ದೇವೇಗೌಡರ ಗೆಲುವಿನ ಬಗ್ಗೆ ಡಿಸಿಎಂ ಪರಮೇಶ್ವರ್ ಹೇಳೋದೇನು?
ಕಲಬುರ್ಗಿ, ಮೇ.07:ಈ ಬಾರಿಯ ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ ಮಾಡುವ ಮೂಲಕ ತೇಜೋವಧೆ ಮಾಡುವ ಪರಿಪಾಠವನ್ನು ಬಿಜೆಪಿ ಬೆಳೆಸಿಕೊಂಡಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ದಿ.ರಾಜೀವಗಾಂಧಿ ಬಗ್ಗೆ ಅವಹೇಳನ ಮಾಡಿ, ತೇಜೋವಧೆ ಮಾಡೋದನ್ನು ನೋಡಿದರೆ ಬಿಜೆಪಿ ಸಂಸ್ಕೃತಿ ಏನೆಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಹಾರ ನೀಡಲು ಕೇಂದ್ರ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ತರುವ ಬದಲು, ಯಡಿಯೂರಪ್ಪ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಉಮೇಶ್ ಜಾಧವ್ ಹಣಕ್ಕಾಗಿ ಮಾರಿಕೊಂಡಿದ್ದಾರೆ ಎಂದು ಜನ ಮಾತಾಡಿಕೊಳ್ತಿದ್ದಾರೆ ಎಂದು ಪರಮೇಶ್ವರ್ ದೂರಿದರು.

ನಮ್ಮ ಅಭ್ಯರ್ಥಿ ಸುಭಾಷ್ ರಾಠೋಡ ಗೆಲ್ಲೋದು ನಿಶ್ಚಿತ. ಜನ ಜಾಧವ್ ಗೆ ಪಾಠ ಕಲಿಸುತ್ತಾರೆ.ತಾಯಿ ಪಕ್ಷಕ್ಕೆ ಮೋಸ ಮಾಡಿದವರಿಗೆ ಪಾಠ ಕಲಿಸೋದು ಇಲ್ಲಿಂದಲೇ ಆರಂಭವಾಗುತ್ತದೆ ಎಂದರು.
ಕುಟುಂಬ ರಾಜಕಾರಣಕ್ಕೆ ಹೆದರಿ ಜೆಡಿಎಸ್ - ಕಾಂಗ್ರೆಸ್ ನಾಯಕರೇ ದೇವೇಗೌಡರನ್ನು ಸೋಲಿಸಲು ಹುನ್ನಾರ ಮಾಡಿದ್ದಾರೆ ಎಂಬ ಮಾಜಿ ಶಾಸಕ ಸುರೇಶಗೌಡ ಹೇಳಿಕೆಗೆ ಡಿಸಿಎಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ, ಬರೀ ಇಂತಹ ಆರೋಪಗಳನ್ನು ಮಾಡ್ತಾರೆ. ನಾವೆಲ್ಲರೂ ಒಟ್ಟುಗೂಡಿ ದೇವೇಗೌಡರ ಪರವಾಗಿ ಕೆಲಸ ಮಾಡಿದ್ದೇವೆ ತುಮಕೂರಿನಲ್ಲಿ ದೇವೇಗೌಡರು ಗೆಲ್ಲೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾರ್ಡ್ ಕೋರ್ ಸ್ವಭಾವದ ಕೆಲವರು ದೇವೇಗೌಡರ ವಿರುದ್ಧ ಕೆಲಸ ಮಾಡಿರಬಹುದು.ಆದರೆ ನಾವೆಲ್ಲ ಅವರ ಪರವಾಗಿ ಕೆಲಸ ಮಾಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.












Click it and Unblock the Notifications