Rishi Sunak: ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ ಪೊಲೀಸರು
ಲಂಡನ್, ಜನವರಿ, 22: ರಾಜಕಾರಣಿಗಳು ಏನು ಮಾಡಿದರೂ ನಡೆಯುತ್ತದೆ ಎಂಬುದಕ್ಕೆ ಅಪವಾದವಾಗಿ ಬ್ರಿಟನ್‌ನ ಪ್ರಧಾನಿಗೆ ಪೊಲೀಸರು ದಂಡ ವಿಧಿಸಿರುವ ಘಟನೆ ನಡೆದಿದೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಪ್ರಧಾನಿ ರಿಷಿ ಸುನಕ್‌ಗೆ ಬ್ರಿಟನ್ ಪೊಲೀಸರು ದಂಡ ವಿಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ವಿಡಿಯೋ ಚಿತ್ರೀಕರಿಸುವಾಗ, ಚಲಿಸುತ್ತಿರುವ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಸೀಟ್ ಬೆಲ್ಟ್ ತೆಗೆದಿದ್ದರು. ಈ ಕಾರಣಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ. ಈಗಾಗಲೇ ನಾಯಕತ್ವ ಬದಲಾವಣೆ, ಆರ್ಥಿಕ ಹಿಂಜರಿತ ಸೇರಿ ಹಲವು ಕಾರಣಗಳಿಂದ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಇದು ಮತ್ತೊಂದು ಹೊಡೆತ ಎನ್ನಲಾಗುತ್ತಿದೆ.
ಉತ್ತರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುವಾಗ ಈ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಸುನಕ್ ಅವರ ವಿಡಿಯೋದಲ್ಲಿ ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಾಗಿತ್ತು.

ಆದರೆ, ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಜನ ಅವರು ಸೀಟ್ ಬೆಲ್ಟ್ ಧರಿಸದೆ ಇರುವುದನ್ನು ಜನ ಬೊಟ್ಟು ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆದ ನಂತರ ಸ್ಥಳೀಯ ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದರು. ಬಳಿಕ ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ.
ತುರ್ತು ಸೇವೆಗಳಿಗೆ, ಆರೋಗ್ಯ ಸೇವೆಗಳಿಗೆ ಹೊರತು ಪಡಿಸಿ ಬ್ರಿಟನ್‌ನಲ್ಲಿ ಒಬ್ಬ ವ್ಯಕ್ತಿಯು ಸೀಟ್‌ಬೆಲ್ಟ್ ಧರಿಸದಿದ್ದರೇ 500 ಪೌಂಡ್‌ಗಳ (620 ಡಾಲರ್) ವರೆಗೆ ದಂಡವನ್ನು ವಿಧಿಸಬಹುದು.
ಇದೊಂದು ಸಣ್ಣ ತಪ್ಪು ಎಂದು ಪ್ರಧಾನಿ ರಿಷಿ ಸುನಕ್ ಬಳಿಕ ಕ್ಷಮೆಯಾಚಿಸಿದ್ದಾರೆ. "ತಮ್ಮಿಂದ ತಪ್ಪಾಗಿದೆ ಎಂದು ಪ್ರಧಾನಮಂತ್ರಿ ಸಂಪೂರ್ಣವಾಗಿ ಒಪ್ಪಿಕೊಂಡು, ಕ್ಷಮೆಯಾಚಿಸಿದ್ದಾರೆ. ಅವರು ಖಂಡಿತವಾಗಿಯೂ ನಿಗದಿತ ದಂಡವನ್ನು ಕಟ್ಟುತ್ತಾರೆ" ಎಂದು ರಿಷಿ ಸುನಕ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು, ಇದು ಎರಡನೇ ಬಾರಿ ರಿಷಿ ಸುನಕ್‌ಗೆ ಪೊಲೀಸರು ದಂಡ ವಿಧಿಸಿರುವುದು. ಕಳೆದ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ದಂಡಕ್ಕೆ ಒಳಗಾಗಿದ್ದರು.
ಪ್ರಧಾನಿ ರಿಷಿ ಸುನಕ್ ದಂಡಕ್ಕೆ ಒಳಗಾಗಿರುವುದು ಪಕ್ಷಕ್ಕೆ ಮುಜುಗರದ ವಿಷಯವಾಗಿದೆ. ಏಕೆಂದರೆ ಈಗಾಗಲೇ ಅವರ ಕನ್ಸರ್ವೇಟಿವ್ ಪಕ್ಷವು ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ಜನವರಿ 2025 ರ ವೇಳೆಗೆ ಚುನಾವಣೆ ಎದುರಿಸಲಿರುವ ದೇಶದಲ್ಲಿ ಜನರ ಅಭಿಪ್ರಾಯ ಸಂಗ್ರಹಣೆ ನಡೆಯುತ್ತಿದೆ. ಇದರಲ್ಲಿ ವಿರೋಧ ಪಕ್ಷ ಲೇಬರ್ ಪಕ್ಷಕ್ಕಿಂತ ಆಡಳಿತ ಪಕ್ಷವು ಜನಪ್ರಿಯತೆ ಕಳೆದುಕೊಂಡು ಹಿಂದಿದೆ.
ದಂಡ ವಿಧಿಸಿರುವ ಲಂಕಾಶೈರ್ ಪೊಲೀಸರನ್ನು ಲೇಬರ್ ಪಕ್ಷ ಶಾಸಕರು ಅಭಿನಂದಿಸಿದ್ದಾರೆ. "ಲಂಕಾಶೈರ್ ಪೋಲೀಸ್, ವರ್ಷಪೂರ್ತಿ ರಸ್ತೆ ಸುರಕ್ಷತೆ ಅಭಿಯಾನದಲ್ಲಿ ನೀವು ಮಾಡಿರುವ ಎಲ್ಲಾ ಕೆಲಸಗಳಿಗೂ ಧನ್ಯವಾದಗಳು. ಕಾನೂನಿಗಿಂತ ಯಾರೂ ಹೆಚ್ಚಲ್ಲ ಎಂದು ನಮಗೆ ನೆನಪಿಸುತ್ತಿರುವುದಕ್ಕೆ ಧನ್ಯವಾದಗಳು" ಎಂದು ಲೇಬರ್ ಶಾಸಕರಾದ ಕ್ಯಾಟ್ ಸ್ಮಿತ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications