ಜನರ ಬದುಕು ಬೀದಿಗೆ ಬಿದ್ದರೂ ರಾಜಕಾರಣಿಗಳಿಗೆ ಚುನಾವಣೆ ಚಿಂತೆ!
ರಾಜಕಾರಣಿಗಳ ಬದುಕು ಇಷ್ಟೆ, ಚುನಾವಣೆ & ಅಧಿಕಾರ. ಜನರ ಬದುಕು ಏನೇ ಆಗಿದ್ದರು ಓಕೆ, ತಮ್ಮ ಬೇಳೆ ಬೇಯಬೇಕು ಅಷ್ಟೇ. ಇದು ಒಂದು ದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಜಗತ್ತಿನ ಬಹುತೇಕ ದೇಶಗಳ ರಾಜಕಾರಣಿಗಳ ಗೋಳು ಹೀಗೆ ಇರುತ್ತದೆ. ಹೀಗೆ ಅದೊಂದು ದೇಶ ಯುದ್ಧದ ಕುಲುಮೆಯಲ್ಲಿ ಧಗಧಗ ಹೊತ್ತಿ ಉರಿಯುವಾಗ ಅಲ್ಲಿನ ಅಧ್ಯಕ್ಷರು ಮಾತ್ರ ಚುನಾವಣೆ ಬಗ್ಗೆ ಚಿಂತಿಸುತ್ತಿದ್ದಾರೆ!
ಹೌದು, ಉಕ್ರೇನ್ ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗಿದೆ. ರಷ್ಯಾ ನಡೆಸುತ್ತಿರುವ ಈ ದಾಳಿ ಅದೆಷ್ಟು ಭೀಕರ ಎಂದರೆ ಉಕ್ರೇನ್ ನಲುಗಿ ಹೋಗಿದೆ. ಪರಿಸ್ಥಿತಿ ಹೀಗಿದ್ದಾಗ ಅಲ್ಲಿನ ಅಧ್ಯಕ್ಷರಿಗೆ ಈಗ ಚುನಾವಣೆ ಚಿಂತೆ ಶುರುವಾಗಿದೆ. ಅಲ್ಲದೆ ಉಕ್ರೇನ್ ಚುನಾವಣೆಗೆ ಪಶ್ಚಿಮ ದೇಶಗಳು ಬೆಂಬಲ ನೀಡಿದರೆ ಚುನಾವಣೆ ನಡೆಸುತ್ತೀವಿ ಅಂತಿದ್ದಾರೆ. ಆ ಕಡೆ ಜನ ಬೀದಿಗೆ ಬಿದ್ದು ನರಳುತ್ತಿರುವಾಗ, ಉಕ್ರೇನ್‌ನ ಚುನಾವಣೆ ಬಗ್ಗೆ ಚರ್ಚೆ ಬೇಕಿತ್ತಾ? ಅಂತಾ ಬಿಸಿಬಿಸಿ ಚರ್ಚೆ ಶುರುವಾಗಿದೆ. ಹಾಗಾದರೆ ಉಕ್ರೇನ್ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ಯಾವಾಗ? ಚುನಾವಣೆಗೆ ನಡೆಸಲು ರಷ್ಯಾ ಬಿಡುತ್ತಾ? ಇಲ್ಲ ರಷ್ಯಾ ಬಾಂಬ್ ಹಾಕುತ್ತಾ? ಮುಂದೆ ಓದಿ

ಊರಿಗೆ ಬೆಂಕಿ ಬಿದ್ದಾಗ...
ಉಕ್ರೇನ್ ತನ್ನ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿ ರಷ್ಯಾ ಕೂಡ ಭೀಕರ ದಾಳಿಗೆ ಮುಂದಾಗಿದೆ. ಅದರಲ್ಲೂ ಉಕ್ರೇನ್‌ನ ಧಾನ್ಯ ಸಂಗ್ರಹ ಗೋದಾಮು ಮೇಲೆ ರಷ್ಯಾ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದೆ ಎಂಬ ಆರೋಪ ಇದೆ. ಹೀಗೆ 1 ತಿಂಗಳಲ್ಲಿ ಸುಮಾರು 2,70,00 ಮೆಟ್ರಿಕ್ ಟನ್ ಧಾನ್ಯ ನಾಶವಾಗಿ ಹೋಗಿದೆ ಎಂದು ಉಕ್ರೇನ್ ಹೇಳಿತ್ತು. ಇಷ್ಟಾದರೂ ಉಕ್ರೇನ್ ಮತ್ತು ರಷ್ಯಾ ಹಠ ಬಿಟ್ಟು ಸಂಧಾನಕ್ಕೆ ಕೂರುತ್ತಿಲ್ಲ. ಯುದ್ಧ ಮತ್ತಷ್ಟು ಭೀಕರವಾಗುತ್ತಿದ್ದು, ಮುಂದೆ ಏನು? ಅನ್ನೋದೇ ಉಕ್ರೇನ್ ಜನರಿಗೆ ಗೊತ್ತಾಗ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. 2024ರ ಮಾರ್ಚ್ 31ಕ್ಕೆ ಉಕ್ರೇನ್ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಜೀವ ಉಳಿಸಿಕೊಳ್ಳಲು ಊರು ಬಿಟ್ಟ ಜನ
ಉಕ್ರೇನ್ ಡ್ರೋನ್ ಸಹಾಯದಿಂದ ರಷ್ಯಾ ಪ್ರದೇಶದ ಮೇಲೆ ದಾಳಿ ನಡೆಸುವಾಗ, ರಷ್ಯಾ ಕೂಡ ಭಯಾನಕ ದಾಳಿಗೆ ಸಜ್ಜಾಗುತ್ತಿದೆ. ಹೀಗೆ ರಷ್ಯಾ & ಉಕ್ರೇನ್ ಗಡಿಭಾಗದಲ್ಲಿ ಯುದ್ಧದ ಭೀಕರತೆ ಜೋರಾಗಿದೆ. ಈಗಾಗಲೇ ರಷ್ಯಾ ತನ್ನ ಗಡಿ ಭಾಗದಲ್ಲಿ ವಾಸವಿರುವ ಹಳ್ಳಿಗಳ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆದ್ರೆ ಉಕ್ರೇನ್ ಭಾಗದ ಜನರು ಜೀವ ಉಳಿಸಿಕೊಳ್ಳಲು ಊರನ್ನೇ ಬಿಟ್ಟು ಓಡಿ ಹೋಗಿದ್ದಾರೆ. ಇಷ್ಟಾದರೂ ಸೈಲೆಂಟ್ ಆಗದ ಉಕ್ರೇನ್ ಸೇನೆ ಮತ್ತು ರಷ್ಯಾ ಸೇನೆ ಒಬ್ಬರ ಮೇಲೆ ಮತ್ತೊಬ್ಬರು ಬಾಂಬ್ ಹಾಗೂ ಕ್ಷಿಪಣಿ ಹಾಕುತ್ತಾ ರಕ್ತ ಚೆಲ್ಲಾಡುತ್ತಿವೆ. ಇದರ ನಡುವೆ ಚುನಾವಣೆ ಬಗ್ಗೆ ಚಿಂತೆ ಬೇರೆ ಶುರುವಾಗಿದೆ ವೊಲೊಡಿಮಿರ್ ಝೆಲೆನ್ಸ್ಕಿಗೆ.

ಆಹಾರ ಪದಾರ್ಥ ತರಿಸಲು ಆಗುತ್ತಿಲ್ಲ
ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದ್ರೆ ಕೆಲ ದಿನದ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತವು ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಈ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕೂ ಪರದಾಡುತ್ತಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಆಹಾರ ಧಾನ್ಯಗಳು ರಷ್ಯಾ ದಾಳಿಯಿಂದ ಮಣ್ಣುಪಾಲಾಗಿದೆ. ಇರುವ ಒಂದು ದಾರಿಯೂ ಬಂದ್ ಆಗಿ ಜನರು ನಲುಗಿದ್ದಾರೆ.
ಒಟ್ನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಅದರಲ್ಲೂ ಅಮೆರಿಕ & ನ್ಯಾಟೋ ರಾಷ್ಟ್ರಗಳು ತಮ್ಮ ಬೆಂಬಲಕ್ಕೆ ನಿಂತರೆ ಚುನಾವಣೆ ಪಕ್ಕಾ ಅಂತಿದ್ದಾರೆ ಉಕ್ರೇನ್ ಅಧ್ಯಕ್ಷ. ಆದ್ರೆ ಉಕ್ರೇನ್ ಜನ ತಮಗೆ ತಿನ್ನಲು ಅನ್ನ ಇಲ್ಲ ಅಂತಿದ್ದಾರೆ. ಇದರ ಜೊತೆಗೆ ರಷ್ಯಾ ಯುದ್ಧವನ್ನು ಮತ್ತಷ್ಟು ಭೀಕರಗೊಳಿಸುತ್ತಿದೆ. ಇದನ್ನೆಲ್ಲ ನೋಡುತ್ತಿದ್ದರೆ ಉಕ್ರೇನ್ ಮತ್ತು ರಷ್ಯಾ ಯುದ್ಧ ಮುಂದೆ 3ನೇ ಮಹಾಯುದ್ಧವಾಗಿ ಬದಲಾಗುವ ಮುನ್ಸೂಚನೆ ಸಿಗುತ್ತಿದೆ. ಇಷ್ಟಾದರೂ ಚುನಾವಣೆ ಬಗ್ಗೆ ಚಿಂತೆ ಬೇಕಾ? ಎಂಬ ಪ್ರಶ್ನೆಯೂ ಮೂಡಿದೆ.












Click it and Unblock the Notifications