ರಾಜಸ್ಥಾನ ಬಿಕ್ಕಟ್ಟು; ಹರ್ಯಾಣಕ್ಕೆ ಹೋಗಿ ಬರಿಗೈಯಲ್ಲಿ ಪೊಲೀಸ್ ವಾಪಸ್!
ಜೈಪುರ, ಜುಲೈ 20 : ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ ಎನ್ನಲಾದ ಹರ್ಯಾಣದ ಮಾನೇಸರ್‌ನ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಪೊಲೀಸರಿಗೆ ಪ್ರವೇಶ ನೀಡಲು ರೆಸಾರ್ಟ್ ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಬೆಂಬಲಿಸುವ ಶಾಸಕರು ಮಾನೇಸರ್‌ನ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಇತ್ತು. ಆದ್ದರಿಂದ, ಪೊಲೀಸರು ರೆಸಾರ್ಟ್‌ಗೆ ತೆರಳಿದ್ದರು. ಆದರೆ, 20 ನಿಮಿಷ ಕಾದರೂ ಪ್ರವೇಶ ಸಿಗದ ಕಾರಣ ವಾಪಸ್ ಆಗಿದ್ದಾರೆ.
ಶುಕ್ರವಾರ ಸಂಜೆಯಿಂದ ಎರಡು ಬಾರಿ ಪೊಲೀಸರು ರೆಸಾರ್ಟ್ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ರೆಸಾರ್ಟ್ ಒಳಹೋಗಿ ಶಾಸಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹರ್ಯಾಣ ಪೊಲೀಸರು ತಮಗೆ ಸಹಕಾರ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಪತನಗೊಳಿಸಲು ಶಾಸಕರ ಖರೀದಿ ನಡೆಯುತ್ತಿದೆ ಎಂಬ ಆರೋಪವಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ರಾಜ್ಯದ ವಿಶೇಷ ತನಿಖಾ ದಳಕ್ಕೆ ದೂರು ನೀಡಿದೆ. ಈ ದೂರಿನ ಕುರಿತು ಶಾಸಕರನ್ನು ವಿಚಾರಣೆ ನಡೆಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಸರ್ಕಾರ ಪತನಕ್ಕೆ ಸಂಚು
"ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಸಚಿನ್ ಪೈಲೆಟ್ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಇದಕ್ಕೆ ತಮ್ಮ ಬಳಿ ಸಾಕ್ಷಿ ಇದೆ" ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಸಚಿನ್ ಪೈಲೆಟ್ ಬಣದಲ್ಲಿ ಎಷ್ಟು ಶಾಸಕರು ಇದ್ದಾರೆ? ಎಂಬುದು ನಿಗೂಢವಾಗಿದೆ.

ಒಂದು ವಾರದಿಂದ ವಾಸ್ತವ್ಯ
ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಮತ್ತು ಅವರನ್ನು ಬೆಂಬಲಿಸುವ 18 ಶಾಸಕರು ಹರ್ಯಾಣದ ರೆಸಾರ್ಟ್‌ನಲ್ಲಿ ಒಂದು ವಾರದಿಂದ ವಾಸ್ತವ್ಯ ಹೂಡಿದ್ದಾರೆ. ಈ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೋಟಿಸ್ ನೀಡಿದ್ದು, ಅದಕ್ಕೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಸಂಜೆಯ ತನಕ ತಡೆ ನೀಡಿದೆ.

ಮನವೊಲಿಸಲು ಪ್ರಯತ್ನ
ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿರುವ ಸಚಿನ್ ಪೈಲೆಟ್ ಅವರನ್ನು ಉಪಮುಖ್ಯಮಂತ್ರಿ ಮತ್ತು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಆದರೆ, ಮತ್ತೊಂದು ಕಡೆ ಅವರ ಮನವೊಲಿಕೆ ಮಾಡುವ ಕಾರ್ಯವೂ ನಡೆಯುತ್ತಿದೆ.

ಅನರ್ಹಗೊಂಡರೂ ಸರ್ಕಾರ ಭದ್ರ
ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರು ಅನರ್ಹಗೊಂಡರೂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಭದ್ರವಾಗಿ ಇರಲಿದೆ. ನಮ್ಮ ಬಳಿ 109 ಶಾಸಕರ ಬಲವಿದೆ ಎಂದು ಗೆಹ್ಲೋಟ್ ಬಣ ಹೇಳಿಕೊಂಡಿದೆ.












Click it and Unblock the Notifications