ಬಿಜೆಪಿಯವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ: ಉಮೇಶ್ ಜಾಧವ್
ಕಲಬುರಗಿ, ಮಾರ್ಚ್ 22: ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ನನಗೆ ಟಿಕೆಟ್ ನೀಡಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ರಾಜ್ಯದ ಕಾಂಗ್ರೆಸ್ ಮುಖಂಡರ ವಿರುದ್ಧ ಸಿಡಿದೆದ್ದಿದ್ದ ಉಮೇಶ್ ಜಾಧವ್, ಬಿಜೆಪಿ ತೆಕ್ಕೆಗೆ ಜಾರಿದ್ದರು. ಕಾಂಗ್ರೆಸ್ ತೊರೆದು ಬಂದರೆ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ಬಿಜೆಪಿ ಭರವಸೆ ಕೊಟ್ಟಿತ್ತು ಎನ್ನಲಾಗಿದೆ. ಹೈಡ್ರಾಮಾಗಳ ಬಳಿಕ ಕೊನೆಗೂ ಬಿಜೆಪಿ ಸೇರ್ಪಡೆಯಾದ ಜಾಧವ್ ಅವರಿಗೆ ಪಕ್ಷ ಲೋಕಸಭೆಯ ಟಿಕೆಟ್ ನೀಡಿದೆ.
ಜಾಧವ್ ಅವರು ಕಲಬುರಗಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದು, ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಈ ನಡುವೆ ಉಮೇಶ್ ಜಾಧವ್ ಅವರು ಸಲ್ಲಿಸಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅದಕ್ಕೆ ಮೊದಲೇ ಅವರು ಪಕ್ಷ ತ್ಯಜಿಸಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಾಧ್ಯತೆ ಇದೆ. ಇದರಿಂದ ಅವರ ಸ್ಪರ್ಧೆಗೆ ತೊಡಕಾಗಲಿದೆ ಎನ್ನಲಾಗಿದೆ.
ಆದರೆ, ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಅಂಗೀಕರಿಸದೆಯೇ ಅವರನ್ನು ಅನರ್ಹಗೊಳಿಸಿದರೂ ಲೋಕಸಭೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆಯಾಗಲಾರದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಈ ಅಭಿಪ್ರಾಯವನ್ನು ಜಾಧವ್ ಕೂಡ ವ್ಯಕ್ತಪಡಿಸಿದ್ದಾರೆ. ಅನರ್ಹತೆ ಆದರೂ ನಾನು ಸ್ಪರ್ಧಿಸಬಹುದು. ಸಂಘರ್ಷ ಮಾಡಿಯಾದರೂ ನನ್ನ ಹಕ್ಕನ್ನು ಪಡೆಯುತ್ತೇನೆ. ಕೆಲವರು ನನಗೆ ತೊಂದರೆ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಒಳ್ಳೆಯವರಿದ್ದಾರೆ. ವಿಶೇಷ ಬೇಬಿ ಇದೆ. ಹೆರಿಗೆ ವೇಳೆ ತೊಂದರೆಯಾಗಬಾರದು. ಹೀಗಾಗಿ ಸ್ಪೀಕರ್ ಸರಿಯಾದ ಕ್ರಮ ಅನುಸರಿಸುತ್ತಿದ್ದಾರೆ ಎಂದು ಜಾಧವ್ ಸೂಚ್ಯವಾಗಿ ಹೇಳಿದ್ದಾರೆ.












Click it and Unblock the Notifications