ಜೈಪುರ ಬಾಂಬ್ ಸ್ಪೋಟ; ನಾಲ್ವರು ಅಪರಾಧಿಗಳಿಗೆ ಗಲ್ಲು
ಜೈಪುರ, ಡಿಸೆಂಬರ್ 18: 2008 ರ ಜೈಪುರ ಸರಣಿ ಬಾಂಬ್ ಸ್ಫೋಟದಲ್ಲಿ ದೋಷಿಗಳಾಗಿದ್ದ ನಾಲ್ವರಿಗೆ ಜೈಪುರ ವಿಶೇಷ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಘಟನೆ ಸಂಭವಿಸಿ 11 ವರ್ಷಗಳ ಬಳಿಕ ಎಲ್ಲಾ ಐವರು ಆರೋಪಿಗಳು ದೋಷಿ ಎಂದು ನ್ಯಾಯಾಲಯ ಕಳೆದ ಬುಧವಾರ ಆದೇಶ ನೀಡಿತ್ತು. ಅದರಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು ಶಿಕ್ಷೆ ಪ್ರಕಟಿಸಿದೆ.
ದೋಷಿಗಳಾದ ಶಹಬಾಜ್ ಹುಸೇನ್, ಸರ್ವಾರ್ ಅಜಾಮಿ, ಉರ್ ರಹಮಾನ್ ಹಾಗೂ ಸಲ್ಮಾನ್ ಎನ್ನವರಿಗೆ ಗಲ್ಲು ಶಿಕ್ಷೆ ಆಗಿದೆ. ಮೊಹಮ್ಮದ್ ಸೈಫ್ ಎನ್ನುವ 2008 ರಲ್ಲಿ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಜೈಪುರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಸ್ಫೋಟದಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟು 170 ಮಂದಿ ಗಾಯಗೊಂಡಿದ್ದರು. ಮನಕ್ ಚೌಕ್ ಹಾಗೂ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿತ್ತು.

ಡಿಸೆಂಬರ್ 2008ರಿಂದ ನಡೆದ ವಿಚಾರಣೆ
ಶಹಬಾಜ್ ಹುಸೇನ್, ಮೊಹಮ್ಮದ್ ಸೈಫ್, ಸರ್ವಾರ್ ಅಜಾಮಿ, ಸೈಫ್ ಉರ್ ರಹಮಾನ್ ಹಾಗೂ ಸಲ್ಮಾನ್ ಎಂಬುವರ ವಿರುದ್ಧ ರಾಜಸ್ಥಾನ್ ಎಟಿಎಸ್ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯದಿಂದ ಡಿಸೆಂಬರ್ 2008ರಿಂದ ನಡೆದ ವಿಚಾರಣೆ ಅಂತ್ಯಗೊಂಡು ಡಿಸೆಂಬರ್ 18, 2019ರಂದು ಆದೇಶ ಹೊರ ಬಂದಿದೆ.

ಸರಣಿ ಬಾಂಬ್ ಸ್ಪೋಟ ಆಗಿದ್ದವು
ಸ್ಫೋಟಕ್ಕೆ ಅಮೋನಿಯಂ ನೈಟ್ರೇಟನ್ನು ಬಳಸಿರುವುದಾಗಿ ಪ್ರಾಥಮಿಕ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಕ್ಕಾಗಿ ಹೊಸ ಸೈಕಲ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಸ್ಫೋಟಕ್ಕೆ ಕಾರಣವಾಗಿರುವ ಹೂಜಿ ಸಂಘಟನೆ ಮುಖ್ಯವಾಗಿ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದೆ. ಸರಣಿ ಬಾಂಬ್‌ಗಳನ್ನು ಸ್ಫೋಟಿಸಿ ರಾಜಸ್ಥಾನದ ಆರ್ಥಿಕ ಶಕ್ತಿಯಂತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಹೂಜಿ ಈ ದುಷ್ಕೃತ್ಯಕ್ಕೆ ಕೈಹಾಕಿದೆ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದರು.

80 ಮಂದಿ ಬಲಿ
ಜೈಪುರದ ತ್ರಿಪೋಲಿಯಾ ಬಜಾರ್, ಹವಾ ಮಹಲ್, ಜೋಹರಿ ಬಜಾರ್, ಮಾನಸ್ ಚೌಕ್, ಬಡಿ ಚೌಪಾಲ್ ಮತ್ತು ಚೋಟಿ ಚೌಪಾಲ್, ಕೋತ್ವಾಲಿ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ 80ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡು 170ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿತ್ತು.

ಹಿಂದೂ ಸ್ಥಳಗಳ ಟಾರ್ಗೆಟ್
ತ್ರಿಪೋಲಿಯಾ ಬಜಾರ್‌ನಲ್ಲಿ ಬಾಂಬ್ ಸ್ಫೋಟಿಸಿದಾಗ ಸಾವಿರಾರು ಜನ ಅಲ್ಲೇ ಸಮೀಪದಲ್ಲಿದ್ದ ಹನುಮಾನ್ ಗುಡಿಗೆ ದೇವರ ದರ್ಶನಕ್ಕಾಗಿ ಬಂದಿದ್ದರು. ಉಗ್ರರು ಬಾಂಬ್ ಸ್ಫೋಟಕ್ಕೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸಮೀಪವಿರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಸರಣಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೈಕಲ್‌ನ ಹ್ಯಾಂಡಲ್‌ನ ಬಳಿ ಇಟ್ಟಿದ್ದ ಬಾಂಬ್ ಒಂದು ಸ್ಫೋಟಗೊಳ್ಳದೆ ಇನ್ನೂ ಜೀವಂತವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಅದನ್ನು ನಿಷ್ಕ್ರಿಯಗೊಳಿಸಿದರು. ಟೈಮರ್‌ಗಳನ್ನು ಅಳವಡಿಸಿ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಇದಕ್ಕಾಗಿ ಮಂಗಳವಾರ ತೀವ್ರ ಜನಸಂದಣಿ ಇರುವ ನಗರದ ಎರಡು ಹನುಮಾನ್ ಮಂದಿರಗಳನ್ನು ಆರಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.












Click it and Unblock the Notifications