ಕಲಬುರಗಿ ಕುಷ್ಠ ರೋಗಿಗಳ ಪಾಲಿನ ದೀಪಾವಳಿಯ ಬೆಳಕು ಹಣಮಂತ ಬಿರಾದಾರ
ಕಲಬುರಗಿ, ಅಕ್ಟೋಬರ್ 15: ಇಂದಿನ ಯುವಕರು ಸ್ವಲ್ಪ ಹೇಸಿಗೆ ಕಂಡರೆ ದೂರ ಸರಿಯುತ್ತಾರೆ. ಆದರೆ ತನ್ನ ಬಂದು ಬಳಗವಲ್ಲದೆ ಬೇರೆ ಊರಿನಿಂದ ಬಂದ ವೃದ್ಧ ಮಹಿಳೆಯರು ಮತ್ತು ವೃದ್ದ ಪುರುಷರ ಸೇವೆ ಮಾಡುತ್ತ ಜೀವನ ಕಳೆಯುತ್ತಿದ್ದಾರೆ ಈ ಆಟೋ ಚಾಲಕ. ಅವರ ಹೆಸರೇ ಹಣಮಂತ ಬಿರಾದಾರ.
ಕಲಬುರಗಿಯ ಮಹಾತ್ಮಾ ಗಾಂಧಿ ಆಶ್ರಯ ಕಾಲೋನಿ ನಿವಾಸಿಯಾದ ಹಣಮಂತ ಬಿರಾದಾರ ಮಾನವೀಯತೆಯ ಪ್ರತೀಕವಾಗಿ ಕಾಣಿಸುತ್ತಾರೆ. ಕಳೆದ 20 ವರ್ಷಗಳಿಂದ ಇಲ್ಲಿನ ಕುಷ್ಠ ರೋಗಿಗಳಿಗೆ ತಮ್ಮದೇ ರೀತಿಯಲ್ಲಿ ಇವರು ಸೇವೆ ಮಾಡುತ್ತಾ ಇವರ ಬದುಕಿನಲ್ಲಿ ದೀಪಾವಳಿಯ ಬೆಳಕನ್ನು ತಂದಿದ್ದಾರೆ.
ಒಂದೂ ದಿನವೂ ಇವರ ಸೇವೆ ತಪ್ಪಿಲ್ಲ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಬಿರಾದಾರರು ತಮ್ಮ ದುಡಿಮೆಯಲ್ಲಿ ಪ್ರತಿ ದಿನ 150 ರಿಂದ 200 ರೂಪಾಯಿಗಳನ್ನು ಈ ರೋಗಿಗಳಿಗೆ ಚಿಕಿತ್ಸೆಗೆಂದೇ ಮೀಸಲಿಡುತ್ತಾರೆ.

ತಾಯಿಗೆ ಇತ್ತು ಕುಷ್ಠ ರೋಗಿ
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕುಗ್ರಾಮದಿಂದ ಬಂದವರು ಹಣಮಂತ ಬಿರಾದಾರ. ಇವರ ತಂದೆ-ತಾಯಿ ಕಳೆದ 20 ವರ್ಷಗಳ ಹಿಂದೆ ಕಲಬುರಗಿ ನಗರಕ್ಕೆ ಕೂಲಿ ಕೆಲಸಕ್ಕೆ ಆಗಮಿಸಿದ್ದರು. ಇವರ ತಾಯಿಗೆ ಕುಷ್ಠ ರೋಗ ಬಂದ ಕಾರಣ ಅವರ ತಂದೆ, ನನಗೂ ಕೂಡ ಈ ರೋಗ ಬರುತ್ತದೆ ಎಂದು ಅವರ ತಾಯಿ ಮತ್ತು ಮಗನನ್ನು ಬಿಟ್ಟು ನಡೆದಿದ್ದರು.

ತಾಯಿ ಸೇವೆಯೊಂದಿಗೆ ಕುಷ್ಠ ರೋಗಿಗಳ ಸೇವೆ
ನಂತರ ಇವರ ತಾಯಿ ದೇವಸ್ಥಾನಗಳ ಮುಂದೆ ಬಿಕ್ಷೆ ಬೇಡುತ್ತಿದ್ದರು. ಆಕೆಯ ಕೊನೆಗಾಲದಲ್ಲಿ ಇಲ್ಲಿನ ಕುಷ್ಠ ರೋಗಿಗಳು ತಮ್ಮ ಗುಂಡಿಸಲುಗಳಿಗೆ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಹಣಮಂತ ಬಿರಾದಾರರು ತಮ್ಮ ತಾಯಿ ಸೇವೆ ಮಾಡಲು ಆರಂಭಿಸಿದ್ದರು.
ಮೊದಲಿಗೆ 20 ರೂಪಾಯಿಂದ ಪ್ರಾರಂಭವಾದ ಇವರ ಸೇವೆ ನಿಧಾನವಾಗಿ ದೊಡ್ಡ ಮಟ್ಟಕ್ಕೆ ಬೆಳೆಯಿತು. ಕುಷ್ಠರೋಗಿಗಳಿಗಾಗಿ ಗಾಂಧಿ ಆಶ್ರಯ ಕಾಲೋನಿಯನ್ನು ಕಟ್ಟಿಸಿ, ಅಲ್ಲಿಯೇ ಆಸ್ಪತ್ರೆಯೊಂದನ್ನು ತೆರೆದರು. ತಾವೇ ಅಲ್ಲಿ ಪ್ರತಿದಿನ ಚಿಕಿತ್ಸೆ ಕೊಡಿಸಲು ಆರಂಭಿಸಿದರು.

ಕಾಲೋನಿ ಯುವಕರಿಗೆ ಸ್ವ ಉದ್ಯೋಗ
ಮಹಾತ್ಮಾ ಗಾಂಧಿ ಆಶ್ರಯ ಕಾಲೋನಿಯಲ್ಲಿರುವ 180 ಮನೆಗಳ ಯುವಕರಿಗೆ ಸ್ವ ಉದ್ಯೋಗ ನಡೆಸಲು ಸರಕಾರದಿಂದ ಸಾಲ ಸೌಲಭ್ಯ ನೀಡಿದ್ದಾರೆ. ಇದೀಗ ಈ ಯುವಕರು ಸ್ವ ಉದ್ಯೋಗ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ.
ನಗರದ ವಿವಿಧ ದೇವಾಲಯದ ಮುಂದೆ ಭಿಕ್ಷಾಟನೆ ಮಾಡುತ್ತಿದ್ದ ನೂರಾರು ಯುವಕರು ಇವತ್ತು ವಿವಿಧ ರೀತಿಯಲ್ಲಿ ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ದುಡಿದ ಹಣದಲ್ಲೊಂದಿಷ್ಟು ಸೇವೆಗೆ
ಹಣಮಂತ ಬಿರಾದಾರ ಅವರಿಗೆ ಒಟ್ಟು 4 ಜನ ಮಕ್ಕಳು. ಇವರಲ್ಲಿ ಒಬ್ಬಳು ಮಗಳಿಗೆ ಮದುವೆಯಾಗಿದೆ. ಒಬ್ಬ ಮಗ ನಗರದಲ್ಲಿ ಸ್ವ ಉದ್ಯೋಗ ಮಾಡುತ್ತಿದ್ದಾನೆ. ಇನ್ನೂ ಒಬ್ಬ ಆಟೋ ಡ್ರೈವರ್ ಆಗಿ ಸ್ವ ಉದ್ಯೋಗ ಮಾಡುತ್ತಿದ್ದಾನೆ.
ಹೀಗೆ ಕುಟುಂಬಕ್ಕೆ ತಿಂಗಳಿಗೆ ಸುಮಾರು 15ರಿಂದ 20 ಸಾವಿರ ರೂಪಾಯಿವರೆಗೆ ಆದಾಯವಿದೆ.
ಇದರಲ್ಲಿ 5 ಸಾವಿರ ರೂಪಾಯಿ ಕುಷ್ಠ ರೋಗಿಗಳ ಯೋಗಕ್ಷೇಮ ಹಾಗೂ ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ.

ಉತ್ತಮ ಸಾಥ್ ನೀಡುತ್ತಿರುವ ಪಾಲಿಕೆ
ಕಲಬುರಗಿ ಮಹಾನಗರ ಪಾಲಿಕೆಯಿಂದ ಕುಷ್ಠ ರೋಗಿಗಳ ಕಾಲೋನಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳೂ ನಡೆದಿವೆ. ಮನೆಗಳು ಹಾಗೂ ರಸ್ತೆಗಳು ನಿರ್ಮಾಣವಾಗಿರುವುದರ ಜತೆ ಸ್ವಚತೆಗಾಗಿ ಹೆಚ್ಚಿನ ಒತ್ತನ್ನು ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಸುನೀಲ್ ಕುಮಾರ್ ನೀಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ನಿವಾಸಿಗಳು.

ಹಲವು ಪ್ರಶಸ್ತಿಗಳಿಗೆ ಭಾಜನ
ಹಣಮಂತ ಬಿರಾದಾರರ ಸಮಾಜ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.
2008ರಲ್ಲಿ ರಾಷ್ಟ್ರಮಟ್ಟದ ಸಮಾಜ ಸೇವಾ ಪ್ರಶಸ್ತಿಯನ್ನು ಉಪರಾಷ್ಟ್ರ ಪತಿಗಳಾಗಿದ್ದ ಹಮ್ಮಿದ್ ಅನ್ಸಾರಿಯವರಿಂದ ಪಡೆದುಕೊಂಡಿದ್ದಾರೆ. ದಸರಾ ಸಂದರ್ಭದಲ್ಲಿ ನೀಡಲಾಗುವ ಸಮಾಜ ಸೇವಾ ಪ್ರಶಸ್ತಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯಿಂದ ನೀಡಲಾಗುವ ಸಮಾಜ ಸೇವಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.












Click it and Unblock the Notifications