿ, ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ಒತ್ತಾಯಿಸಲಾಗಿದೆ.
ಆದರೆ ಕಾಂಗ್ರೆಸ್ ಅನುಭವಿ ಹಿರಿಯ ನಾಯಕರೊಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಚಿಂತನೆ ನಡೆಸುತ್ತಿದ್ದು, ಕಳೆದ ಲೋಕಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಎಐಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲು ಕಾಂಗ್ರೆಸ್ ನಾಯಕರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖರ್ಗೆ, ಬಿಜೆಪಿಯ ಉಮೇಶ್ ಯಾದವ್ ಅವರ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದರು. ಆದರೂ ಲೋಕಸಭೆ ಪ್ರತಿಪಕ್ಷ ನಾಯಕರಾಗಿ ಆಡಳಿತ ಪಕ್ಷದ ಹುಳುಕುಗಳ ವಿರುದ್ಧ ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಿದ ಕಾರಣ ಅವರನ್ನು ಎಐಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಇಳಿಯಲು ರಾಹುಲ್ ಗಾಂಧಿ ಅವರು ನಿರ್ಧರಿಸಿದ್ದರಾದರೂ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ನ ವರ್ಚಸ್ಸು ಮತ್ತಷ್ಟು ಕಡಿಮೆಯಾಗಬಹುದು ಎಂದು ಅವರನ್ನು ಅಧ್ಯಕ್ಷ ಸ್ಥಾನದಲ್ಲೇ ಉಳಿಸಿಕೊಂಡು, ಕಾರ್ಯಾಧ್ಯಕ್ಷ ಪಟ್ಟವನ್ನು ಸೃಷ್ಟಿಸಿ, ಅಲ್ಲಿ ಖರ್ಗೆ ಅವರನ್ನು ಕೂರಿಸಲು ನಿರ್ಧರಿಸಲಾಗಿದೆ.
ಆದರೆ ಕೆಲವು ಮೂಲಗಳ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣದಿಂದ ಕೆಲ ಕಾಲ ಬಿಡುವು ಪಡೆದು ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದ ಮೇಲೂ ಖರ್ಗೆ ಅವರ ಕಣ್ಣಿಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇಬ್ಬರಿಗೂ ಅಸಮಾಧಾನವಿದ್ದು, ಖರ್ಗೆ ಅವರು ನಾಯಕತ್ವ ವಹಿಸಿಕೊಳ್ಳುವುದಾದರೆ ಸಮ್ಮಿಶ್ರ ಸರ್ಕಾರದಲ್ಲಿನ ಭಿನ್ನಾಭಿಪ್ರಾಯವೂ ಸರಿಹೋಗುತ್ತದೆ ಎಂಬ ಭಾವನೆ ಸೃಷ್ಟಿಯಾಗಿದೆ. ಖರ್ಗೆ ಅವರು ಎಂದೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಇತ್ತೀಚೆಗಷ್ಟೇ ಬಹಿರಂಗ ಸಭೆಯಲ್ಲೇ ಕುಮಾರಸ್ವಾಮಿ ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಸೋತರೂ ಈ ಎಲ್ಲಾ ಬೆಳವಣಿಗೆಗಳಿಂದಾಗಿ ಖರ್ಗೆ ವರ್ಚ್ಚಸ್ಸು ರಾಜ್ಯ ರಾಜಕಾರಣ ಮತ್ತು ರಾಷ್ಟ್ರ ರಾಜಕಾರಣದಲ್ಲೂ ಹೆಚ್ಚಿದ್ದು, ಅವರಿಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.












Click it and Unblock the Notifications