ಚಿಂಚೋಳಿ ಉಪ ಚುನಾವಣೆ : ಡಾ.ಅವಿನಾಶ್ ಜಾಧವ್ ಮುನ್ನಡೆ
ಕಲಬುರಗಿ, ಮೇ 23 : ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಡಾ.ಉಮೇಶ್ ಜಾಧವ್ ಅವರ ರಾಜೀನಾಮೆಯಿಂದಾಗಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿತ್ತು.
ಬಿಜೆಪಿಯಿಂದ ಡಾ.ಅವಿನಾಶ್ ಜಾಧವ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಸುಭಾಷ್ ರಾಥೋಡ್ ಅವರು ಕಣದಲ್ಲಿದ್ದಾರೆ. ಮೇ 19ರಂದು ಚುನಾವಣೆ ನಡೆದಿತ್ತು. ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಮತ್ತು ಮೈತ್ರಿಕೂಟದ ನಡವೆ ಪೈಪೋಟಿ ಇದೆ.
ಗುರುವಾರ ಮತ ಎಣಿಕೆ ನಡೆಯುತ್ತಿದ್ದು ಡಾ.ಅವಿನಾಶ್ ಜಾಧವ್ ಅವರು 13,477 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನ ಸುಭಾಷ್ ರಾಥೋಡ್ ಅವರು 9254 ಮತಗಳನ್ನು ಪಡೆದಿದ್ದಾರೆ. 4223 ಮತಗಳ ಅಂತರದಲ್ಲಿ ಡಾ.ಅವಿನಾಶ್ ಜಾಧವ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ್ ಜಾಧವ್ ನಡುವಿನ ಪ್ರತಿಷ್ಠೆಯ ಕಣಣವಾಗಿತ್ತು. ಡಾ.ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಸೋಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಣ ತೊಟ್ಟಿದ್ದರು.

ಡಾ.ಉಮೇಶ್ ಜಾಧವ್ ರಾಜೀನಾಮೆ
2018ರ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಉಮೇಶ್ ಜಾಧವ್ ಗೆಲುವು ಸಾಧಿಸಿದ್ದರು. ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಬಿಜೆಪಿ ಸೇರಿ ಗುಲ್ಬರ್ಗ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕಣಕ್ಕಿಳಿದಿದ್ದರು.

ಪುತ್ರನಿಗೆ ಟಿಕೆಟ್ ಕೊಟ್ಟ ಬಿಜೆಪಿ
ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಎದುರಾದಾಗ ಬಿಜೆಪಿ ಡಾ.ಉಮೇಶ್ ಜಾಧವ್ ಅವರ ಪುತ್ರ ಡಾ.ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿತು. ಕೆಬಿಎನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಡಿ ವ್ಯಾಸಂಗ ಮಾಡುತ್ತಿದ್ದ ಅವರು ಚುನಾವಣಾ ಅಖಾಡಕ್ಕಿಳಿದರು.

ಸುಭಾಷ್ ರಾಥೋಡ್ ಕಣಕ್ಕೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಉಪ ಚುನಾವಣೆ ಎದುರಿಸುತ್ತಿವೆ. ಕಾಂಗ್ರೆಸ್ ಸುಭಾಷ್ ರಾಥೋಡ್ ಅವರನ್ನು ಕಣಕ್ಕಿಳಿಸಿತು. ಸ್ಥಳೀಯ ಮಟ್ಟದಲ್ಲಿ ಹೆಚ್ಚು ಪ್ರಭಾವ ಹೊಂದಿದ ನಾಯಕರು ಎಂಬ ಕಾರಣಕ್ಕೆ ಸ್ವತಃ ಮಲ್ಲಿಕಾರ್ಜು ಖರ್ಗೆ ಅವರೇ ಸುಭಾಷ್ ರಾಥೋಡ್ ಅವರಿಗೆ ಟಿಕೆಟ್ ಕೊಡಿಸಿದ್ದರು.

ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ
ಚಿಂಚೋಳಿ ಉಪ ಚುನಾವಣೆ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ರಣತಂತ್ರ ರೂಪಿಸಿದ್ದರು.












Click it and Unblock the Notifications