Ukraine War: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆಕ್ರೋಶ
ಕೀವ್: ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಸಾರಿ ಇನ್ನೇನು 4 ವರ್ಷಗಳು ಪೂರ್ಣಗೊಳ್ಳಲಿದೆ. ಇಂತಹ ಸಮಯದಲ್ಲಿ ಈ ಭಯಾನಕ ಕದನ ನಿಲ್ಲಿಸಬೇಕು ಎಂಬ ಪ್ರಯತ್ನದಲ್ಲಿ ಅಮೆರಿಕ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದೆ. ಅತ್ತ ಉಕ್ರೇನ್ ಅಧ್ಯಕ್ಷನ ಮನವೊಲಿಸಿ, ಇತ್ತ ರಷ್ಯಾ ಅಧ್ಯಕ್ಷರನ್ನ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲು ಟ್ರಂಪ್ ಆಡಳಿತ ಪರದಾಡುತ್ತಿದೆ. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.
ಕ್ರಿಸ್‌ಮಸ್ ಹಬ್ಬದ ದಿನವೂ ರಷ್ಯಾ ಮತ್ತು ಉಕ್ರೇನ್ ಸೇನೆಗಳು ಪರಸ್ಪರ ಯುದ್ಧ ಮಾಡುತ್ತಿವೆ. ಈ ರೀತಿ ಇಬ್ಬರ ನಡುವಿನ ದಾಳಿ ಪರಿಣಾಮ ಉಕ್ರೇನ್ ಜನರು ಕೂಡ ಜೀವ ಭಯದಲ್ಲಿ ಪ್ರತಿ ಕ್ಷಣ ಕಳೆಯುವ ವಾತಾವರಣ ಇದೆ. ಹೀಗಿದ್ದಾಗ ರಷ್ಯಾ ತಮ್ಮ ಮೇಲೆ ನಡೆಸಿರುವ ದಾಳಿ ಬಗ್ಗೆ ಉಕ್ರೇನ್ ಅಧ್ಯಕ್ಷ ರೊಚ್ಚಿಗೆದ್ದು ಹೇಳಿಕೆ ನೀಡಿದ್ದು, ಸ್ವರ್ಗ ತೆರೆದಿದೆ ಎಂಬ ಅರ್ಥ ಬರುವ ಉಕ್ರೇನ್ ಪುರಾಣ ಉಲ್ಲೇಖಿಸಿ ಝೆಲೆನ್ಸ್ಕಿ ವಾಗ್ದಾಳಿ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಹೀಗೆ ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ಗುಡುಗಿದ್ದಾರೆ.

ಪುಟಿನ್ ಬಗ್ಗೆ ಝೆಲೆನ್ಸ್ಕಿ ಹೇಳಿದ್ದೇನು?
ಕ್ರಿಸ್‌ಮಸ್ ಮುನ್ನಾದಿನ ರಷ್ಯಾ ಸೇನೆಯು ಉಕ್ರೇನ್ ದೇಶದ ಹಲವು ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮೂವರು ಜೀವ ಬಿಟ್ಟರೆ, ಉಕ್ರೇನ್ ವಿದ್ಯುತ್ ಸರಬರಾಜಿಗೆ ಕೂಡ ಈ ದಾಳಿಯಿಂದ ಸಮಸ್ಯೆ ಎದುರಾಗಿದೆ. ಇದೇ ಕಾರಣಕ್ಕೆ ಈಗ ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ಶತ್ರು ಪುಟಿನ್‌ಗೆ ಸಾವಿನ ಹಾರೈಕೆ ಮಾಡಿದ್ದಾರೆ. ಹಾಗಾದರೆ ಝೆಲೆನ್ಸ್ಕಿ ಹೇಳಿದ್ದು ಏನು? ಮುಂದೆ ಓದಿ.
ಪ್ರಾಚೀನ ಕಾಲದಿಂದಲೂ ಉಕ್ರೇನ್ ಜನ ಕ್ರಿಸ್‌ಮಸ್ ರಾತ್ರಿ ಸ್ವರ್ಗ ತೆರೆದಿರುತ್ತದೆ ಎಂದು ನಂಬುತ್ತಾರೆ ಮತ್ತು ನೀವು ಅವರಿಗೆ ನಿಮ್ಮ ಕನಸನ್ನು ಹೇಳಿದರೆ ಖಂಡಿತವಾಗಿ ನನಸಾಗುತ್ತದೆ. ಇಂದು ನಾವೆಲ್ಲಾ ಒಂದೇ ಕನಸು ಹಂಚಿಕೊಳ್ಳುತ್ತೇವೆ, ಅವರು ನಾಶವಾಗಬೇಕು ಎನ್ನುವ ಮೂಲಕ ಪುಟಿನ್ ಹೆಸರು ಹೇಳದೆ ಝೆಲೆನ್ಸ್ಕಿ ವಾಗ್ದಾಳಿ ಮಾಡಿದ್ದರು.
131 ಡ್ರೋನ್ ಮೂಲಕ ದಾಳಿ
ಕ್ರಿಸ್‌ಮಸ್ ದಿನ ರಷ್ಯಾ ಸೇನೆ 131 ಡ್ರೋನ್‌ಗಳನ್ನ ಉಡಾಯಿಸಿದ ಹಿನ್ನೆಲೆ, ಉಕ್ರೇನ್ ಸೇನಾ ಪಡೆಗಳು ಅವುಗಳನ್ನು ಹೊಡೆದು ಉರುಳಿಸಿದ್ದವು. ಆದರೂ ಸುಮಾರು 22 ಡ್ರೋನ್‌ಗಳು 15 ಪ್ರದೇಶಗಳಲ್ಲಿ ಘೋರ ವಿನಾಶ ಉಂಟು ಮಾಡಿವೆ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಈಗ ಉಕ್ರೇನ್ ಅಧ್ಯಕ್ಷ ತಮ್ಮ ಶತ್ರುಗಳ ನಾಶಕ್ಕೆ ಹಾರೈಸಿರುವುದು ಮತ್ತೊಂದು ವಿವಾದದ ಕಿಡಿಯನ್ನೇ ಭುಗಿಲೇಳುವಂತೆ ಮಾಡಿದೆ.












Click it and Unblock the Notifications