Syria Civil War Updates: ಸಿರಿಯಾದಲ್ಲಿ ಬಂಡುಕೋರರಿಗೆ ಅಧಿಕಾರ ಹಸ್ತಾಂತರ ಶೀಘ್ರ, ಅಮೆರಿಕ ಅಲರ್ಟ್
ಸಿರಿಯಾದಲ್ಲಿ ಬಿಕ್ಕಟ್ಟು ಅಂತ್ಯವಾಗುತ್ತಿದೆ ಎನ್ನುವಾಗಲೇ ಹೊಸ ತಲೆನೋವುಗಳು ಶುರುವಾಗಿದೆ. ಸಿರಿಯಾ ಸುದೀರ್ಘ 13 ವರ್ಷಗಳ ಕಾಲ ಅಂತರ್ಯುದ್ಧವಿತ್ತು. 50 ವರ್ಷಕ್ಕೂ ಹೆಚ್ಚು ವರ್ಷಗಳ ಇಲ್ಲಿ ವಂಶಾಡಳಿತವಿತ್ತು. ಈ ಸುದೀರ್ಘ ಅವಧಿಯಲ್ಲಿ ಸಿರಿಯಾದಲ್ಲಿ ನಡೆದದ್ದೆಲ್ಲ ಮಾರಣಹೋಮವೇ. ಸಣ್ಣ ಮಕ್ಕಳಿಂದ ಹಿರಿಯರ ವರೆಗೆ ಸಾವಿರಾರು ಜನ ಸಾವನ್ನಪ್ಪಿದರು ಬಂಡುಕೋರರು ಹಾಗೂ ಐಸಿಸ್ ಉಗ್ರರ ಉಪಟಳಕ್ಕೆ ಈ ರಾಷ್ಟ್ರ ನಲುಗಿ ಹೋಗಿತ್ತು. ಇದೀಗ ಕ್ರೂರಿಯ ಆಡಳಿತ ಅಂತ್ಯವಾಗಿದೆ. ಆದರೆ, ಇದೀಗ ಈ ರಾಷ್ಟ್ರ ಬಂಡುಕೋರರ ಕೈವಶವಾಗುತ್ತಿದೆ. ಈ ಹಂತದಲ್ಲಿ ಇನ್ನೇನು ಅನಾಹುತಗಳು ಸಂಭವಿಸುತ್ತದೆಯೋ ಎನ್ನುವ ಆತಂಕ ವಿಶ್ವದ ಹಲವು ರಾಷ್ಟ್ರಗಳನ್ನು ಕಾಡುತ್ತಿದೆ. ಈ ನಡುವೆ ಬಂಡಾಯ ಪಡೆಗಳಿಗೆ ಅಧಿಕಾರ ಹಸ್ತಾಂತರಿಸುವುದಕ್ಕೆ ಸಿದ್ಧವಿರುವುದಾಗಿ ಸಿರಿಯಾದ ಪ್ರಧಾನಿ ಜಲಾಲಿ ಹೇಳಿದ್ದಾರೆ.
ಸಿರಿಯಾದ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಬಶರ್ ಅಸಾದ್ ಆಡಳಿತ ಅಂತ್ಯವಾದ ಬೆನ್ನಲ್ಲೇ ಇದೀಗ ಸಿರಿಯಾದಲ್ಲಿ ಮುಂದೆ ಯಾರು ಆಡಳಿತ ನಡೆಸಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ಈಗ ಇರುವ ಪರಿಸ್ಥಿತಿಯಲ್ಲಿ ಬಂಡುಕೋರರ ಕೈಗೆ ಅಧಿಕಾರ ಹಸ್ತಾಂತರವಾಗಲಿದೆ. ಬಶರ್ ಅಸಾದ್ ಆಡಳಿತ ಅಂತ್ಯವಾದ ಬೆನ್ನಲ್ಲೇ ಸಿರಿಯಾದ ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಅವರು ಅಧಿಕಾರ ಹಸ್ತಾಂತರ ಮಾಡುವುದನ್ನು ದೃಢಪಡಿಸಿದ್ದಾರೆ.

ಇನ್ನು ಈ ವಿಜಯವು ಇಡೀ ಇಸ್ಲಾಮಿಕ್ ರಾಷ್ಟ್ರದ ವಿಜಯದ ಸಂಕೇತವಾಗಿದೆ ಎಂದು ಬಂಡುಕೋರರ ನೇತೃತ್ವ ವಹಿಸಿರು ನಾಯಕ ಮೊಹಮ್ಮದ್ ಅಲ್-ಜೋಲಾನಿ ಹೇಳಿದ್ದಾನೆ. ಇದೀಗ ಸಿರಿಯಾದಲ್ಲಿ ಬಶರ್ ಸರ್ವಾಧಿಕಾರಿ ಆಡಳಿತವನ್ನು ಕೊನೆಗಾಣಿಸುವಲ್ಲಿ ಹಾಗೂ ಅಧ್ಯಕ್ಷರ ಕಚೇರಿಗೆ ನುಗ್ಗುವಲ್ಲಿ ಈ ಬಂಡುಕೋರರ (Hts) ಗುಂಪು ಮುಂದಾಳತ್ವ ವಹಿಸಿತ್ತು.
ಬಂಡುಕೋರರ ಗುಂಪು ದಾಳಿ ನಡೆಸುತ್ತಿದ್ದಂತೆಯೇ ಸಿರಿಯಾದಿಂದ ಸರ್ವಾಧಿಕಾರಿ ಬಶರ್ ಅಸಾದ್ ಪರಾರಿಯಾಗಿದ್ದಾನೆ. ಬಶರ್ ಇದೀಗ ರಷ್ಯಾದ ಆಶ್ರಯದಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಇನ್ನಷ್ಟೇ ಬರಬೇಕಿದೆ. ಇದರ ನಡುವೆ ಅಮೆರಿಕ ಸಹ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿಯೇ ನೋಡುತ್ತಿದೆ. ಏಕೆಂದರೆ ಸಿರಿಯಾದಲ್ಲಿ ಐಸಿಸ್ (ISIS) ಮತ್ತೆ ತಲೆ ಎತ್ತುವ ಸಾಧ್ಯತೆ ಇದ್ದು, ಈಗಿನ ಪರಿಸ್ಥಿತಿಯ ಲಾಭ ಪಡೆಯುವುದಕ್ಕೆ ಹವಣಿಸುತ್ತಿದೆ. ಹೀಗಾಗಿ, ಐಸಿಸ್ ಉಗ್ರರ ತಂಗುದಾಣಗಳು ಹಾಗೂ ಶಿಬಿರವನ್ನು ಗುರಿಯಾಗಿಸಿಕೊಂಡು ಅಮೆರಿಕ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಿದೆ.
ನ್ಯಾಟೋ ಎಚ್ಚರಿಕೆಯ ಸಂದೇಶ
ಇನ್ನು ಸಿರಿಯಾದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರ ಹಾಗೂ ಬಂಡುಕೋರರಿಗೆ ನ್ಯಾಟೋ ಎಚ್ಚರಿಕೆ ನೀಡಿದೆ. ಈ ಸಂಬಂಧ ಮಾತನಾಡಿರುವ ನ್ಯಾಟೋ (NATO) ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು, ಸಿರಿಯಾದ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ನೋಡುತ್ತಿರುವುದಾಗಿಯೂ ಅಧಿಕಾರ ಹಸ್ತಾಂತರ ಶಾಂತಿಯುತವಾಗಿ ನಡೆಯಲಿ ಎಂದು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಶಾಂತಿಯುತವಾಗಿ ಸಿರಿಯಾದಲ್ಲಿ ರಾಜಕೀಯ ಪರಿವರ್ತನೆಯನ್ನು ನಾವು ಎದುರು ನೋಡುತ್ತಿದ್ದೇವೆ.

ಸಿರಿಯಾದ ಜನ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಗೌರವಿಸಬೇಕು ಎಂದು ಬಂಡುಕೋರ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಬಂಡಾಯ ನಾಯಕರು ಮುಂದಿನ ದಿನಗಳಲ್ಲಿ ಸಿರಿಯಾದಲ್ಲಿ ಯಾವ ರೀತಿ ನಡೆದುಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೆ ಇರುವ ಕುತೂಹಲವಾಗಿದೆ.












Click it and Unblock the Notifications