ಜೈಪುರದ 2008 ಸರಣಿ ಸ್ಫೋಟ ಕೇಸ್, 5 ಆರೋಪಿಗಳು ದೋಷಿ
ಜೈಪುರ, ಡಿಸೆಂಬರ್ 18: ಜೈಪುರ ಸರಣಿ ಬಾಂಬ್ ಸ್ಫೋಟ ಸಂಭವಿಸಿ 11 ವರ್ಷಗಳ ಬಳಿಕ ಎಲ್ಲಾ ಐವರು ಆರೋಪಿಗಳು ದೋಷಿ ಎಂಡು ಸ್ಥಳೀಯ ನ್ಯಾಯಾಲಯವು ಬುಧವಾರದಂದು ಆದೇಶ ನೀಡಿದೆ.
ಜೈಪುರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಸ್ಫೋಟದಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟು 170 ಮಂದಿ ಗಾಯಗೊಂಡಿದ್ದರು. ಮನಕ್ ಚೌಕ್ ಹಾಗೂ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿತ್ತು.
ಶಹಬಾಜ್ ಹುಸೇನ್, ಮೊಹಮ್ಮದ್ ಸೈಫ್, ಸರ್ವಾರ್ ಅಜಾಮಿ, ಸೈಫ್ ಉರ್ ರಹಮಾನ್ ಹಾಗೂ ಸಲ್ಮಾನ್ ಎಂಬುವರ ವಿರುದ್ಧ ರಾಜಸ್ಥಾನ್ ಎಟಿಎಸ್ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಡಿಸೆಂಬರ್ 2008ರಿಂದ ನಡೆದ ವಿಚಾರಣೆ ಅಂತ್ಯಗೊಂಡು ಡಿಸೆಂಬರ್ 18, 2019ರಂದು ಆದೇಶ ಹೊರ ಬಂದಿದೆ.

ಸ್ಫೋಟಕ್ಕೆ ಅಮೋನಿಯಂ ನೈಟ್ರೇಟನ್ನು ಬಳಸಿರುವುದಾಗಿ ಪ್ರಾಥಮಿಕ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಕ್ಕಾಗಿ ಹೊಸ ಸೈಕಲ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಸ್ಫೋಟಕ್ಕೆ ಕಾರಣವಾಗಿರುವ ಹೂಜಿ ಸಂಘಟನೆ ಮುಖ್ಯವಾಗಿ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದೆ. ಸರಣಿ ಬಾಂಬ್‌ಗಳನ್ನು ಸ್ಫೋಟಿಸಿ ರಾಜಸ್ಥಾನದ ಆರ್ಥಿಕ ಶಕ್ತಿಯಂತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಹೂಜಿ ಈ ದುಷ್ಕೃತ್ಯಕ್ಕೆ ಕೈಹಾಕಿದೆ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದರು.
ಜೈಪುರದ ತ್ರಿಪೋಲಿಯಾ ಬಜಾರ್, ಹವಾ ಮಹಲ್, ಜೋಹರಿ ಬಜಾರ್, ಮಾನಸ್ ಚೌಕ್, ಬಡಿ ಚೌಪಾಲ್ ಮತ್ತು ಚೋಟಿ ಚೌಪಾಲ್, ಕೋತ್ವಾಲಿ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ 80ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡು 170ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿತ್ತು.
ತ್ರಿಪೋಲಿಯಾ ಬಜಾರ್‌ನಲ್ಲಿ ಬಾಂಬ್ ಸ್ಫೋಟಿಸಿದಾಗ ಸಾವಿರಾರು ಜನ ಅಲ್ಲೇ ಸಮೀಪದಲ್ಲಿದ್ದ ಹನುಮಾನ್ ಗುಡಿಗೆ ದೇವರ ದರ್ಶನಕ್ಕಾಗಿಬಂದಿದ್ದರು. ಉಗ್ರರು ಬಾಂಬ್ ಸ್ಫೋಟಕ್ಕೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸಮೀಪವಿರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಸರಣಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೈಕಲ್‌ನ ಹ್ಯಾಂಡಲ್‌ನ ಬಳಿ ಇಟ್ಟಿದ್ದ ಬಾಂಬ್ ಒಂದು ಸ್ಫೋಟಗೊಳ್ಳದೆ ಇನ್ನೂ ಜೀವಂತವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಅದನ್ನು ನಿಷ್ಕ್ರಿಯಗೊಳಿಸಿದರು. ಟೈಮರ್‌ಗಳನ್ನು ಅಳವಡಿಸಿ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಇದಕ್ಕಾಗಿ ಮಂಗಳವಾರ ತೀವ್ರ ಜನಸಂದಣಿ ಇರುವ ನಗರದ ಎರಡು ಹನುಮಾನ್ ಮಂದಿರಗಳನ್ನು ಆರಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.












Click it and Unblock the Notifications