ಜಕಾರ್ತಾದಿಂದ ಟೇಕ್ ಆಫ್ ಆದ ವಿಮಾನ ನಾಪತ್ತೆ
ಜಕಾರ್ತಾ, ಜನವರಿ 09: ಜಕಾರ್ತಾದಿಂದ ಕಲಿಮಂತಾನ್ ನ ಪೊಂಟಿಯಾನಕ್ ಕಡೆಗೆ ತೆರಳುತ್ತಿದ್ದ ಶ್ರೀವಿಜಯ ಏರ್ ಎಸ್ ಜೆ-182 ವಿಮಾನವು ಶನಿವಾರ ಟೇಕ್ ಆಫ್ ನಂತರ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಜಕಾರ್ತಾದ ಸೂಕರ್ನೊ ಹಟ್ಟಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ವಿಮಾನ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದೆ.
ನಾಪತ್ತೆಯಾಗಿರುವ ವಿಮಾನಕ್ಕೆ ರಕ್ಷಣಾ ಪಡೆ ಹುಡುಕಾಟ ಆರಂಭಿಸಿದೆ. ಟೇಕ್ ಆಫ್ ಆಗಿ ನಾಲ್ಕು ನಿಮಿಷದ ನಂತರ ವಿಮಾನವು ಸಂಪರ್ಕ ಕಡಿದುಕೊಂಡಿದ್ದು, ಆರು ಮಕ್ಕಳನ್ನೊಳಗೊಂಡಂತೆ ವಿಮಾನದಲ್ಲಿ 59 ಪ್ರಯಾಣಿಕರಿದ್ದರು. ಆರು ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದೆ.
ಮಧ್ಯಾಹ್ನ 1.56ಗೆ ವಿಮಾನ ಟೇಕ್ ಆಫ್ ಆಗಿದ್ದು, ನಂತರ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಸಂಪರ್ಕ ಕಡಿದುಕೊಂಡಿದೆ ಎಂದು ಇಂಡೋನೇಷ್ಯಾ ಸಾರಿಗೆ ಸಚಿವಾಲಯದ ವಕ್ತಾರ ಅದಿತಾ ಇರಾವತಿ ತಿಳಿಸಿದ್ದಾರೆ.
ಭಾರತೀಯ ನೌಕಾ ಪಡೆಯ ಮಿಗ್-29ಕೆ ತರಬೇತಿ ವಿಮಾನ ಪತನ
ಜಕಾರ್ತಾದಿಂದ ಬೋರ್ನಿಯಾ ದ್ವೀಪದ ಪಶ್ಚಿಮ ಕಲಿಮಂತಾನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ ವಿಮಾನವು 10,000 ಅಡಿ ಎತ್ತರಕ್ಕೆ ಹೋಗುತ್ತಿದ್ದಂತೆ ಸಂಪರ್ಕ ಕಡಿದುಕೊಂಡಿರುವುದಾಗಿ ತಿಳಿದುಬಂದಿದೆ. 26 ವರ್ಷದ ಹಿಂದಿನ ವಿಮಾನ ಇದಾಗಿದ್ದು, 1994ರ ಮೇ ತಿಂಗಳಿನಲ್ಲಿ ಮೊದಲ ಯಾನ ಆರಂಭಿಸಿತ್ತು.