Donald Trump: ಫ್ರಾನ್ಸ್ ವಿರುದ್ಧ ಶೇ. 200ರಷ್ಟು ತೆರಿಗೆ ಹೇರಿಕೆ ಎಚ್ಚರಿಕೆ, ಟ್ರಂಪ್ ಮಾತಿಗೆ ನಡುಗಿದ ಪ್ಯಾರಿಸ್!
ಡೊನಾಲ್ಡ್ ಟ್ರಂಪ್ ಹಾಗೂ ಯುರೋಪ್ ದೇಶಗಳ ನಡುವಿನ ಜಟಾಪಟಿ ಮುಂದುವರಿದಿದೆ. ಇದರ ಭಾಗವಾಗಿ ಮತ್ತೊಂದು ಕಿರಿಕಿರಿ ಶುರುವಾಗಿದ್ದು, ತಮ್ಮ ಮಾತು ಕೇಳದ ಫ್ರಾನ್ಸ್ ವಿರುದ್ಧ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಬರೋಬ್ಬರಿ ಶೇ. 200ರಷ್ಟು ತೆರಿಗೆ ಹೇರಿಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ವೇದಿಕೆ ಟ್ರೂತ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಫ್ರಾನ್ಸ್ ಅಧ್ಯಕ್ಷರು ಮಾಡಿರುವ ಮೆಸೇಜ್‌ಗಳನ್ನು ಕೂಡ ಹೊರ ಜಗತ್ತಿಗೆ ತಿಳಿಸಿದ್ದಾರೆ.
ಡೆನ್ಮಾರ್ಕ್ ಭಾಗವಾಗಿರುವ ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಅವರ ಕಣ್ಣು ಬಿದ್ದಿದೆ. ಹೀಗಿದ್ದಾಗ ಅದೇ ದ್ವೀಪ ನಮಗೆ ಬೇಕು ಎಂದು ಡೊನಾಲ್ಡ್ ಟ್ರಂಪ್ ಹಠ ಹಿಡಿದು ಕೂತಿದ್ದು, ಹೇಗಾದರೂ ಮಾಡಿ ಈ ದ್ವೀಪವನ್ನ ಅಮೆರಿಕ ಸುಪರ್ದಿಗೆ ಪಡೆಯಬೇಕೆಂದು ತಂತ್ರ ರೂಪಿಸುತ್ತಿದ್ದಾರೆ. ಆದರೆ ಈ ವಿಚಾರವಾಗಿ ಫ್ರಾನ್ಸ್ ತಮ್ಮನ್ನು ಅಪಹಾಸ್ಯ ಮಾಡುತ್ತಿದೆ ಹಾಗೂ ಟ್ರಂಪ್ ರಚಿಸುತ್ತಿರುವ ಶಾಂತಿ ಮಂಡಳಿಗೆ ಸೇರಲು ಹಿಂದೇಟು ಹಾಕುತ್ತಿದೆ ಎಂಬುದನ್ನೇ ಮುಂದೆ ಇಟ್ಟುಕೊಂಡು ಇದೀಗ ಹೊಸ ತೆರಿಗೆ ಬಾಣ ಪ್ರಯೋಗ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಪೋಸ್ಟ್ ವೈರಲ್
ಜಗತ್ತಿನ ಅತಿದೊಡ್ಡ ದ್ವೀಪ ಎಂಬ ಖ್ಯಾತಿ ಪಡೆದಿರುವ ಗ್ರೀನ್‌ಲ್ಯಾಂಡ್ ನಮಗೆ ಬೇಕೆ ಬೇಕು ಎಂಬುದು ಟ್ರಂಪ್ ಅವರ ಹಠ. ಹೀಗಿದ್ದಾಗಲೇ ಗ್ರೀನ್‌ಲ್ಯಾಂಡ್ ವಿಚಾರವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರು ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಸಂದೇಶವನ್ನು ಕಳುಹಿಸಿದ್ದರು. ಮಾಕ್ರೋನ್ ಸಂದೇಶವನ್ನು ಕೂಡ ಇದೀಗ ಟ್ರಂಪ್ ಅವರು ಸೋಷಿಯಲ್ ಮೀಡಿಯಾ ಮೂಲಕ ಹೊರ ಜಗತ್ತಿಗೆ ತಿಳಿಸಿದ್ದಾರೆ. 'Note from President Emmanuel Macron, of France' ಎಂದರೆ 'ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರಿಂದ ಬಂದಿರುವ ಸಂದೇಶ' ಅಂತಾ ಬರೆದುಕೊಂಡು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಸಿರಿಯಾ ಮತ್ತು ಇರಾನ್ ಸೇರಿದಂತೆ ಗ್ರೀನ್‌ಲ್ಯಾಂಡ್ ವಿಚಾರಗಳು ಪ್ರಸ್ತಾಪ ಆಗಿವೆ. ಹಾಗೂ ಉಕ್ರೇನ್ ಮತ್ತು ರಷ್ಯಾದ ವಿಚಾರವನ್ನು ಕೂಡ ಪ್ರಸ್ತಾಪಿಸಿರುವುದು ಗಮನಿಸಬಹುದಾಗಿದೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ವೇಳೆ ಟ್ರಂಪ್ ಹಾಗೂ ಇತರ G7 ನಾಯಕರ ಭೇಟಿಯ ಬಗ್ಗೆ ಫ್ರೆಂಚ್ ಅಧ್ಯಕ್ಷರು ಆಫರ್ ನೀಡಿರುವುದು ಬಹಿರಂಗವಾಗಿದೆ. ಉಕ್ರೇನ್, ಸಿರಿಯಾ ಮತ್ತು ರಷ್ಯನ್ನರನ್ನು ಸಹ ಆಹ್ವಾನಿಸುವ ಬಗ್ಗೆ ಮ್ಯಾಕ್ರೋನ್ ಪಸ್ತಾಪ ಮಾಡಿದ್ದಾರೆ ಎಂದು ಈ ಸಂದೇಶದ ಮೂಲಕ ಈಗ ಇಡೀ ಜಗತ್ತಿಗೆ ತಿಳಿಸಿದಂತೆ ಆಗಿದೆ. ಈಗಾಗಲೇ ಆರ್ಥಿಕ ಮುಗ್ಗಟ್ಟು ಹಾಗೂ ಆಂತರಿಕ ಬಿಕ್ಕಟ್ಟು ಫ್ರೆಂಚ್ ಆಡಳಿತವನ್ನು ಪರದಾಡುವಂತೆ ಮಾಡಿದೆ. ಹೀಗಿದ್ದಾಗ ಟ್ರಂಪ್ ಅವರ ಶೇ. 200ರಷ್ಟು ತೆರಿಗೆ ಹೇರಿಕೆ ಎಚ್ಚರಿಕೆ ಫ್ರಾನ್ಸ್ ನಾಯಕರನ್ನು ಕೆರಳಿಸಿದೆ.
ಫ್ರೆಂಚ್ ಆರ್ಥಿಕತೆಗೆ ದೊಡ್ಡ ಪೆಟ್ಟು
ಫ್ರಾನ್ಸ್ ಮೂಲಕ ಅಮೆರಿಕಗೆ ಭಾರಿ ಪ್ರಮಾಣದಲ್ಲಿ ಫ್ರೆಂಚ್ ವೈನ್ ಮತ್ತು ಷಾಂಪೇನ್ ರಫ್ತು ಆಗುತ್ತದೆ. ಅಲ್ಲದೆ ವೈನ್ & ಷಾಂಪೇನ್ ಮಾರಾಟದ ಮೂಲಕ ಭಾರಿ ಪ್ರಮಾಣದ ಆದಾಯ ಕೂಡ ಗಳಿಸುತ್ತಿದೆ ಫ್ರಾನ್ಸ್. ಆದರೆ ಈಗ ಅದಕ್ಕೇ ಪೆಟ್ಟು ಕೊಡಲು ಮುಂದಾಗಿದೆ ಅಮೆರಿಕ. ತಮ್ಮ ಜೊತೆಗೆ ಕೈಜೋಡಿಸಿ, ಮಹತ್ವದ ವಿಚಾರಗಳಲ್ಲಿ ಜೊತೆಯಾಗದ ಫ್ರಾನ್ಸ್‌ಗೆ ಪಾಠ ಕಲಿಸಲು ಟ್ರಂಪ್ ಮುಂದಾಗಿದ್ದಾರೆ. ಟ್ರಂಪ್ ಅವರ ಟ್ರೂತ್ ಪೋಸ್ಟ್ ಈಗ ಯುರೋಪ್ ಒಕ್ಕೂಟದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತಿದ್ದು, ಈ ರೀತಿಯ ನಡೆ ಬಗ್ಗೆ ಪರ ಹಾಗೂ ವಿರೋಧದ ಚರ್ಚೆ ಜೋರಾಗಿದೆ. ಅಲ್ಲದೆ ಫ್ರೆಂಚ್ ವೈನ್ ಹಾಗೂ ಷಾಂಪೇನ್ ಮೇಲೆ ಶೇ. 200ರಷ್ಟು ತೆರಿಗೆ ಹೇರಿಕೆ ಮಾಡುವ ಬಗ್ಗೆ ಟ್ರಂಪ್ ಅವರ ಪ್ರಸ್ತಾಪ ಸ್ವೀಕಾರ ಅರ್ಹವಲ್ಲ ಎಂದಿದೆ ಫ್ರಾನ್ಸ್.












Click it and Unblock the Notifications