ಮೋದಿಗೆ ಹೆದರಿ ದಾವೂದ್ ಇಬ್ರಾಹಿಂ ದೇಶ ಬಿಟ್ಟು ಪರಾರಿ
ನವದೆಹಲಿ, ಮೇ 21: ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ದಿನಗಣನೆ ಆರಂಭವಾಗುತ್ತಿದ್ದಂತೆಯೇ , ಭೂಗತ ಲೋಕದ ಪಾತಕಿ ಮತ್ತು ಮುಂಬೈ ಬಾಂಬ್ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಿಂದ ಪರಾರಿಯಾಗಿದ್ದಾನೆ.
ಮೋದಿ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆಯೇ ಕಂಗಾಲಾಗಿರುವ ದಾವೂದ್, ಅಪಘಾನಿಸ್ತಾನ - ಪಾಕಿಸ್ತಾನದ ಗಡಿ ಭಾಗದಲ್ಲಿನ ಪ್ರದೇಶದಲ್ಲಿ ತನ್ನ ನೆಲೆಯನ್ನು ಬದಲಿಸಿಕೊಂಡಿದ್ದಾನೆಂದು DNA ಪತ್ರಿಕೆ ವರದಿಯಾಗಿದೆ.
1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಆಸರೆಯಲ್ಲಿ ಕರಾಚಿ ಮತ್ತು ದುಬೈನಲ್ಲಿ ತನ್ನ ಕ್ರಿಮಿನಲ್ ಕೆಲಸಗಳನ್ನು ರಾಜಾರೋಷವಾಗಿ ನಡೆಸಿಕೊಂಡು ಬರುತ್ತಿದ್ದ.
ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸುತ್ತಿದ್ದಂತೆಯೇ, ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿರುವ ದಾವೂದ್ ಚೇಲಾಗಳು ಭೂಗತರಾಗಿದ್ದಾರೆಂದು ಪತ್ರಿಕೆ ವರದಿಮಾಡಿದೆ.

ದಾವೂದ್ ಇಬ್ರಾಹಿಂಗೆ ಐಎಸ್ಐ ಭದ್ರತೆ
ತಾಲಿಬಾಲ್ ಪ್ರಾಬಲ್ಯವಿರುವ ಗಡಿಭಾಗದಲ್ಲಿ ಅವಿತುಕೊಂಡಿರುವ ದಾವೂದ್ ಇಬ್ರಾಹಿಂಗೆ ಐಎಸ್ಐ ಭದ್ರತೆಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ತನಗೆ ಭದ್ರತೆ ಹೆಚ್ಚಿಸ ಬೇಕೆಂದು ದಾವೂದ್ ಮಾಡಿದ ಮನವಿಗೆ ಕೂಡಲೇ ಸ್ಪಂಧಿಸಿರುವ ಐಎಸ್ಐ ಇನ್ನಷ್ಟು ಶಸ್ತ್ರಸಜ್ಜಿತ ಕಮಾಂಡೋಗಳ ಭದ್ರತೆಯನ್ನು ದಾವೂದಿಗೆ ನೀಡಲಿದೆ.

ಸಂದರ್ಶನದಲ್ಲಿ ಮೋದಿ
ಚುನಾವಣಾ ಪ್ರಚಾರದ ಅಭಿಯಾನದಲ್ಲಿ ಮತ್ತು ಸಂದರ್ಶನದಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ದೇಶದ್ರೋಹಿ ಕೆಲಸ ಮಾಡಿದ ಯಾರನ್ನೂ ನಾವು ಬಿಡುವುದಿಲ್ಲ. ಅದರಂತೇ, ದಾವೂದ್ ಇಬ್ರಾಹಿಂ ಎಲ್ಲೇ ಇರಲಿ ಅವನ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಮೋದಿ ಹೇಳಿದ್ದರು.

ಬಿನ್ ಲಾಡೆನ್ ಮಾದರಿ ಬೇಟೆ
ಮೋದಿ ಪ್ರಧಾನಿಯಾಗುತ್ತಿದ್ದಂತೇ, ಅಮೆರಿಕಾದ ಪಡೆಗಳು ಒಸಾಮ ಬಿನ್ ಲಾಡೆನ್ ಬೇಟೆಯಾಡಿದ ರೀತಿಯಲ್ಲಿ ಭಾರತದ ರಕ್ಷಣಾ ಪಡೆ ತನ್ನನ್ನೂ ಎತ್ತಿಕೊಂಡು ಹೋಗಬಹುದು ಎನ್ನುವ ಭೀತಿ ದಾವೂದಿಗೆ ಕಾಡುತ್ತಿದೆ. ಹಾಗಾಗಿ ತಾಲಿಬಾಲ್ ಪ್ರಾಬಲ್ಯವಿರುವ ಗಡಿಯಲ್ಲಿ ತನ್ನ ನೆಲೆಯನ್ನು ಶಿಫ್ಟ್ ಮಾಡಿಕೊಂಡಿದ್ದಾನೆಂದು DNA ಪತ್ರಿಕೆ ವರದಿ ಮಾಡಿದೆ.

ಚೇಲಾಗಳೂ ಭೂಗತ
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೇ, ದಾವೂದ್ ಚೇಲಾಗಳು ಮುಂಬೈ ಮತ್ತು ಮಹಾರಾಷ್ಟ್ರದಿಂದ ಭೂಗತರಾಗಿದ್ದಾರೆ. ಹಲವು ಭೂಗತ ಪಾತಕಿಗಳು ವಿದೇಶಕ್ಕೆ ಈಗಾಗಲೇ ಪಲಾಯನ ಮಾಡಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.

ಗುಪ್ತಚರ ಇಲಾಖೆ
ಭಾರತದ ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಅಜಿತ್ ದಾವೋಲ್ ಅವರನ್ನು ಮೋದಿ ಸೋಮವಾರ (ಮೇ 19) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೇಶಕ್ಕಿರುವ ಭದ್ರತಾ ಸವಾಲನ್ನು ದಾವೋಲ್ ವಿವರಿಸಿದ್ದಾರೆಂದು ವರದಿಯಾಗಿದೆ.












Click it and Unblock the Notifications