ಕೊರೊನಾ ವೈರಸ್ ಕುರಿತು ತನಿಖೆಗೆ ಒಪ್ಪಿಗೆ ನೀಡಿದ WHO
ಮಾರಣಾಂತಿಕ ಕೋವಿಡ್-19 ಕುರಿತು ಸ್ವತಂತ್ರ ತನಿಖೆ ಪ್ರಾರಂಭಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
Recommended Video
ಡೆಡ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಭಾರತವೂ ಸೇರಿದಂತೆ ವಿಶ್ವದ 61 ರಾಷ್ಟ್ರಗಳು ಒತ್ತಾಯಿಸಿದ್ದವು. 73ನೇ ವಿಶ್ವ ಆರೋಗ್ಯ ಸಮಾವೇಶದಲ್ಲಿ ಈ ಬಗ್ಗೆ 61 ದೇಶಗಳು ನಿರ್ಣಯ ಮಂಡಿಸಿದ್ದು, ಅದಕ್ಕೆ 119 ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು.
ಕೊರೊನಾ ವೈರಸ್ ಜನ್ಮ ರಹಸ್ಯ ಮತ್ತು ಮೂಲದ ಬಗ್ಗೆ ತನಿಖೆ ನಡೆಸಲು ಚೀನಾ ವಿರೋಧಿಸಿದೆ. ಆದರೆ, ಸ್ವತಂತ್ರ, ಸಮಗ್ರ ಮತ್ತು ನಿಷ್ಪಕ್ಷಪಾತವಾದ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ನೀಡಿದೆ.

ವೈರಸ್ ನ ಝೂನೋಟಿಕ್ ಮೂಲ ಮತ್ತು ಮಾನವರಿಗೆ ಕೊರೊನಾ ವೈರಸ್ ಪರಿಚಯವಾದ ಮಾರ್ಗ, ಮಧ್ಯಂತರ ಅತಿಥೇಯರ ಸಂಭವನೀಯ ಪಾತ್ರ ಸೇರಿದಂತೆ ವೈಜ್ಞಾನಿಕ ಕ್ಷೇತ್ರಗಳ ಕಾರ್ಯಾಚರಣೆ ಕುರಿತು ಸಮಗ್ರ ತನಿಖೆ ನಡೆಸಲು ಡೈರೆಕ್ಟರ್ ಜನರಲ್ ಗೆ 73ನೇ ವಿಶ್ವ ಆರೋಗ್ಯ ಸಮಾವೇಶದಲ್ಲಿ ವಿವಿಧ ರಾಷ್ಟ್ರಗಳು ಮನವಿ ಮಾಡಿತ್ತು.
''ಕೋವಿಡ್-19 ಸನ್ನಿವೇಶವನ್ನು ವಿಶ್ವ ಆರೋಗ್ಯ ಸಂಸ್ಥೆ ಸಮರ್ಥವಾಗಿ ನಿಭಾಯಿಸಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಮೃದು ಧೋರಣೆ ಅನುಸರಿಸುತ್ತಿದೆ. ಸರಿಯಾದ ಸಮಯಕ್ಕೆ ಜಗತ್ತಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಶ್ವ ಆರೋಗ್ಯ ವಿಫಲವಾಗಿದೆ'' ಎಂದು ಪದೇ ಪದೇ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರುತ್ತಿದ್ದರು.
ಇನ್ನೂ ಕೊರೊನಾ ವೈರಸ್ ಜನ್ಮ ರಹಸ್ಯದ ಬಗ್ಗೆ ತರಹೇವಾರಿ ವರದಿಗಳು ಹರಿದಾಡುತ್ತಿರುವುದು ಹಲವು ರಾಷ್ಟ್ರಗಳ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ, ಕೊರೊನಾ ವೈರಸ್ ಔಟ್ ಬ್ರೇಕ್ ಬಗ್ಗೆ ನಿಷ್ಪಕ್ಷಪಾತದ ತನಿಖೆಗೆ ಹಲವು ದೇಶಗಳು ಆಗ್ರಹಿಸಿವೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಇದೀಗ ಒಪ್ಪಿಗೆ ನೀಡಿದೆ.












Click it and Unblock the Notifications