ರಷ್ಯಾ-ಉಕ್ರೇನ್ ಯುದ್ಧ ದಿನ 30: ಪ್ರಮುಖ ಬೆಳವಣಿಗೆಗಳ ರೌಂಡ್‌ಅಪ್
ಕೀವ್, ಮಾರ್ಚ್ 25: ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿ ಇಂದಿಗೆ ಮೂವತ್ತು ದಿನಗಳು ಆಗಿದೆ. ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದಾಗಿನಿಂದ, ರಷ್ಯಾ ಉಕ್ರೇನ್ ಮೇಲೆ 1,804 ವೈಮಾನಿಕ ದಾಳಿಗಳನ್ನು ನಡೆಸಿದೆ. ಇದರಲ್ಲಿ 467 ಕ್ಷಿಪಣಿಗಳು ಸೇರಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ಜನರು "ಶಾಂತಿಯನ್ನು ಸಾಧಿಸಬೇಕಾಗಿದೆ" ಮತ್ತು ಲಕ್ಷಾಂತರ ಜನರು ಪಲಾಯನ ಮಾಡಲು ಕಾರಣವಾದ ರಷ್ಯಾದ ಬಾಂಬ್ ದಾಳಿಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಪ್ರಾದೇಶಿಕ ತುರ್ತು ಸೇವೆಗಳ ಪ್ರಕಾರ, ದೇಶದ ನಾಲ್ಕನೇ ಅತಿದೊಡ್ಡ ನಗರವಾದ ಡ್ನಿಪ್ರೊದ ಹೊರವಲಯದಲ್ಲಿರುವ ಉಕ್ರೇನಿಯನ್ ಮಿಲಿಟರಿ ಘಟಕದ ಮೇಲೆ ರಷ್ಯಾದ ಪಡೆಗಳು ಎರಡು ಕ್ಷಿಪಣಿಗಳನ್ನು ಹಾರಿಸಿದೆ.
ಯುನೈಟೆಡ್ ಕಿಂಗ್‌ಡಮ್‌ನ ರಕ್ಷಣಾ ಸಚಿವಾಲಯವು ಉಕ್ರೇನಿಯನ್ ಪಡೆಗಳು "ಬರ್ಡಿಯಾನ್ಸ್ಕ್‌ನಲ್ಲಿ ಲ್ಯಾಂಡಿಂಗ್ ಹಡಗು ಮತ್ತು ಯುದ್ಧಸಾಮಗ್ರಿ ಸಂಗ್ರಹಣೆ ಡಿಪೋಗಳು ಸೇರಿದಂತೆ ಉಕ್ರೇನ್‌ನ ರಷ್ಯಾದ ಆಕ್ರಮಿತ ಪ್ರದೇಶಗಳಲ್ಲಿ ದಾಳಿಯನ್ನು ಪ್ರಾರಂಭ ಮಾಡಿದೆ," ಎಂದು ಹೇಳಿದ್ದಾರೆ. ಈ ಮೂವತ್ತನೇ ದಿನದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಪಟ್ಟಿ ಇಲ್ಲಿದೆ ಮುಂದೆ ಓದಿ....

ನಾಲ್ಕು ಪೂರ್ವ ಯುರೋಪಿಯನ್ ದೇಶಗಳಲ್ಲಿ ಪಡೆ ನಿಯೋಜನೆ
ಬ್ರಸೆಲ್ಸ್‌ನಲ್ಲಿ ಸಭೆ ನಡೆಸಿದ ನ್ಯಾಟೋ ನಾಯಕರು ಉಕ್ರೇನ್‌ನ ಗಡಿ ಭಾಗದಲ್ಲಿ ಇರುವ ನಾಲ್ಕು ಪೂರ್ವ ಯುರೋಪಿಯನ್ ದೇಶಗಳಿಗೆ ಹೆಚ್ಚಿನ ಪಡೆಗಳನ್ನು ನಿಯೋಜಿಸುವುದಾಗಿ ಘೋಷಿಸಿದರು. ಈ ನಡುವೆ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್, "ಪುಟಿನ್ ಈ ದಾಳಿಯ ಮೂಲಕ ಪಶ್ಚಿಮ ರಾಷ್ಟ್ರಗಳನ್ನು ವಿಭಜನೆ ಮಾಡುವಲ್ಲಿ ವಿಫಲವಾಗಿದ್ದಾರೆ," ಎಂದು ಹೇಳಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆ ರಷ್ಯಾದ ಪ್ರಮುಖ 20 ಪ್ರಮುಖ ಆರ್ಥಿಕತೆಗಳ ಗುಂಪಿನಿಂದ ರಷ್ಯಾವನ್ನು ಹೊರತುಪಡಿಸಲಾಗುತ್ತದೆ. ಈ ನಿರ್ಧಾರವು ಗುಂಪಿಗೆ ಬಿಟ್ಟದ್ದು ಎಂದು ಹೇಳಿದರು. ಬೈಡೆನ್ ಶುಕ್ರವಾರ ಪೋಲೆಂಡ್‌ಗೆ ಪ್ರಯಾಣ ಮಾಡಿದ್ದಾರೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ಉಕ್ರೇನಿಯನ್ ನಿರಾಶ್ರಿತರು ಇದ್ದಾರೆ. ಉಭಯ ದೇಶಗಳ ನಡುವಿನ ಗಡಿಯ ಸಮೀಪವಿರುವ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಯುಎಸ್ ನ್ಯಾಟೋ ಸೈನಿಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಉಕ್ರೇನ್‌ನಲ್ಲಿ "ಶಾಶ್ವತ ಶಾಂತಿ" ಗಾಗಿ ಕದನ ವಿರಾಮ ಒಪ್ಪಂದವನ್ನು ತರಲು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಜೊತೆ ಮಾತುಕತೆ ನಡೆಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧ
ರಷ್ಯಾದ ಮೇಲೆ ನಿರ್ಬಂಧಗಳು ಹೆಚ್ಚಳವಾಗುತ್ತಲೇ ಇದೆ. ರಷ್ಯಾದ ಕೇಂದ್ರ ಬ್ಯಾಂಕ್‌ನ ಚಿನ್ನದ ನಿಕ್ಷೇಪಗಳನ್ನು ಒಳಗೊಂಡ ವಹಿವಾಟುಗಳನ್ನು ನಿರ್ಬಂಧಿಸಲು ಜಿ7 ಮತ್ತು ಯುರೋಪಿಯನ್ ಯೂನಿಯನ್ ನಿರ್ಧಾರ ಮಾಡಿದೆ. ರಷ್ಯಾದ ರಾಜಕಾರಣಿಗಳ ಮೇಲೆ ಹೊಸ ನಿರ್ಬಂಧಗಳನ್ನು ವಾಷಿಂಗ್ಟನ್ ವಿಧಿಸಿದೆ. ಆದರೆ ಯುಕೆ 59 ರಷ್ಯಾದ ಪ್ರಮುಖ ವ್ಯಕ್ತಿಗಳ ಮೇಲೆ, ಘಟಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಬೆಲಾರಸ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಮತ್ತು ಅವರ ಕುಟುಂಬದ ಮೇಲೆ ಮತ್ತು ರಷ್ಯಾದ ಮಾಧ್ಯಮದ ಸದಸ್ಯರ ಮೇಲೆ ಆಸ್ಟ್ರೇಲಿಯಾ ಹೊಸ ನಿರ್ಬಂಧಗಳನ್ನು ಪ್ರಕಟಿಸಿದೆ. ಜಪಾನ್ ಇನ್ನೂ 25 ರಷ್ಯನ್ನರ ಆಸ್ತಿಗಳನ್ನು ಫ್ರೀಜ್ ಮಾಡಲು ಮತ್ತು ಯುದ್ಧಕ್ಕೆ ಪ್ರತಿಕ್ರಿಯೆಯಾಗಿ 81 ರಷ್ಯಾದ ಸಂಸ್ಥೆಗಳಿಗೆ ರಫ್ತುಗಳನ್ನು ನಿಷೇಧಿಸಲು ನಿರ್ಧರಿಸಿದೆ.

ನಿರಾಶ್ರಿತರ ಸ್ಥಿತಿ ಹೇಗಿದೆ?
ಉಕ್ರೇನ್‌ನ ಅರ್ಧಕ್ಕಿಂತ ಹೆಚ್ಚು ಮಕ್ಕಳು ತಮ್ಮ ಮನೆಗಳಿಂದ ನೆರೆಯ ದೇಶಗಳಿಗೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಹೇಳಿದೆ. ರಷ್ಯಾದ ಆಕ್ರಮಣದಿಂದ ಪಲಾಯನ ಮಾಡುತ್ತಿರುವ 100,000 ಉಕ್ರೇನಿಯನ್ನರಿಗೆ ವ್ಯವಸ್ಥೆ ಕಲ್ಪಿಸುವ ನಿರ್ಧಾರ ಮಾಡಲಾಗಿದೆ ಎಂದು ಯುಎಸ್ ಹೇಳಿದೆ. ಯುಎನ್ ಪ್ರಕಾರ 3.6 ಮಿಲಿಯನ್‌ಗಿಂತಲೂ ಹೆಚ್ಚು ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಈಗಾಗಲೇ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. 2.1 ದಶಲಕ್ಷಕ್ಕೂ ಹೆಚ್ಚು ಜನರು ಈವರೆಗೆ ಪೋಲೆಂಡ್‌ಗೆ ತೆರಳಿದ್ದಾರೆ. ಸಾರ್ವಜನಿಕ ಸೇವೆಗಳು ನಿಭಾಯಿಸಲು ಹೆಣಗಾಡುವಂತಾಗಿದೆ ಎಂದು ಸರ್ಕಾರವು ಹೇಳಿದೆ.
Recommended Video

ಇಂಧನ, ಅನಿಲ ಬಿಕ್ಕಟ್ಟು
ತಮ್ಮ ದೇಶಕ್ಕೆ ಅನಿಲ ಕೊರತೆಯನ್ನು ನಿಭಾಯಿಸಲು ವ್ಯವಸ್ಥೆಯ ಅಗತ್ಯವಿದೆ ಎಂದು ಜರ್ಮನಿಯು ಹೇಳಿದೆ. ರಷ್ಯಾ ಒಪ್ಪಂದದ ಪಾವತಿಗಳನ್ನು ರೂಬಲ್‌ಗಳಿಗೆ ಬದಲಾಯಿಸಲು ಆದೇಶ ನೀಡಿದ ಒಂದು ದಿನದ ನಂತರದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಕೆನಡಾವು ಈ ವರ್ಷ ತೈಲ ಮತ್ತು ಅನಿಲ ರಫ್ತುಗಳನ್ನು ದಿನಕ್ಕೆ 300,000 ಬ್ಯಾರೆಲ್‌ಗಳವರೆಗೆ ಹೆಚ್ಚಿಸಲು ಯೋಜಿಸಿದೆ ಎಂದು ಹೇಳಿದೆ. ರಷ್ಯಾದ ಇಂಧ ಸರಬರಾಜಿಗೆ ನಿರ್ಬಂಧ ಹೇರಿದ ಬಳಿಕ ಹಲವಾರು ದೇಶಗಳಲ್ಲಿ ಈ ಸ್ಥಿತಿ ಉಂಟಾಗಿದೆ. ತೈಲ, ಅನಿಲ ಮತ್ತು ಇತರ ಸರಕುಗಳಿಗೆ ಜಾಗತಿಕವಾಗಿ ಬೆಲೆ ಏರಿಕೆ ಆಗುತ್ತಿದೆ.












Click it and Unblock the Notifications