ಕುಂಭರಾಮ್ ಹೆಸರನ್ನು ಕುಂಭಕರಣ್ ಎಂದಿದ್ದ ರಾಹುಲ್ ರನ್ನು ಗೇಲಿ ಮಾಡಿದ ಪ್ರಧಾನಿ
"ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಅವರದೇ ಪಕ್ಷದ ನಾಯಕರ ಹೆಸರು ಗೊತ್ತಿಲ್ಲ. ಬಹಳ ಹೆಸರಾಂತ ಕೃಷಿಕ ಹಾಗೂ ಕಾಂಗ್ರೆಸ್ ನಲ್ಲಿದ್ದ ಜಾಟ್ ಸಮುದಾಯದ ನಾಯಕ ದಿವಂಗತ ಕುಂಭ ರಾಮ್ ಜೀ ಹೆಸರು ಕೂಡ ಅವರಿಗೆ ಗೊತ್ತಿಲ್ಲ. ರಾಮ್ ಜೀ ಹೆಸರನ್ನು 'ಕುಂಭಕರಣ್' ಎಂದಿದ್ದಾರೆ. ಇಂಥವರು ಅಧಿಕಾರಕ್ಕೆ ಬಂದರೆ ಏನು ಮಾಡಬಹುದು ಎಂಬುದನ್ನು ನೀವು ಊಹಿಸಬಹುದು".
-ಹೀಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ರಾಜಸ್ತಾನದ ಸುಮೇರ್ ಪುರ್ ನಲ್ಲಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬುಧವಾರ ರಾಹುಲ್ ಗಾಂಧಿಯನ್ನು ತೀಕ್ಷ್ಣವಾದ ಮಾತುಗಳಿಂದ ತರಾಟೆಗೆ ತೆಗೆದುಕೊಂಡರು.
ಅಸಲಿಗೆ ಆಗಿದ್ದೇನೆಂದರೆ, ರಾಜಸ್ತಾನದ ಝುನ್ ಝುನುನಲ್ಲಿ ಮಂಗಳವಾರ ರಾಹುಲ್ ಗಾಂಧಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದರು. ಆಗ, ಅಶೋಕ್ ಗೆಹ್ಲೋಟ್ 'ಕುಂಭಕರಣ್ ಲಿಫ್ಟ್ ಯೋಜನಾ'ಗೆ ಸ್ವಲ್ಪ ಹಣ ನೀಡಿದ್ದರು ಎಂದಿದ್ದರು ರಾಹುಲ್. ಆದರೆ ಆ ಯೋಜನೆ ಹೆಸರು 'ಕುಂಭ ರಾಮ್ ಲಿಫ್ಟ್ ಯೋಜನಾ' ಆಗಿತ್ತು.

ಆ ಕೂಡಲೇ ಅಲ್ಲೇ ಇದ್ದವರು ಕ್ಯಾಮೆರಾಗಳಲ್ಲಿ ಸೆರೆಯಾಗುವಂತೆಯೇ, ಯೋಜನೆ ಹೆಸರು ಅದಲ್ಲ, ಇದು ಎಂದು ಸರಿಪಡಿಸಿದ್ದರು, ಆ ನಂತರ ತಮ್ಮ ತಪ್ಪನ್ನು ತಿಳಿದುಕೊಂಡು, ಸರಿಪಡಿಸಿಕೊಂಡ ರಾಹುಲ್ ಗಾಂಧಿ, ನೀರು ಪೂರೈಕೆ ಯೋಜನೆಯ ಸರಿಯಾದ ಹೆಸರು ಹೇಳಿದರು. ಝುನ್ ಝುನುನಲ್ಲಿ ನೀರಾವರಿ ಉದ್ದೇಶಕ್ಕಾಗಿ ನೀರು ಪೂರೈಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಕುಂಭ ರಾಮ್ ಲಿಫ್ಟ್ ಯೋಜನಾ ಹೆಸರನ್ನು ಆಮೇಲೆ ಮತ್ತಷ್ಟು ಒತ್ತಿ ಹೇಳಿದರು.
ಇದೇ ವಿಚಾರವನ್ನು ಗೇಲಿ ಮಾಡಿದ ನರೇಂದ್ರ ಮೋದಿ, ಸ್ವಾತಂತ್ರ್ಯ ಯೋಧ ಹಾಗೂ ಕಾಂಗ್ರೆಸ್ ನಾಯಕ ಕುಂಭ ರಾಮ್ ಬಗ್ಗೆಯೇ ರಾಹುಲ್ ಗಾಂಧಿಗೆ ಗೊತ್ತಿಲ್ಲ ಎಂದಿದ್ದಾರೆ.












Click it and Unblock the Notifications