ಮೋಹನ್ ಭಾಗವತ್ ಬೆಂಗಾವಲು ವಾಹನ ಡಿಕ್ಕಿ: ಬಾಲಕ ಸಾವು
ಜೈಪುರ, ಸೆಪ್ಟೆಂಬರ್ 11: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬೆಂಗಾವಲು ವಾಹನವು ಡಿಕ್ಕಿಯಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ರಾಜಸ್ಥಾನದ ಬುಧವಾರ ಭಾಗವತ್ ಅವರ ಬೆಂಗಾವಲು ವಾಹನವು ಬೈಕ್‌ಒಂದಕ್ಕೆ ಡಿಕ್ಕಿ ಹೊಡೆದಿದೆ. ರಾಜಸ್ಥಾನದ ತಿಜಾರಾಕ್ಕೆ ತೆರಳಿದ್ದ ಭಾಗವತ್ ಅವರು ಅಲ್ಲಿಂದ ಮರಳುವ ವೇಳೆ ಹರ್ಸೋಲಿ ಮುಂದಾವರ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ಸ್ಥಳೀಯ ಸರಪಂಚ್ ಚೇತ್ರಮ್ ಯಾದವ್ ಎಂಬುವವರಿಗೆ ಸೇರಿದ ಬೈಕ್‌ಗೆ ಕಾರ್ ಡಿಕ್ಕಿ ಹೊಡೆದಿದೆ. ಯಾದವ್ ಅವರ ಮೊಮ್ಮಗ ಅಪಘಾತದಲ್ಲಿ ಮೃತಪಟ್ಟಿದ್ದರೆ, ಯಾದವ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುಷ್ಕರ್‌ನಲ್ಲಿ ಆರೆಸ್ಸೆಸ್‌ನ ಮೂರು ದಿನಗಳ ಸಂಯೋಜನಾ ಸಭೆಯಲ್ಲಿ ಪಾಲ್ಗೊಳ್ಳಲು ಭಾಗವತ್ ಅವರು ರಾಜಸ್ಥಾನಕ್ಕೆ ತೆರಳಿದ್ದರು. ಇದರಲ್ಲಿ ಆರೆಸ್ಸೆಸ್‌ನ 35 ಘಟಕಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಲೋಕಸಭೆ ಚುನಾವಣೆ ನಡೆದ ಬಳಿಕ ನಡೆದ ಮೊದಲ ಸಭೆ ಇದಾಗಿದೆ.
ಕಳೆದ ಮೇ ತಿಂಗಳಿನಲ್ಲಿ ಭಾಗವತ್ ಅವರ ಬೆಂಗಾವಲು ವಾಹನವು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವರೋರಾ ಎಂಬಲ್ಲಿ ಪಲ್ಟಿಯಾಗಿತ್ತು. ರಸ್ತೆಯ ಮಧ್ಯಭಾಗದಲ್ಲಿ ನಿಂತಿದ್ದ ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸಿಐಎಸ್‌ಎಫ್‌ನ ಒಬ್ಬ ಅಧಿಕಾರಿಗೆ ಗಾಯವಾಗಿತ್ತು.












Click it and Unblock the Notifications