ಕಾಬೂಲ್ ಮೇಲೆ ತಾಲಿಬಾನ್ ಕಣ್ಣು: ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ಸಲಹೆ
ತಾಲಿಬಾನಿಗಳು ಕಾಬೂಲ್ ಮೇಲೆ ಕಣ್ಣಿಟ್ಟಿದ್ದು, ಒಂದೊಂದೇ ನಗರವನ್ನು ವಶಪಡಿಸಿಕೊಳ್ಳುತ್ತಿದೆ, ಈ ಹಿನ್ನೆಲೆಯಲ್ಲಿ ಭಾರತವು ತನ್ನ ನಾಗರಿಕರಿಗೆ ನಾಲ್ಕನೇ ಸಲಹೆಯನ್ನು ನೀಡಿದೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗೆಯೇ ಭಾರತೀಯರು ಕೂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಅಲ್ಲಿರುವ ಭಾರತೀಯರು ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆಯೇ ಅಫ್ಘಾನಿಸ್ತಾನದಲ್ಲಿ ಗ್ರೌಂಡ್ ರಿಪೋರ್ಟ್ ಪಡೆಯಲು ಹೋಗುವ ಭಾರತೀಯ ಮಾಧ್ಯಮ ಪ್ರತಿನಿಧಿಗಳ ಮೇಲೂ ವಿಶೇಷ ಗಮನ ನೀಡಲಾಗುತ್ತದೆ. ಮಾಧ್ಯಮವನ್ನು ಗುರಿಯಾಗಿಸಲಾಗುತ್ತಿದೆ ಹೀಗಾಗಿ ಭಾರತೀಯ ಮಾಧ್ಯಮ ಪ್ರತಿನಿಧಿಗಳು ತಾವು ವರದಿಗಾಗಿ ಓಡಾಡುವಾಗ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.

ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಾರ, ಅಫ್ಘಾನ್ ಸರ್ಕಾರಿ ಪಡೆಗಳ ನಿಯಂತ್ರಣವಿಲ್ಲದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಎಂಜಿನಿಯರ್‌ಗಳನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ರಾಯಭಾರ ಕಚೇರಿಗಳು ನೀಡುವ ಮಾರ್ಗಸೂಚಿಗಳನ್ನು ಪಾಲಿಸದೆ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಯಭಾರ ಕಚೇರಿ ಹೇಳಿದೆ. ಅಫ್ಘಾನಿಸ್ತಾನದ ರಾಜಧಾನಿ ಬಾಲ್ಖ್ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ತಾಲಿಬಾನ್ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು, ಮಜರ್-ಇ-ಶರೀಫ್‌ನಲ್ಲಿರುವ ತನ್ನ ದೂತವಾಸದಿಂದ ಭಾರತವು ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸುತ್ತಿದೆ ಎಂದು ಬಲ್ಲ ಮೂಲಗಳು ಮಂಗಳವಾರ ತಿಳಿಸಿವೆ.
ಕಾನ್ಸುಲೇಟ್‌ನ ಭಾರತೀಯ ಮೂಲದ ಸಿಬ್ಬಂದಿ ಮತ್ತು ಮಜರ್-ಇ-ಶರೀಫ್‌ನಲ್ಲಿ ವಾಸಿಸುತ್ತಿರುವ ಹಲವಾರು ಭಾರತೀಯರನ್ನು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಗೆಡುತ್ತಿರುವ ಭದ್ರತಾ ಸನ್ನಿವೇಶದಿಂದಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳುವಂತೆ ಭಾರತ ಸರ್ಕಾರ ಮನವಿ ಮಾಡಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಸಲಹೆ ನೀಡಿದೆ.
ತಾಲಿಬಾನ್ ಬಂಡುಕೋರರ ದೃಷ್ಟಿ ಅಫ್ಘಾನಿಸ್ತಾನದ ನಾಲ್ಕನೇ ಅತಿ ದೊಡ್ಡ ನಗರವಾದ ಮಝರ್ ಇ ಶರೀಫ್ ಮೇಲೆ ಬಿದ್ದಿರುವ ಬೆನ್ನಲ್ಲೇ ಭಾರತ ತನ್ನ ಪ್ರಜೆಗಳ ಸ್ಥಳಾಂತರಕ್ಕೆ ವಿಶೇಷ ವಿಮಾನದ ಏರ್ಪಾಡು ಮಾಡಿರುವುದು ಗಮನಾರ್ಹ.
ಸಹಜವಾಗಿ ತಾಲಿಬಾನ್ ವಕ್ರದೃಷ್ಟಿ ಅದರ ಮೇಲೆ ಬಿದ್ದಿದೆ. ಅದನ್ನು ವಶಪಡಿಸಿಕೊಂಡಲ್ಲಿ ಆಫ್ಹ್ಘನ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ ಎನ್ನುವುದು ತಾಲಿಬಾನ್ ಲೆಕ್ಕಾಚಾರ. ರಾಜಕೀಯ ಪರಿಣತರು ಕೂಡಾ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಇದೀಗ ಭಾರತೀಯರ ಸ್ಥಳಾಂತರಕ್ಕೆ ನಿಯೋಜಿಸಲಾಗಿರುವ ವಿಮಾನ ಮಝರ್ ಇ ಶರೀಫ್ ನಗರದಿಂದ ಇಂದು ಹೊರಡಲಿದೆ. ಈ ಬಗ್ಗೆ ಮಝರ್ ಇ ಶರೀಫ್ ನಗರದಲ್ಲಿನ ಭಾರತೀಯ ದೂತವಾಸ ಕಚೇರಿ ಟ್ವೀಟ್ ಮಾಡಿದ್ದು, ಅಲ್ಲಿಂದ ಹೊರಡಲಿಚ್ಛಿಸುವ ಭಾರತೀಯರು ಆದಷ್ಟು ಬೇಗನೆ ತಮ್ಮ ಹಾಗೂ ಕುಟುಂಬದ ವಿವರಗಳನ್ನು ನೀಡುವಂತೆ ಸೂಚಿಸಿದೆ.
ಅಫ್ಘಾನಿಸ್ತಾನದ ಮೂರು ಪ್ರಾಂತೀಯ ರಾಜಧಾನಿಗಳಾದ ಕುಂದುಜ್, ಸರ್ ಇ ಪುಲ್ ಮತ್ತು ತಲುಕನ್ ನಗರಗಳನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ. ಕಳೆದ ಎರಡು ದಶಕಗಳಿಂದ ದೇಶದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಬೆನ್ನಲ್ಲೇ ಪರಿಸ್ಥಿತಿ ಲಾಭ ಪಡೆದುಕೊಳ್ಳಲು ಮುಂದಾಗಿರುವ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳಲು ಆಫ್ಘನ್ ಸೇನಾಪಡೆಗಳ ಮೇಲೆ ಯುದ್ಧ ಸಾರಿದ್ದವು.
ಕಳೆದ ಕೆಲ ತಿಂಗಳುಗಳಲ್ಲಿ ದೇಶದಲ್ಲಿ ಸ್ಫೋಟ, ಹಿಂಸಾಚಾರ, ವಿದ್ಯಾಸಂಸ್ಥೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಿದ್ದವು. ಹಿಂಸಾಚಾರದ ಹಿಂದೆ ತಾಲಿಬಾನ್ ಕೈವಾಡ ಇದೆಯೆಂದು ಸರ್ಕಾರ ಆರೋಪಿಸಿತ್ತು.
ಸರ್ಕಾರ ಮತ್ತು ತಾಲಿಬಾನ್ ನಾಯಕರ ನಡುವಿನ ಶಾಂತಿ ಮಾತುಕತೆ ಸಮಯದಲ್ಲಿ, ಅಮೆರಿಕ ಸೈನಿಕರು ದೇಶದಿಂದ ಕಾಲುಕಿತ್ತರೆ ಮಾತ್ರ ಶಾಂತಿ ನೆಲೆಸಲು ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಹೇಳಿದ್ದರು. ಅದರಂತೆ ಅಮೆರಿಕ ಅಫ್ಘಾನಿಸ್ತಾನದಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿತ್ತು.
ಇದರಿಂದಾಗಿ ದೇಶದಲ್ಲಿ ಮತ್ತೆ ತಾಲಿಬಾನ್ ಆಡಳಿತ ಶುರುವಾಗಿ, ಜನಸಾಮಾನ್ಯರು ಅಪಾಯಕ್ಕೆ ಸಿಲುಕುವ ಆತಂಕವನ್ನು ಅಂತಾರಾಷ್ಟ್ರೀಯ ಸಮುದಾಯ ವ್ಯಕ್ತಪಡಿಸಿತ್ತು. ಅದೀಗ ನಿಜವಾಗುತ್ತಿದೆ ಎಂದು ರಾಜಕೀಯ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications