Donald Trump 2.0: ಆಕ್ರಮಣಶೀಲ ಜಾಗತಿಕ ನಿಲುವು, ಆಂತರಿಕ ಒತ್ತಡ ಮತ್ತು ಆರ್ಥಿಕ ಅನಿಶ್ಚಿತತೆಗಳ ಸಾಲು ಸವಾಲು
ಜನವರಿ 20ರ ಮಧ್ಯಾಹ್ನ ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿ ಅಧಿಕೃತವಾಗಿ ಆರಂಭಗೊಳ್ಳಲಿದೆ. 2020ರ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋಲು ಅನುಭವಿಸಿದ ಬಳಿಕ, ಡೊನಾಲ್ಡ್ ಟ್ರಂಪ್ ಅವಿಶ್ರಾಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ತನ್ನ ಮೊದಲನೇ ಅವಧಿಯಲ್ಲಿ ಕೈಗೊಂಡ ಕ್ರಮಗಳ ಹೆಚ್ಚು ಸುಧಾರಿತ, ಸಂಘಟಿತ ಆವೃತ್ತಿಯನ್ನು ಈ ಬಾರಿ ಜಾರಿಗೆ ತರುವುದು ಟ್ರಂಪ್ ಯೋಜನೆಯಾಗಿದೆ.
ಈ ಬಾರಿಯೂ ಟ್ರಂಪ್ ಅವರ ಆದ್ಯತೆಗಳು ಹಿಂದಿನಂತೆಯೇ ಆಗಿವೆ: ಆರ್ಥಿಕತೆಗೆ ಉತ್ತೇಜನ ನೀಡಲು ತೆರಿಗೆ ಕಡಿತ, ಅಮೆರಿಕಾದ ವ್ಯಾಪಾರ ನೀತಿಯನ್ನು ಬದಲಾಯಿಸಲು ಹೆಚ್ಚಿನ ಸುಂಕ, ಮತ್ತು ಬಹಳಷ್ಟು ಅಕ್ರಮ ವಲಸಿಗರನ್ನು ಅಮೆರಿಕಾದಿಂದ ಹೊರಹಾಕಿ, ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ. ಆದರೆ, ಟ್ರಂಪ್ ಹಿಂದಿನ ಅವಧಿಗಿಂತ ಜಗತ್ತು ಈಗ ಬಹಳಷ್ಟು ಬದಲಾಗಿದ್ದು, ಟ್ರಂಪ್ ಅವರ ಭರವಸೆಗಳು ವಾಸ್ತವವಾಗಿ ಸಾಧಿತವಾಗಬಹುದು ಎನ್ನಲು ಸಾಧ್ಯವಿಲ್ಲ.

ಟ್ರಂಪ್ ಅವರ ಅಪಾಯಕಾರಿ ಆರ್ಥಿಕ ಅಜೆಂಡಾ
ಡೊನಾಲ್ಡ್ ಟ್ರಂಪ್ 2016ರಲ್ಲಿ ಮೊದಲನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾದಾಗ, ಅಮೆರಿಕಾ ದೀರ್ಘಾವಧಿಯ ಕನಿಷ್ಠ ಹಣದುಬ್ಬರವನ್ನು (ಸರಕು ಮತ್ತು ಸೇವೆಗಳ ದರ ಬಹಳ ನಿಧಾನವಾಗಿ ಏರುವುದು) ಹೊಂದಿತ್ತು. ಈ ಅವಧಿಯಲ್ಲಿ, ಆರ್ಥಿಕತೆಗೆ ನೆರವು ನೀಡುವ ಸಲುವಾಗಿ ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಬಹುತೇಕ ಶೂನ್ಯದ ಸನಿಹದಲ್ಲಿ ಇರಿಸಿತ್ತು. ಜನರು ಹೆಚ್ಚಿನ ಹಣವನ್ನು ಪಡೆದು, ಹೆಚ್ಚು ಖರ್ಚು ಮಾಡುವಂತೆ ಪ್ರೇರೇಪಿಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಇದರಿಂದಾಗಿ ನಿಧಾನಗತಿಯ ಆರ್ಥಿಕ ಚಟುವಟಿಕೆಗಳ ನಡುವೆಯೂ ಆರ್ಥಿಕತೆ ಬೆಳೆಯಲು ಸಾಧ್ಯವಾಗುತ್ತದೆ.
ಆದರೆ, ಈ ಬಾರಿ ಪರಿಸ್ಥಿತಿ ಸಾಕಷ್ಟು ಭಿನ್ನವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಹಣದುಬ್ಬರ ಕ್ಷಿಪ್ರವಾಗಿ ಏರಿಕೆ ಕಂಡಿದ್ದು, ಅದು ಮತ್ತೆ ಕಡಿಮೆಯಾಗುವ ಕುರಿತು ಫೆಡರಲ್ ರಿಸರ್ವ್ ಇಂದಿಗೂ ಜಾಗರೂಕತೆ ಹೊಂದಿದೆ. ಇದರ ಕಾರಣದಿಂದಾಗಿ, ಬಡ್ಡಿ ದರಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿದಿವೆ.
ಅಮೆರಿಕಾದಲ್ಲಿ ಈಗ ನಿರುದ್ಯೋಗ ಸಾಕಷ್ಟು ಕಡಿಮೆಯಾಗಿದ್ದರೂ, ಟ್ರಂಪ್ ಅವರ ಉದ್ದೇಶಿತ ತೆರಿಗೆ ಕಡಿತದಿಂದಾಗಿ ಆರ್ಥಿಕತೆಗೆ ಉತ್ತೇಜನ ಲಭಿಸಲಿದೆ. ಒಂದು ವೇಳೆ ಆರ್ಥಿಕತೆ 'ಓವರ್ ಹೀಟಿಂಗ್' (ಬೇಡಿಕೆ ಅಪಾರವಾಗಿ ಹೆಚ್ಚಳ ಕಂಡು, ಹೆಚ್ಚಿನ ಹಣದುಬ್ಬರ ಉಂಟಾಗುವುದು) ಲಕ್ಷಣಗಳನ್ನು ತೋರಿಸಿದರೆ, ಫೆಡರಲ್ ರಿಸರ್ವ್ ಹೆಚ್ಚಿನ ಬಡ್ಡಿದರದಲ್ಲಿ ಹಣವನ್ನು ತರುವ ಮೂಲಕ ಪ್ರತಿಕ್ರಿಯೆ ನೀಡಬಲ್ಲದು.
ಡೊನಾಲ್ಡ್ ಟ್ರಂಪ್ ಫೆಡರಲ್ ರಿಸರ್ವ್ (ಅಮೆರಿಕಾದ ಕೇಂದ್ರೀಯ ಬ್ಯಾಂಕ್) ಮುಖ್ಯಸ್ಥರನ್ನು ಬದಲಾಯಿಸುವ ಕುರಿತು ಮಾತನಾಡಿದ್ದರೂ, ಅವರು ಫೆಡರಲ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರನ್ನು ನೇರವಾಗಿ ಮನೆಗೆ ಕಳುಹಿಸಲು ಸಾಧ್ಯವಿಲ್ಲ. ಒಂದು ವೇಳೆ ಟ್ರಂಪ್ ಅಂತಹ ಕ್ರಮವನ್ನು ಕೈಗೊಳ್ಳಲು ಮುಂದಾದರೆ, ಅದರ ಪರಿಣಾಮವಾಗಿ ದೀರ್ಘಾವಧಿಯಲ್ಲಿ ಹೆಚ್ಚಿನ ಬಡ್ಡಿದರ ಉಂಟಾಗಿ, ಅಮೆರಿಕಾ ಹೆಚ್ಚಿನ ಹಣದುಬ್ಬರವನ್ನು ಎದುರಿಸಲಿದೆ. ಅಮೆರಿಕಾದ ಆರ್ಥಿಕತೆಯನ್ನು ನಿಭಾಯಿಸಲು ಫೆಡರಲ್ ರಿಸರ್ವ್ ಮುಖ್ಯ ಪಾತ್ರ ವಹಿಸುತ್ತಿದ್ದು, ಅದರ ನಾಯಕತ್ವದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ತಂದರೆ ಹೂಡಿಕೆದಾರರು ಮತ್ತು ಮಾರುಕಟ್ಟೆ ಆತಂಕಕ್ಕೆ ಒಳಗಾಗಬಹುದು. ಇದರಿಂದಾಗಿ ಆರ್ಥಿಕ ಅಸ್ಥಿರತೆ ಉಂಟಾಗುವ ಸಾಧ್ಯತೆಗಳಿವೆ.
2025ರಲ್ಲಿ, ತೆರಿಗೆ ಕಡಿತದ ಕ್ರಮಗಳಿಂದ ಮುಖ್ಯವಾಗಿ ಶ್ರೀಮಂತ ಜನರಿಗೆ ಪ್ರಯೋಜನಕರವಾದೀತು. ಆದರೆ, ಇಂತಹ ತೆರಿಗೆ ಕಡಿತದಿಂದಾಗಿ ಸರ್ಕಾರದ ಆದಾಯವೂ ಕಡಿಮೆಯಾಗಿ, ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು. ಅಂದರೆ, ಭವಿಷ್ಯದಲ್ಲಿ ಸರ್ಕಾರ ತನ್ನ ಬಜೆಟ್ ನಿರ್ವಹಿಸಲು ಅಥವಾ ಪ್ರಮುಖ ಕಾರ್ಯಕ್ರಮಗಳಿಗೆ ಹಣ ಒದಗಿಸಲು ಕಷ್ಟಪಡಬೇಕಾದೀತು.
ಸರ್ಕಾರದ ವಿತ್ತೀಯ ಕೊರತೆ ಹೆಚ್ಚಾದರೆ (ಸರ್ಕಾರ ತಾನು ಗಳಿಸುವುದಕ್ಕಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡುವುದು), ಅದರ ಪರಿಣಾಮವಾಗಿ ಬಡ್ಡಿದರ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ. ಇದು ಡಾಲರ್ ಮೌಲ್ಯ ಮೇಲೇರುವಂತೆ ಮಾಡಿ, ವಿದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅಮೆರಿಕಾದ ಉದ್ಯಮಗಳಿಗೆ ತೊಂದರೆ ಉಂಟುಮಾಡಬಹುದು. ಡಾಲರ್ ಮೌಲ್ಯ ಹೆಚ್ಚಿದರೆ, ಡಾಲರ್‌ಗಳಲ್ಲಿ ಸಾಲ ಪಡೆದಿರುವ ದೇಶಗಳಿಗೆ ಸಾಲ ಮರುಪಾವತಿಸುವುದು ಹೆಚ್ಚು ಕಷ್ಟವಾಗಲಿದೆ.
ಸುಂಕ ಮತ್ತು ಔದ್ಯಮಿಕ ಲೋಪದೋಷಗಳು
ಸುಂಕದ ವಿಚಾರಕ್ಕೆ ಬಂದರೆ, ಟ್ರಂಪ್ ಬಲವಾದ ಹೇಳಿಕೆಗಳನ್ನು ನೀಡುತ್ತಾರಾದರೂ, ಅದಕ್ಕೆ ಬೆಂಬಲ ನೀಡುವಂತಹ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎನ್ನುವುದನ್ನು ಜಾಗತಿಕ ನಾಯಕರು ಮತ್ತು ಹಣಕಾಸು ಮಾರುಕಟ್ಟೆಗಳು ಈಗಾಗಲೇ ಮನಗಂಡಿದ್ದಾರೆ.
ಟ್ರಂಪ್ ಅವರು ದೊಡ್ಡ ದೊಡ್ಡ ಸುಂಕಗಳನ್ನು ಹೇರುವ ಕುರಿತು ಜೋರಾಗಿ ಧ್ವನಿ ಎತ್ತಬಹುದಾದರೂ, ಅಮೆರಿಕಾದ ಉದ್ಯಮಗಳು ಅವುಗಳನ್ನು ತಪ್ಪಿಸಲು ಮತ್ತು ವಿಶೇಷ ವಿನಾಯಿತಿಗಳನ್ನು ಘೋಷಿಸಲು ಬೇರೆ ಬೇರೆ ಕ್ರಮಗಳತ್ತ ಕಣ್ಣು ಹಾಯಿಸಲು ಆರಂಭಿಸಲಿವೆ.
ವಿದೇಶೀ ನಾಯಕರು ಟ್ರಂಪ್ ಅವರ ಖಾಸಗಿ ನಿವಾಸವಾದ ಮಾರಲಾಗೋಗೆ ಎಸ್ಟೇಟ್‌ಗೆ ಭೇಟಿ, ಗಾಲ್ಫ್ ಆಡಿ, ಸುಂಕವನ್ನು ತಪ್ಪಿಸಲು ಪ್ರಯತ್ನ ಪಡಬಹುದು. ಉದಾಹರಣೆಗೆ, "ನೀವ ನಮ್ಮ ಕಾಗ್ನಾಕ್‌ಗೆ (ಮದ್ಯ) ಸುಂಕ ಹೇರದಿದ್ದರೆ, ನಾವು ನಿಮ್ಮ ಬೋರ್ಬೊನ್‌ಗೆ (ಬಿಸ್ಕತ್ತು) ಸುಂಕ ವಿಧಿಸುವುದಿಲ್ಲ. ನಾವು ಅಮೆರಿಕಾ ನಿರ್ಮಿತ ರಕ್ಷಣಾ ಉಪಕರಣಗಳನ್ನು ಹೆಚ್ಚಾಗಿ ಖರೀದಿಸುತ್ತೇವೆ" ಎಂದು ಚರ್ಚಿಸಿ, ಸುಂಕದ ವಿಚಾರದಲ್ಲಿ ಟ್ರಂಪ್‌ರನ್ನು ಒಪ್ಪಿಸಬಹುದು.
ಟ್ರಂಪ್ ಎಲ್ಲಾ ರೀತಿಯ ವಿನಾಯಿತಿಗಳ ಬೇಡಿಕೆಗಳನ್ನು ತಳ್ಳಿಹಾಕಿ, ಎಲ್ಲದರ ಮೇಲೂ ಹೆಚ್ಚಿನ ಸುಂಕ ವಿಧಿಸಲು ಮುಂದಾದರೂ ಆಶ್ಚರ್ಯವಿಲ್ಲ. ಆದರೆ, ಅವರು ಅಂತಹ ಕ್ರಮಗಳನ್ನು ಕೈಗೊಂಡರೆ, ವ್ಯಾಪಾರ ಸಹಯೋಗಿಗಳು ಅಮೆರಿಕಾದಿಂದ ದೂರಾಗುವ ಮತ್ತು ಪ್ರಸ್ತುತ ಟ್ರಂಪ್‌ರನ್ನು ಬೆಂಬಲಿಸುವ ದೊಡ್ಡ ದೊಡ್ಡ ಕಂಪನಿಗಳು ಅವರನ್ನು ವಿರೋಧಿಸುವ ಸಾಧ್ಯತೆಗಳಿವೆ.
ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳುವುದು ಯಾವ ಕಾರಣಕ್ಕೂ ಟ್ರಂಪ್‌ಗೆ ಇಷ್ಟವಿಲ್ಲ. ಆದರೆ, ಅಮೆರಿಕನ್ ಕಂಪನಿಗಳು ಆಮದು ಉತ್ಪನ್ನಗಳಿಗೆ ಹೆಚ್ಚಿನ ಹಣ ನೀಡಬೇಕಾದರೆ, ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಕಷ್ಟಪಡುವಂತಾದರೆ, ಉದ್ಯೋಗ ಕಡಿತವೂ ನಡೆದೀತು.
ವಿದೇಶೀ ನಾಯಕರು ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್‌ರನ್ನು ಮುಜುಗರಕ್ಕೆ ಈಡುಮಾಡದೆ, ಅಮೆರಿಕಾದಲ್ಲಿ (ಅದರಲ್ಲೂ ರಿಪಬ್ಲಿಕನ್ ಪಕ್ಷದ ಹಿಡಿತವಿರುವ ರಾಜ್ಯಗಳಲ್ಲಿ) ತಮ್ಮ ದೇಶದ ಕಂಪನಿಗಳು ಹೇಗೆ ಉದ್ಯೋಗ ಸೃಷ್ಟಿಸಲಿವೆ ಎಂದು ವಿವರಿಸಿದರೆ, ಟ್ರಂಪ್ ಅವರೊಡನೆ ಮಾತುಕತೆಗೆ ಮುಂದಾಗುವ ಸಾಧ್ಯತೆಗಳು ಹೆಚ್ಚು!
ಗಡಿ ಗೋಡೆ: ಸಾಂಕೇತಿಕವೇ, ಪರಿಹಾರವೇ?
ಟ್ರಂಪ್ ಅಕ್ರಮ ವಲಸೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆಗಳು ಹೆಚ್ಚು. ಆದರೆ, 'ಗಡಿಯ ಗೋಡೆ' ಎಂಬ ಅವರ ಯೋಜನೆ ಪ್ರಾಯೋಗಿಕ ಎನ್ನುವುದಕ್ಕಿಂತಲೂ, ಸಾಂಕೇತಿಕ ಎನ್ನುವುದು ಹೆಚ್ಚು ಸೂಕ್ತವಾದೀತು. ಆದರೆ, ಟ್ರಂಪ್ ಈಗಾಗಲೇ ಮೆಕ್ಸಿಕೋ ಮತ್ತು ಇತರ ದೇಶಗಳಿಗೆ (ಕೆನಡಾಗೂ ಸಹ!) ಒಂದು ವೇಳೆ ನಿಮ್ಮ ದೇಶಗಳಿಂದ ಅಕ್ರಮ ವಲಸಿಗರು ಅಮೆರಿಕಾಗೆ ಗಡಿ ದಾಟಿ ಬರುವುದನ್ನು ತಡೆಯದಿದ್ದರೆ, ನಿಮ್ಮ ಮೇಲೆ ಹೆಚ್ಚಿನ ಸುಂಕ ಮತ್ತು ಇತರ ದಂಡಗಳನ್ನು ಹೇರುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅವರ ಈ ನಡೆ ಒಂದಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ.
ಟ್ರಂಪ್ ಅವರು ವೆನೆಜುವೆಲಾ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿ, ಅಲ್ಲಿನ ತೈಲ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಆಗಮಿಸಿ, ವೆನೆಜುವೆಲಾದ ಆರ್ಥಿಕತೆ ಉತ್ತಮಗೊಳ್ಳಲು ನೆರವಾಗುವ ಬುದ್ಧಿವಂತ ನಡೆ ಮಾಡಬಲ್ಲರು. ಇದರಿಂದಾಗಿ, ವೆನೆಜುವೆಲಾದ ಜನರು ದೇಶ ಬಿಟ್ಟು ತೆರಳುವುದು ಕಡಿಮೆಯಾಗಬಹುದು. ಇದೇ ವೇಳೆ, ಅಮೆರಿಕಾದ ಇಂತಹ ಕ್ರಮದಿಂದಾಗಿ ತೈಲ ಮಾರಾಟ ನಡೆಸಿ, ತಮ್ಮ ಆಯುಧಗಳಿಗಾಗಿ ಇಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಚೀನಾದಿಂದ ಖರೀದಿಸಲು ಅವಲಂಬಿತವಾಗಿರುವ ಇರಾನ್, ರಷ್ಯಾಗಳ ಮೇಲೆ ಆರ್ಥಿಕ ಒತ್ತಡ ಸೃಷ್ಟಿಯಾದೀತು.
ಅದರೊಡನೆ, ಅಮೆರಿಕಾದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಲಕ್ಷಾಂತರ ಜನರನ್ನು ದೇಶದಿಂದ ಹೊರಹಾಕುವಂತಹ ಕ್ರಮಕ್ಕೂ ಟ್ರಂಪ್ ಮುಂದಾಗಬಲ್ಲರು. ಆದರೆ, ಈ ರೀತಿಯ ಸಾಮೂಹಿಕ ಗಡೀಪಾರಿನಂತಹ ಕ್ರಮಗಳು ಕೃಷಿ ಮತ್ತು ನಿರ್ಮಾಣ ಕಾಮಗಾರಿಯಂತಹ ಪ್ರಮುಖ ಉದ್ಯಮಗಳಿಗೆ ತೊಂದರೆ ಉಂಟುಮಾಡಿ, ಹೆಚ್ಚಿನ ಸಾಮಾಜಿಕ ಸಮಸ್ಯೆಗಳನ್ನೂ ಉಂಟುಮಾಡಬಹುದು. ಇದರಿಂದಾಗಿ, ಟ್ರಂಪ್‌ರ ಔದ್ಯಮಿಕ ಬೆಂಬಲಿಗರೂ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ತಮ್ಮ ಪ್ರಯತ್ನಗಳನ್ನು ಕಡಿಮೆಗೊಳಿಸುವ ಸಾಧ್ಯತೆಗಳಿವೆ.
ಟ್ರಂಪ್ ಅವರ ಅವಧಿಯಲ್ಲಿ ನಾವು ಒಂದಷ್ಟು ದಿಟ್ಟ ರಾಜಕೀಯ ಹೇಳಿಕೆಗಳು ಮತ್ತು ಗಮನ ಸೆಳೆಯುವ 'ಹೆಡ್‌ಲೈನ್'ಗಳನ್ನು ನಿರೀಕ್ಷಿಸಬಹುದಾದರೂ, ಹೆಚ್ಚಿನ ಬದಲಾವಣೆಗಳನ್ನು ಕಾಣುವ ಸಾಧ್ಯತೆಗಳಿಲ್ಲ. ಅದರಲ್ಲೂ ಅಕ್ರಮ ವಲಸೆ ಈಗಾಗಲೇ ಬಹಳಷ್ಟು ಕಡಿಮೆಯಾಗಿದೆ.
ಜಾಗತಿಕ ವಿಚಾರಗಳಲ್ಲಿ ಆಕ್ರಮಣಕಾರಿ ನಿಲುವು
ಹಾಗಾದರೆ, ಟ್ರಂಪ್ ವಾಸ್ತವವಾಗಿ ಏನು ಮಾಡಬಹುದು? ಅವರು ಗ್ರೀನ್ ಲ್ಯಾಂಡನ್ನು ಖರೀದಿಸಲು ಮುಂದಾಗಬಹುದೇ? ಅಥವಾ ಕೆನಡಾವನ್ನೂ ಖರೀದಿಸಲು ಪ್ರಯತ್ನ ನಡೆಸಬಹುದೇ?! ಪನಾಮಾ ಕಾಲುವೆಯ ಮೇಲಿನ ನಿಯಂತ್ರಣವನ್ನು ಕೈಗೆತ್ತಿಕೊಳ್ಳಬಹುದೇ? ಅಥವಾ ನ್ಯಾಟೋಗೆ ಅಮೆರಿಕಾದ ಬೆಂಬಲವನ್ನು ಕಡಿಮೆ ಮಾಡಬಹುದೇ?
ಈ ವಿಚಾರಗಳ ಕುರಿತಂತೆ ಟ್ರಂಪ್ ನೀಡಿರುವ ಇತ್ತೀಚಿನ ಹೇಳಿಕೆಗಳೇನೂ ಅರ್ಥವಿಲ್ಲದ ಪ್ರಲಾಪಗಳಲ್ಲ. ಹಾಗೆಂದು, ಅವುಗಳನ್ನು ಸಂಪೂರ್ಣವಾಗಿ ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ. ಟ್ರಂಪ್ ತನ್ನ ಕಣ್ಣಿಗೆ ಅಮೆರಿಕಾಗೆ ಯಾವುದು ಉತ್ತಮ ಕ್ರಮ ಎನಿಸುತ್ತದೋ ಅದನ್ನು ಕೈಗೊಳ್ಳಲು ಗಮನ ಹರಿಸುತ್ತಿದ್ದು, ಅದೇ ದೃಷ್ಟಿಕೋನವನ್ನು ಅಮೆರಿಕಾದ ಮುಂದಿಡುತ್ತಿದ್ದಾರೆ.
ಒಂದು ವೇಳೆ ತನ್ನ ಮಾತಿನ ಉದ್ದೇಶ, ಅರ್ಥವೇನು ಎಂದು ಟ್ರಂಪ್ ಸ್ಪಷ್ಟವಾಗಿ ವಿವರಿಸದಿದ್ದರೆ, ಅವರು ಹೊಂದಾಣಿಕೆಗೆ ಮತ್ತು ಸಲಹೆಗಳಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಭಾವಿಸಬಹುದು. ಆದರೆ ಅಂತಿಮವಾಗಿ, ಅದರ ಫಲಿತಾಂಶ ಏನೇ ಆದರೂ ಅದನ್ನು ಟ್ರಂಪ್ ತನ್ನ ಅಜೆಂಡಾಗೆ ಹೊಂದುವಂತೆ ಕಾರ್ಯತಂತ್ರದ ಗೆಲುವು ಎಂದು ಬಿಂಬಿಸಬಹುದು.
ಟ್ರಂಪ್ ಅವರ ಮೊದಲ ಅವಧಿಯಲ್ಲೂ ಇಂತಹದ್ದೇ ಬೆಳವಣಿಗೆ ನಡೆದಿತ್ತು. ಆಗ ನಾರ್ತ್ ಅಮೆರಿಕನ್ ಫ್ರೀ ಟ್ರೇಡ್ ಅಗ್ರಿಮೆಂಟ್ (NAFTA) ಮೆಕ್ಸಿಕೋ ಮತ್ತು ಕೆನಡಾ ಜೊತೆಗಿನ ಒಪ್ಪಂದದ ಕುರಿತು ಮರುಪರಿಶೀಲನೆ ನಡೆಸಿತ್ತು. ಆರಂಭದಲ್ಲಿ ಟ್ರಂಪ್ ಮೊದಲ ದಿನವೇ ನಾಫ್ತಾವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬೆದರಿಕೆ ಒಡ್ಡಿದ್ದರು. ಆದರೆ ಅಂತಿಮವಾಗಿ, ಟ್ರಂಪ್ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳನ್ನು ಕೈಗೊಂಡು, ಎಲ್ಲ ಪಕ್ಷಗಳಿಗೂ ಅವು ಒಪ್ಪಿಗೆಯಾಗುವಂತೆ ಮಾಡಿ, ಅದನ್ನು ಯುನೈಟೆಡ್ ಸ್ಟೇಟ್ಸ್ - ಮೆಕ್ಸಿಕೋ - ಕೆನಡಾ ಅಗ್ರಿಮೆಂಟ್ (USMCA) ಎಂದು ಮರುನಾಮಕರಣ ಮಾಡಿದರು.
ಜಗತ್ತು ಈಗ ಬಹಳಷ್ಟು ಪ್ರಮುಖ ಬದಲಾವಣೆಗಳಿಗೆ ಒಳಗಾಗುತ್ತಿದೆ. ಆದರೆ, ಇನ್ನು ಬರಲಿರುವ ಆಡಳಿತ ಅವುಗಳನ್ನೆಲ್ಲ ಉತ್ತಮವಾಗಿ ನಿರ್ವಹಿಸಬಹುದು ಎನ್ನಲು ಸಾಧ್ಯವಿಲ್ಲ. ಉದಾಹರಣೆಗೆ, ಟ್ರಂಪ್ ಇಂದಿಗೂ ಚೀನಾ ಮತ್ತು ಇರಾನ್ ಜೊತೆಗೆ ವ್ಯವಹರಿಸುವ ಕುರಿತು ಆಕ್ರಮಣಕಾರಿ ಭಾಷೆಯನ್ನೇ ಬಳಸುತ್ತಿದ್ದಾರೆ. ಆದರೆ, ಅವೆರಡೂ ದೇಶಗಳು ಈಗಾಗಲೇ ಆರ್ಥಿಕವಾಗಿ ಸಂಕಷ್ಟ ಹೊಂದಿದ್ದು, ಜಾಗತಿಕ ಸ್ಥಿರತೆಗಾಗಲಿ, ಜಾಗತಿಕ ಶಾಂತಿಗಾಗಲಿ ತೊಡಕು ಉಂಟುಮಾಡುವಂತೆ ಕಂಡುಬರುತ್ತಿಲ್ಲ.
ತನ್ನ ಮೊದಲನೇ ಅವಧಿಯಲ್ಲಿ ಮಾಡಿದಂತೆ, ಟ್ರಂಪ್ ಈ ಬಾರಿಯೂ ಅಮೆರಿಕಾವನ್ನು ವಿದೇಶಗಳ ಯುದ್ಧಗಳಿಂದ (ಮೊದಲು ಅಫ್ಘಾನಿಸ್ತಾನ ಮತ್ತು ಇರಾಕ್, ಈಗ ಉಕ್ರೇನ್) ಹೊರತರುವ ಭರವಸೆ ನೀಡುತ್ತಿದ್ದಾರೆ.
ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೇಲೆ ರಷ್ಯಾ ಅವಲಂಬಿತವಾಗಿದ್ದು, ಇದಕ್ಕಾಗಿ ವ್ಲಾಡಿಮಿರ್ ಪುಟಿನ್ ಚೀನಾ ಮೇಲೆ ಅವಲಂಬನೆ ಹೊಂದಿದ್ದಾರೆ. ಹೀಗಿರುವಾಗ, ಟ್ರಂಪ್ ಅಥವಾ ರಿಪಬ್ಲಿಕನ್ ಕಾಂಗ್ರೆಸ್ ನಿಜಕ್ಕೂ ಆರ್ಥಿಕವಾಗಿ ಕಷ್ಟಪಡುತ್ತಿರುವ ಚೀನಾ ಮತ್ತು ಅದರ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಉಕ್ರೇನಿನಲ್ಲಿ ಅನ್ಯಾಯದ, ಹಿಂಸಾತ್ಮಕವಾದ ಗೆಲುವನ್ನು ಕೈಗಿಡಬಹುದೇ?
ಅಮೆರಿಕನ್ನರು ಈಗ ನಿಜಕ್ಕೂ ಉತ್ತಮ ಉದ್ಯೋಗ ಹೊಂದುವುದು ಮತ್ತು ದೈನಂದಿನ ಜೀವನದ ಖರ್ಚಿಗೆ ಹಣ ಸಂಪಾದಿಸುವುದರ ಕುರಿತು ಮಾತ್ರವೇ ಚಿಂತಿಸುತ್ತಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅವರ 'ಜನಪ್ರಿಯ' ಯೋಜನೆಗಳು ವಾಸ್ತವ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತಲೂ ಹೆಚ್ಚಾಗಿ, ಕಣ್ಣಿಗೆ ಕಾಣದ, ಕಾಲ್ಪನಿಕ ಶತ್ರುವಿನ ಕುರಿತು ಭಯ ಮೂಡಿಸುವ ಕುರಿತು ಗಮನ ಹರಿಸುತ್ತಿರುವಂತೆ ಕಾಣುತ್ತಿದೆ.
ಟ್ರಂಪ್ ಅವರು ಈಗ ಒಂದು ಬಲಿಷ್ಠ ಆರ್ಥಿಕತೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆದರೆ, ಅವರ ಮುಖ್ಯ ನೀತಿಗಳು ಕಾಲೇಜು ಡಿಗ್ರಿ ಹೊಂದಿರದ ಉದ್ಯೋಗಿಗಳಿಗೆ ನೆರವಾಗುವ, ಅಥವಾ ಸಾಮಾನ್ಯ ಅಮೆರಿಕನ್ನರ ಜೀವನವನ್ನು ಉತ್ತಮಪಡಿಸುವಂತೆ ಕಾಣುತ್ತಿಲ್ಲ. ಬದಲಿಗೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ, ಅತ್ಯಂತ ಶ್ರೀಮಂತರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಇನ್ನು ಸಾಮಾನ್ಯ ಜನತೆ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಿ, ಸಾರ್ವಜನಿಕೆ ಸೇವೆಗಳು ಕಡಿಮೆಯಾಗುವುದಕ್ಕೆ ಸಾಕ್ಷಿಯಾಗಿ, ಮುಖ್ಯ ನಿಯಂತ್ರಣಗಳನ್ನು ತೆಗೆದುಹಾಕುವುದರಿಂದ ಉಂಟಾಗುವ ಸಮಸ್ಯೆಗಳನ್ನು ಅನುಭವಿಸುವಂತಾಗುವ ಸಾಧ್ಯತೆಗಳು ದಟ್ಟವಾಗಿವೆ.
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])
ಲೇಖಕರು: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)












Click it and Unblock the Notifications