ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ!
ಕಲಬುರಗಿ, ಜೂನ್ 20 : ಅಂದು ಅವರು ಎಲ್ಲಮ್ಮ ದೇವಾಲಯಕ್ಕೆ ಹೊರಟಿದ್ದರು. ರಸ್ತೆಯಲ್ಲಿ ಗಾಯಗೊಂಡು, ಕಣ್ಣೀರು ಸುರಿಸುತ್ತಾ ಒಂದು ಜೀವ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಅದಕ್ಕೆ ಪ್ರೀತಿಯಿಂದ ಉಪಚಾರ ಮಾಡಿದರು. ಇಂದು ಅವರಿಬ್ಬರೂ ಉತ್ತಮ ಸ್ನೇಹಿತರು.
ನಾವು ಹೇಳುತ್ತಿರುವುದು ಒಂದು ಕೋತಿಯ ಕಥೆ. ಅಂದು ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ ಕೋತಿ ಇಂದು ಸುಧಾರಿಸಿಕೊಳ್ಳುತ್ತಿದೆ. ಮರದಿಂದ ಬಿದ್ದು ಆಶ್ರಯ ಕಳೆದುಕೊಂಡಿದ್ದ ಕೋತಿಗೆ ಮನೆ, ಪ್ರೀತಿಯಿಂದ ನೋಡಿಕೊಳ್ಳುವ ಜನರು ಸಿಕ್ಕಿದ್ದಾರೆ.
ಕೋತಿಯನ್ನು ರಕ್ಷಿಸಿ ಅದಕ್ಕೆ ಮರುಜೀವ ಕೊಟ್ಟವರು ಕಲಬುರಗಿಯ ಯಶೋಧಾ. ಪೊಲೀಸ್ ಇಲಾಖೆಯಲ್ಲಿ ಎಎಸ್‌ಐ ಆಗಿರುವ ಅವರು ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಕೋತಿಗೆ ನೆರವಾದರು. ಅದಕ್ಕೊಂದು ಆಸರೆಕೊಟ್ಟು ನೆರಳಾದರು.

ಅಂದು ಯಶೋಧಾ ಅವರು ಯಲ್ಲಮ್ಮ ದೇವಾಲಯಕ್ಕೆ ಹೊರಟಿದ್ದರು. ವಿದ್ಯುತ್ ಶಾಕ್ ಹೊಡೆದಿದ್ದ ಕೋತಿ ಮರದಿಂದ ಕೆಳಗೆ ಬಿದ್ದಿತ್ತು. ಕಾಲು ಮತ್ತು ಮೈಗೆ ಗಾಯವಾಗಿತ್ತು. ರಸ್ತೆಯಲ್ಲಿನ ಜನರು ಅದನ್ನು ನೋಡುತಿದ್ದರು. ಆದರೆ, ಯಾರು ನೆರವಿಗೆ ಧಾವಿಸಲಿಲಲ್ಲ.
ಯಶೋಧಾ ಅವರು ಕೋತಿಯನ್ನು ಎತ್ತಿಕೊಂಡು ಸಂತೈಸಿದರು. ಕಣ್ಣೀರು ಇಡುತ್ತಿದ್ದ ಅದನ್ನು ನೋಡಿ ಕನಿಕರಗೊಂಡರು. ಮನೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ವೈದ್ಯರ ಬಳಿ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸಿದರು.
ಅಂದು ಗಂಭೀರ ಸ್ಥಿತಿಯಲ್ಲಿದ್ದ ಕೋತಿಯನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸಿದರು. ಮನೆಯಲ್ಲಿಯೇ ಅದನ್ನು ಸಾಕಲು ಆರಂಭಿಸಿದರು. ಇಂದು ಕೋತಿ ಸುಧಾರಿಸಿಕೊಳ್ಳುತ್ತಿದೆ. ಮೈ ಮೇಲಿನ ಗಾಯ ವಾಸಿಯಾಗುತ್ತಿದೆ.
#Karnataka: Asst. sub-inspector Yashodha rescued a monkey that was injured due to an electric shock, in Kalaburagi, says, "Moment I saw the monkey was injured, I took it to the hospital & then brought it home. Since then I have been taking care of it & it gives me immense peace." pic.twitter.com/ljslP0fkZZ
— ANI (@ANI) June 18, 2018
ಇಂದು ಕೋತಿ ಮತ್ತು ಯಶೋಧಾ ಉತ್ತಮ ಸ್ನೇಹಿತರು. ಕಷ್ಟಕಾಲದಲ್ಲಿ ಜೊತೆಯಾದ ಯಶೋಧಾ ಅವರ ಜೊತೆಗೆ ಅದು ಸಂತಸದಿಂದ ಇದೆ. 'ಅದು ಮನೆಯ ಮಕ್ಕಳ ಥರ ಇದೆ' ಎಂದು ಯಶೋಧಾ ಅವರು ಸಂತಸ ವ್ಯಕ್ತಪಡಿಸುತ್ತಾರೆ.












Click it and Unblock the Notifications