ಬೀದಿ ಬೀದಿಯಲ್ಲಿ ಹೆಣಗಳು.. ತಣ್ಣಗಾಗದ ಸುಡಾನ್ ಹಿಂಸೆ!
ಖರ್ಟೋಮ್: ರಕ್ಕಸರಿಗೆ ರಕ್ತದಾಹ ಹೊರತು ಬೇರೆ ಏನು ಬೇಕು ಹೇಳಿ? ಇಂತಹ ಸ್ಥಿತಿಗೆ ನಮ್ಮೆದುರು ತಾಜಾ ಉದಾಹರಣೆ ಅಂದ್ರೆ ಸುಡಾನ್. ಸೇನೆ & ಅರೆಸೇನಾ ಪಡೆ ಕಿರಾತಕರ ಅಟ್ಟಹಾಸದಲ್ಲಿ ಇಲ್ಲಿ ಎಲ್ಲ ಅಲ್ಲೋಲ ಕಲ್ಲೋಲ. 50 ಲಕ್ಷ ಜನರ ಬದುಕು ಬೀದಿಗೆ ಬಿದ್ದಿದೆ, ಸಾವಿರಾರು ಅಮಾಯಕರ ಹೆಣಗಳು ಬೀದಿ ಬೀದಿಯಲ್ಲಿ ಬಿದ್ದಿವೆ. ಇಷ್ಟಾದರೂ ಹಿಂಸಾಚಾರ ಮಾತ್ರ ತಣ್ಣಗಾಗುತ್ತಿಲ್ಲ.
ಹೌದು, ಸುಡಾನ್ ಸರ್ಕಾರ ತನ್ನ ದೇಶದ ಭದ್ರತಾ ಪರಿಸ್ಥಿತಿ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಹಿಂಸೆ ಮುಂದುವರಿದಿದೆ. ಹೆಸರಿಗೆ ಕದನ ವಿರಾಮ ಉಲ್ಲಂಘನೆ ಘೋಷಣೆ ಮಾಡಿ, ಎಲ್ಲೆಂದರಲ್ಲಿ ಬಾಂಬ್ & ಗುಂಡಿನ ದಾಳಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸಂಘರ್ಷದಲ್ಲಿ ಜರ್ಝರಿತವಾದ ಸುಡಾನ್‌ನಿಂದ ಜನ ಅಕ್ಕಪಕ್ಕದ ದೇಶಗಳಿಗೆ ಓಡಿ ಹೋಗುತ್ತಿದ್ದಾರೆ. ಸೇನಾಪಡೆ, ಅರೆಸೇನಾ ಪಡೆ ನಡುವೆ ಸೌದಿ ಅರೇಬಿಯಾದಲ್ಲಿ ನಡೆದ ಶಾಂತಿ ಮಾತುಕತೆ ಫೇಲ್ ಆಗಿದ್ದು, ಭೀಕರ ಯುದ್ಧದ ಸ್ಥಿತಿ ಸುಡಾನ್ ಒಳಗೆ ಮುಂದುವರಿದಿದೆ.

ಹಿಂಸಾಚಾರದ ತವರು ಸುಡಾನ್
ಎಲ್ಲೆಲ್ಲೂ ತುಂಬಿರುವ ಹೊಗೆ, ಜೀವ ಉಳಿಸಿಕೊಳ್ಳಲು ಕೈಯಲ್ಲಿ ಹಸುಗೂಸನ್ನು ಹಿಡಿದುಕೊಂಡು ಹೋಗುತ್ತಿರುವ ಬಾಣಂತಿಯರು. ಮಕ್ಕಳು & ಮಹಿಳೆಯರ ಮುಖ ನೋಡದೆ ಹಲ್ಲೆ ನಡೆಸುವ ಸೈನಿಕರು, ಪೊಲೀಸರು. ಸುಡಾನ್ ದೇಶದ ಈಗಿನ ಸ್ಥಿತಿ ಇದು. ಅಧಿಕಾರದ ಆಸೆ & ಸೇನಾಧಿಕಾರಿಗಳ ಸ್ವಾರ್ಥದ ಪರಿಣಾಮ ಸುಡಾನ್ ಸುಡುಗಾಡಂತೆ ಕಾಣುತ್ತಿದೆ. 7 ದಂಗೆ ನೋಡಿರುವ ಪುಟಾಣಿ ದೇಶ ಹೊತ್ತಿ ಉರಿಯುತ್ತಿದೆ. ಆದ್ರೂ ಇಲ್ಲಿ ಹಿಂಸಾಚಾರ ನಿಲ್ಲುವ ಯಾವುದೇ ನಿರೀಕ್ಷೆ ಕಾಣುತ್ತಿಲ್ಲ.
ಸುಡಾನ್ ದಂಗೆ ಇತಿಹಾಸ ದೊಡ್ಡದು
1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ. ಇದೀಗ ಏಪ್ರಿಲ್ 15ರಿಂದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಹೊತ್ತಿರುವ ಬೆಂಕಿಯಿಂದ ಈವರೆಗೂ 600 ಜನ ಮೃತಪಟ್ಟಿದ್ದು, 7 ಲಕ್ಷ ಜನ ಬೀದಿಗೆ ಬಿದ್ದಿದ್ದಾರೆ.

ವಿಶ್ವಸಂಸ್ಥೆ ಮಾತಿಗೆ ಬೆಲೆ ಇಲ್ಲ!
ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿದೆ. ಇದೇ ಕಾರಣಕ್ಕೆ ಸುಡಾನ್‌ನ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಸಂಧಾನ ಕೂಡ ಮಾಡಿಸಲು ಚರ್ಚೆ ನಡೆಸಿತ್ತು. ಆದರೆ ಸೇನೆ ಮತ್ತು ಅರೆಸೇನಾ ಪಡೆಗಳು ಸುಡಾನ್‌ನಲ್ಲಿ ನೆಮ್ಮದಿ ತರಲು ಮನಸ್ಸು ಮಾಡಿಲ್ಲ. ಹೀಗಾಗಿ ಹಿಂಸೆ ಭುಗಿಲೆದ್ದು ಎಲ್ಲೆಂದರಲ್ಲಿ ಬಾಂಬ್ ಬೀಳುತ್ತಿವೆ. ಜೀವ ಉಳಿಸಿಕೊಳ್ಳಲು ಬಡವರು ತಮ್ಮ ವಸ್ತುಗಳನ್ನ ತಲೆ ಮೇಲಿಟ್ಟು, ಊರು ಬಿಡುತ್ತಿದ್ದಾರೆ. ಜೀವ ಭಯದಲ್ಲೇ ನೆರೆ ದೇಶಗಳಿಗೆ ಓಡಿ ಹೋಗುತ್ತಿದ್ದಾರೆ.
50 ಲಕ್ಷ ಜನರ ಜೀವಕ್ಕೆ ಅಪಾಯ
ನೋಡ ನೋಡುತ್ತಲೇ ಸುಡಾನ್ ಸಂಘರ್ಷ 5ನೇ ವಾರಕ್ಕೆ ಕಾಲಿಟ್ಟಿದೆ. ಇಬ್ಬರು ಸೇನಾಧಿಕಾರಿಗಳ ಒಣ ಪ್ರತಿಷ್ಠೆಗೆ 50 ಲಕ್ಷ ಜನರ ಜೀವ ಅಪಾಯದಲ್ಲಿ ಸಿಲುಕಿದೆ. ಆಹಾರ, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಯ ವ್ಯತ್ಯಯ ಆಗುತ್ತಿರುವ ಕಾರಣ ಲಕ್ಷಾಂತರ ಜನ ಒದ್ದಾಡುತ್ತಿದ್ದಾರೆ. ಅದೆಷ್ಟೋ ಜನ ಆಹಾರ ಸಿಗದೆ ಉಸಿರು ಚೆಲ್ಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೆಪ್ಪಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಬದಲು ಯುದ್ಧ ಮುಂದುವರಿಸಿದ್ದಾರೆ ಸುಡಾನ್ ಸೇನಾಧಿಕಾರಿಗಳು. ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಿರುವ ದೇಶಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಒಟ್ಟಾರೆ ಹೇಳುವುದಾದರೆ ಸುಡಾನ್‌ನಲ್ಲಿ ಇನ್ನಷ್ಟು ದಿನ ಹಿಂಸಾಚಾರ ಮುಂದುವರೆದಿದ್ದೇ ಆದರೆ, ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. ಈಗಾಗಲೇ ಬಡತನದ ಬೇಗೆಯಲ್ಲಿ ಬೀದಿಗೆ ಬಿದ್ದಿರುವ ಈ ದೇಶದಲ್ಲಿ ಅರೆಸೇನಾ ಪಡೆ ಮತ್ತು ಸೇನಾ ಪಡೆಯ ಸ್ವಾರ್ಥದಿಂದ ಎಲ್ಲವೂ ಅಯೋಮಯ. ಅದರಲ್ಲೂ ತುತ್ತು ಅನ್ನಕ್ಕೂ ಜನರು ಬೇರೆ ದೇಶಗಳ ಬಳಿ ಕೈಚಾಚುವ ಪರಿಸ್ಥಿತಿ ಬಂದಿದೆ.











Click it and Unblock the Notifications