ಕಲಬುರಗಿ; ಉತ್ಸಾಹದ ಮತದಾನ, ಶೇ 65.22ರಷ್ಟು ಪ್ರಮಾಣ ದಾಖಲು
ಕಲಬುರಗಿ, ಮೇ 11; ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿದೆ. ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತದಾನದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು ಶೇ 65.22ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಶೇ 65.22ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇ 63.73ರಷ್ಟು ಮತದಾನವಾಗಿತ್ತು. 2013ರಲ್ಲಿ ಶೇ 64.13 ಮತದಾನ ನಡೆದಿತ್ತು. ಕಳೆದ ಎರಡು ಚುನಾವಣೆಗೆ ಹೋಲಿಕೆ ಮಾಡಿದರೆ ಈ ಸಲ ಮತದಾನ ಪ್ರಮಾಣ ಹೆಚ್ಚಾಗಿದೆ.
ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಯಶವಂತ ವಿ. ಗುರುಕರ್ ಪತ್ನಿ ಇಂಧುಶ್ರೀ ಗುರುಕರ್ ಅವರೊಂದಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 61ರಲ್ಲಿ ಮತ ಚಲಾಯಿಸಿದರು. ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಮತ ಎಣಿಕೆ ಶನಿವಾರ ನಡೆಯಲಿದೆ.

ವಿಧಾನಸಭಾ ಕ್ಷೇತ್ರಗಳು; ಜಿಲ್ಲೆಯಲ್ಲಿ ಅಫಜಲಪುರ, ಜೇವರ್ಗಿ, ಚಿತ್ತಾಪುರ(ಮೀಸಲು), ಸೇಡಂ, ಚಿಂಚೋಳಿ (ಮೀಸಲು), ಕಲಬುರಗಿ ಗ್ರಾಮೀಣ (ಮೀಸಲು), ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಆಳಂದ ಕ್ಷೇತ್ರಗಳಿವೆ.
ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಬೆಳಗ್ಗೆ 9 ಗಂಟೆಗೆ 6.56 ರಷ್ಟು, 11 ಗಂಟೆಗೆ ಶೇ. 17.95, ಮಧ್ಯಾಹ್ನ 1 ಗಂಟೆಗೆ ಶೇ 30.94, ಮಧ್ಯಾಹ್ನ 3 ಗಂಟೆಗೆ 46.46, ಸಾಯಂಕಾಲ 5 ಗಂಟೆಗೆ ಶೇ 58.34, ಕೊನೆಯದಾಗಿ ಮತದಾನ ಮಗಿದ ನಂತರ ಅಂದಾಜು ಒಟ್ಟಾರೆ ಶೇ. 66ರಷ್ಟು ಮತದಾನವಾಗಿದೆ.
ಜಿಲ್ಲಾಡಳಿತ ಮತದಾನಕ್ಕೆ ಮಹಿಳೆಯರು, ವಿಶೇಷಚೇತನರು ಹಾಗೂ ಯುವ ಸಮೂಹವನ್ನು ಆಕರ್ಷಿಸಲು 72 ವೈವಿಧ್ಯಮಯ ಮಾದರಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಿತ್ತು. ಈ ಮತಗಟ್ಟೆಗಳು ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 5ರಂತೆ ಜಿಲ್ಲೆಯಾದ್ಯಂತ 45 ಮಹಿಳಾ ಸಖಿ ಪಿಂಕ್ ಬೂತ್ ಸ್ಥಾಪಿಸಿದ್ದು, ಮಹಿಳಾ ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸಿದರು.
ಪ್ರತಿ ವಿಧಾನಸಭೆಗೆ ತಲಾ ಒಂದರಂತೆ ಸ್ಥಳೀಯ ಇತಿಹಾಸ, ಮಹಿಮೆ ಸಾರುವ 9 ಥೀಮ್ ಬೂತ್ ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳ ಗೋಡೆಗಳ ಮೇಲೆ ಕಲಬುರಗಿ ಕೋಟೆ, ಮಳಖೇಡ ಕೋಟೆ, ಭೀಮಾ ನದಿ, ತೊಗರಿ, ಹತ್ತಿ, ಕೆಂಬಾಳೆ ಚಿತ್ರಕಲೆಗಳು ಮತದಾರರನ್ನು ಸೆಳೆದವು. ಇದಲ್ಲದೇ ಕ್ಷೇತ್ರಕ್ಕೊಂದು ಯುವ ಬೂತ್, ವಿಶೇಷಚೇತನ ಬೂತ್ ಸಹ ಸ್ಥಾಪಿಸಲಾಗಿತ್ತು.
ಹಕ್ಕು ಚಲಾಯಿಸಿದ ಯುವಕರು; ಈ ಬಾರಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಯುವಕ, ಯುವತಿಯರು ಎಪಿಕ್ ಡಿಜಿಟಲ್ ಕಾರ್ಡ್‍ದೊಂದಿಗೆ ಮತಗಟ್ಟೆಗೆ ಆಗಮಿಸಿ ತುಂಬಾ ಉತ್ಸಾಹದಿಂದ ಮತ ಚಲಾವಣೆ ಮಾಡಿದರು.
ಆಳಂದದ ಮತಗಟ್ಟೆ ಸಂಖ್ಯೆ 9ರಲ್ಲಿ ಮೊದಲನೇ ಬಾರಿಗೆ ಮತ ಚಲಾವಣೆ ಮಾಡಿದ ಯುವ ಮತದಾರೆ ಶ್ರದ್ಧಾ ಗುಂಡಪ್ಪ ಬನಶೆಟ್ಟಿ, "ಪ್ರಜೆಗಳಿಂದ ಆಯ್ಕೆಯಾಗುವ ಪ್ರಜಾ ಸರ್ಕಾರಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಲು ನಾನು ನನ್ನ ಮತ ಚಲಾಯಿಸಿದ್ದೇನೆ. ಮೊದಲನೇ ಬಾರಿಗೆ ಮತ ಚಲಾಯಿಸಿದ್ದು ನನಗೆ ಖುಷಿ ತಂದಿದೆ" ಎಂದಳು.
ಮತದಾನದ ಬಳಿಕ ಮತಯಂತ್ರಗಳನ್ನು ಮತ್ತು ಮಹತ್ವದ ದಾಖಲೆಗಳನ್ನು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಇಡಲಾಗಿದೆ. ಮೇ 13ರ ಶನಿವಾರ ಇಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ.












Click it and Unblock the Notifications