ಕಲಬುರಗಿ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ, ಪೊಲೀಸರು ಹೇಳಿದ್ದೇನು
ಕಲಬುರಗಿ, ಫೆಬ್ರವರಿ 04: ಕಲಬುರಗಿ ನಗರದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಬಾಂಬ್ ನಿಷ್ಕ್ರೀಯದಳದ ಸಿಬ್ಬಂದಿಗಳ ಜೊತೆಗೆ ಶಾಲೆಯಲ್ಲಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಹುಡುಕಾಟ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಘೋಷಣೆ ಮಾಡಲಾಗಿದೆ. ಬಾಂಬ್ ಕರೆಯ ಕಾರಣ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಬಾಂಬ್ ಬೆದರಿಕೆ ಕರೆ ಕಲಬುರಗಿ ನಗರದ ಜೇವರ್ಗಿ ರಸ್ತೆಯ ಕೆಇಬಿ ಕಲ್ಯಾಣ ಮಂಟಪದ ಬಳಿ ಇರುವ ಶಾಲೆಗೆ ಶಾಲೆಗೆ ಮಂಗಳವಾರ ಬೆಳಗ್ಗೆ ಬಂದಿತ್ತು. ಸದ್ಯದ ಮಾಹಿತಿ ಪ್ರಕಾರ ಈ ಕರೆ ತಮಿಳುನಾಡಿನಿಂದ ಬಂದಿದೆ. ಈ ಶಾಲೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ.

ಶಾಲೆ ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ್ ಒಡೆತನಕ್ಕೆ ಸೇರಿದೆ. ತಮಿಳು ಭಾಷೆಯಲ್ಲಿ ಶಾಲೆಯಲ್ಲಿರುವ ಬಾಂಬ್ ಸ್ಪೋಟಿಸುತ್ತೇವೆ ಎಂದು ಇ-ಮೇಲ್ ಮಾಡಲಾಗಿತ್ತು. ಶಾಲಾ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ಶಾಲೆಯಲ್ಲಿ ಪೊಲೀಸರು ಶ್ವಾನದಳದ ಸಹಾಯದಿಂದ ಪರಿಶೀಲನೆ ನಡೆಸಿದರು.
ಈ ಕರೆ ಕುರಿತು ಮಾಹಿತಿ ತಿಳಿದ ಬಳಿಕ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಪ್ರವೀಣ ಹೆಚ್. ನಾಯಕ್ ಉಪ-ಪೊಲೀಸ್ ಆಯುಕ್ತರು (ಅ&ಸಂ), ಭೂತೇಗೌಡ ವಿ. ಎಸ್. ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ-ವಿಭಾಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪಾಸಣೆ ಕುರಿತು ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು.
ಪೊಲೀಸರ ಸ್ಪಷ್ಟನೆ: ಬಾಂಬ್ ಬೆದರಿಕೆ ಕುರಿತು ಕಲಬುರಗಿ ನಗರ ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕಲಬುರಗಿ ನಗರದ ಖಾಸಗಿ ವಿದ್ಯಾಸಂಸ್ಥೆಯ ಇ-ಮೇಲ್‌ಗೆ ಹುಸಿ ಬಾಂಬ್ ಸಂದೇಶ ಬಂದಿದ್ದು, ಕೂಡಲೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು.
ವಿದ್ಯಾರ್ಥಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ ಮತ್ತು ವಿದ್ವಂಸಕ ಕೃತ್ಯ ತಪಾಸಣೆ ದಳ ತಂಡವು ಸ್ಥಳ ಪರಿಶೀಲನೆ ನಡೆಸಿತು. ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದ್ದು, ಇದೊಂದು ಸುಳ್ಳು ಬೆದರಿಕೆ ಇ-ಮೇಲ್ ಸಂದೇಶವಾಗಿದ್ದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶಾಲೆಯಲ್ಲಿ ಬಾಂಬ್ ಇದೆ ಎಂಬ ಇ-ಮೇಲ್ ಬಂದ ಮಾಹಿತಿ ತಿಳಿದ ಪೋಷಕರು ಶಾಲೆಗೆ ಆಗಮಿಸಿದರು. ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋದರು. ಶಾಲೆಯಲ್ಲಿ ಯಾವುದೇ ಆತಂಕದ ವಾತಾವರಣ ನಿರ್ಮಾಣವಾಗದಂತೆ ಪೊಲೀಸರು, ಶಾಲೆಯ ಸಿಬ್ಬಂದಿ ಎಚ್ಚರವಹಿಸಿದರು.
ಶಾಲಾ ಕೊಠಡಿಗಳು, ಶೌಚಾಲಯ, ಉದ್ಯಾನ, ಆವರಣ ಸೇರಿದಂತೆ ಎಲ್ಲಾ ಕಡೆಯೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಾಂಬ್‌ಗಾಗಿ ಹುಡುಕಾಟ ನಡೆಸಲಾಯಿತು. ಬಳಿಕ ಇದು ಹುಸಿ ಕರೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದರು.
ತಮಿಳುಭಾಷೆಯಲ್ಲಿ ಶಾಲೆಯಲ್ಲಿ ಆರ್‌ಡಿಎಕ್ಸ್ ಇಟ್ಟು ಸ್ಫೋಟಗೊಳಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ ತಮಿಳುನಾಡು ರಾಜ್ಯದ ರಾಜಕೀಯ ಪಕ್ಷದೊಂದರ ಕುರಿತು ಸಹ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು.












Click it and Unblock the Notifications