ಚೀನಾದಲ್ಲಿ ಕೋವಿಡ್‌ನ ಹೊಸ ತಳಿ, ಉಲ್ಬಣಿಸಿದ ಸೋಂಕು: ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ
ಜಿನೀವಾ, ಡಿಸೆಂಬರ್ 22: ಚೀನಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ನ ಹೊಸ ರೂಪಾಂತರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹೊಸ ತಳಿ ಒಮಿಕ್ರಾನ್ ಸಬ್‌ವೇರಿಯಂಟ್‌ನಿಂದ (BF.7) ಸಾವುಗಳು ಹೆಚ್ಚಾಗುತ್ತಿವೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ WHO ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ನಾವು ಚಿಂತಾಕ್ರಾಂತರಾಗಿದ್ದೇವೆ ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.
ಅತೀ ತ್ವರಿತವಾಗಿ ಜನರಿಗೆ ಲಸಿಕೆ ನೀಡಬೇಕೆಂದು ಚೀನಾ ಆಡಳಿತಕ್ಕೆ ಘೆಬ್ರೆಯೆಸಸ್ ಸೂಚಿಸಿದ್ದಾರೆ.
ಸೋಂಕು ತೀವ್ರವಾಗಿ ಉಲ್ಬಣಗಳ್ಳುತ್ತಿದೆ. ಹಲವಾರು ಸಾವುಗಳಾಗಿರುವ ಬಗ್ಗೆ ವರದಿಯಾಗಿದೆ. ಚೀನಾದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತುಂಬಾ ಕಾಳಜಿ ವಹಿಸುತ್ತದೆ' ಎಂದು ಘೆಬ್ರೆಯೆಸಸ್ ಹೇಳಿದ್ದಾರೆ. ಈ ವಿಚಾರವಾಗಿ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ರೋಗದ ತೀವ್ರತೆ, ಆಸ್ಪತ್ರೆಯ ದಾಖಲಾತಿಗಳು ಮತ್ತು ತೀವ್ರ ನಿಗಾ ಅಗತ್ಯತೆಗಳ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಅವರು ಚೀನಾ ದೇಶಕ್ಕೆ ಅವರು ಮನವಿ ಮಾಡಿದ್ದಾರೆ.
'ದೇಶದಾದ್ಯಂತ ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ಹಾಕುವ ಪ್ರಯತ್ನಗಳು ಜಾರಿಯಲ್ಲಿರಬೇಕು. ಚೀನಾಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧವಾಗಿದೆ. ದೇಶದ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ನಾವು ನಮ್ಮ ಬೆಂಬಲವನ್ನು ನೀಡುತ್ತೇವೆ' ಎಂದು ಅವರು ಹೇಳಿದ್ದಾರೆ.
2020 ರಿಂದ, ಕೋವಿಡ್ ವಿಚಾರದಲ್ಲಿ ಚೀನಾ ಕಟ್ಟುನಿಟ್ಟಾದ ಆರೋಗ್ಯ ನಿರ್ಬಂಧಗಳನ್ನು ವಿಧಿಸಿದೆ. ಇದನ್ನು ಮುಂದುವರಿಸಬೇಕೆಂದು ಅವರು ತಿಳಿಸಿದ್ದಾರೆ.

ಈ ಕಟ್ಟುನಿಟ್ಟಿನ ಕ್ರಮಗಳಿಗೆ ಚೀನಾದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ತನ್ನ ಕೋವಿಡ್ ನಿರ್ಬಂಧಗಳನ್ನು ಡಿಸೆಂಬರ್‌ನಲ್ಲಿ ಚೀನಾ ನಿರ್ಬಂಧಗೊಳಿಸಿತು.
ನಿರ್ಬಂಧಗಳನ್ನು ಸಡಿಲಗೊಳಿಸಿದಾಗಿನಿಂದ ಚೀನಾದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ವಯಸ್ಸಾದವರಲ್ಲಿ ಹೆಚ್ಚಿನವರು ಮೃತಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ವೈರಸ್‌ನಿಂದ ಉಂಟಾದ ಉಸಿರಾಟದ ವೈಫಲ್ಯದಿಂದ ಮೃತಪಟ್ಟವರನ್ನು ಮಾತ್ರ, 'ಕೋವಿಡ್‌ನಿಂದ ಮರಣ ಹೊಂದಿದವರು' ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ವ್ಯಾಕ್ಸಿನೇಷನ್‌ನ ಅಗತ್ಯತೆಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಗಳ ಮುಖ್ಯಸ್ಥ ಮೈಕೆಲ್ ರಯಾನ್ ಒತ್ತಿಹೇಳಿದ್ದಾರೆ.
'ಹೊಸ ಒಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟಕರ' ಎಂದು ಅವರು ಹೇಳಿದ್ದಾರೆ.
ಹೊಸ ತಳಿ ಒಮಿಕ್ರಾನ್ ಸಬ್‌ವೇರಿಯಂಟ್‌ನ (BF.7) ನಾಲ್ಕು ಪ್ರಕರಣಗಳು ಭಾರತದಲ್ಲೂ ಕಾಣಿಸಿಕೊಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಇಂದು ತಜ್ಞರ ಸಭೆ ನಡೆಸಲಿದ್ದಾರೆ.












Click it and Unblock the Notifications