ಸ್ಟಾರ್ ಬಕ್ಸ್ ನಲ್ಲಿ 'ಕಾಫಿ' ಬದಲಿಗೆ 'ವಿಷ' ಕೊಟ್ರಂತೆ!
ವಾಷಿಂಗ್ಟನ್, ಆಗಸ್ಟ್ 02: ವಿಶ್ವದ ಜನಪ್ರಿಯ ಕಾಫಿ ಶಾಪ್ ಜಾಲ ಸಂಸ್ಥೆ ಸ್ಟಾರ್ ಬಕ್ಸ್ ಮೇಲೆ ಅಮೆರಿಕದ ಮಹಿಳೆಯೊಬ್ಬರು ಗುರುತರ ಆರೋಪ ಮಾಡಿದ್ದಾರೆ. ಕಾಫಿ ಕೊಡಿ ಎಂದು ಆರ್ಡರ್ ಮಾಡಿದರೆ ರಾಸಾಯನಿಕ ಯುಕ್ತ ವಿಷದಂಥ ದ್ರವ ನೀಡಿದ್ದಾರೆ ಎಂದು ಆರೋಪಿಸಿ, ಭಾರಿ ಮೊತ್ತದ ಮೊಕದ್ದಮೆ ಹೂಡಿದ್ದಾರೆ.
ಉಥಾ ಮೂಲದ ಚೆರ್ಲಿ ಕಿಂಗೆರಿ ಎಂಬ ಮಹಿಳೆ ತನಗಾದ ನಷ್ಟಕ್ಕೆ, ನೋವಿಗೆ ಪರಿಹಾರ ಕೋರಿದ್ದಾರೆ. ಸ್ಟಾರ್ ಬಕ್ಸ್ ಸಂಸ್ಥೆಗೆ 2 ಮಿಲಿಯನ್ ಯುಎಸ್ ಡಾಲರ್ ಪರಿಹಾರ ನೀಡುವಂತೆ ಮೊಕದ್ದಮೆ ಹಾಕಿದ್ದಾರೆ. [ಬೆಂಗಳೂರಿನಲ್ಲೇ ಸ್ಟಾರ್ ಬಕ್ಸ್ ಕಾಫಿ ಸವಿಯಿರಿ]
ಸಾಲ್ಟ್ ಲೇಕ್ ಸಿಟಿಯ ಉತ್ತರ ಭಾಗದಲ್ಲಿದ್ದ ಒಂದು ಸ್ಟಾರ್ ಬಕ್ಸ್ ಕಾಫಿ ಶಾಪ್ ಗೆ ಹೋಗಿದ್ದೆ. ಕಾಫಿ ಆರ್ಡರ್ ಮಾಡಿದೆ. ನನಗೆ ಕೊಟ್ಟ ಕಾಫಿಯಲ್ಲಿ ಕೆಮಿಕಲ್ ಅಧಿಕವಾಗಿದ್ದರಿಂದ ನನ್ನ ಗಂಟಲು ಸಂಪೂರ್ಣ ಹಾಳಾಗಿದೆ ಎಂದು ಚೆರ್ಲಿ ಹೇಳಿದ್ದಾರೆ.

ಗಂಟಲಿನ ನರಗಳ ಬೇನೆ, ನಾಲಿಗೆ ರುಚಿ ಕಳೆದುಕೊಂಡಿರುವುದು, ಬಾಯಿ ಸುಟ್ಟ ಪರಿಸ್ಥಿತಿ, ಅನ್ನನಾಳದಲ್ಲಿ ತೊಂದರೆ, ತುಟಿಗಳ ಬಣ್ಣ ಹಾಳಾಗಿರುವುದು ಹೀಗೆ ತಮಗಾಗಿರುವ ತೊಂದರೆಗಳನ್ನು ವಿವರಿಸಿದ್ದಾರೆ.
ವೈದ್ಯಕೀಯ ವೆಚ್ಚವಾಗಿ 1.5 ಮಿಲಿಯನ್ ಡಾಲರ್ ಹಾಗೂ ಮಾನಸಿಕ ಒತ್ತಡ ಮತ್ತು ಇತರೆ ನಷ್ಟಕ್ಕಾಗಿ ಕನಿಷ್ಠ 500,000 ಯುಎಸ್ ಡಾಲರ್ ನೀಡಬೇಕು ಎಂದು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟಾರ್ ಬಕ್ಸ್ ವಕ್ತಾರರು, ಕಾಫಿ ಮೇಕಿಂಗ್ ಯಂತ್ರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ರಾಸಾಯನಿಕ ಬಳಕೆ ಮಾಡುವುದೇ ಇಲ್ಲ, ಗ್ರಾಹಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.
ಕಾಫಿ ಜೊತೆಗೆ ಸ್ವಚ್ಛಗೊಳಿಸುವ ರಾಸಾಯನಿಕ ಮಿಶ್ರಣವಾದ ಪ್ರಕರಣ ಇದೇ ಮೊದಲಲ್ಲ. ಅಮೆರಿಕದ ಕಾಫಿ ಹೌಸ್ ವೊಂದರಲ್ಲಿ ವರ್ಷದ ಕೆಳಗೆ ಇದೇ ರೀತಿ ಘಟನೆ ನಡೆದಿತ್ತು. ಐಸ್ ಟೀ ಕುಡಿದ ಮಹಿಳೆಯೊಬ್ಬರ ಗಂಟಲುಬೇನೆಯಿಂದ ಆಸ್ಪತ್ರೆ ಸೇರಿದ್ದರು. (ಪಿಟಿಐ)












Click it and Unblock the Notifications