Breaking; ದೆಹಲಿ-ದುಬೈ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್
ನವದೆಹಲಿ, ಜುಲೈ 05; ಸ್ಪೈಸ್ ಜೆಟ್‌ನ ವಿಮಾನವೊಂದು ತಾಂತ್ರಿಕ ಕಾರಣದಿಂದಾಗಿ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸ್ಪೈಸ್ ಜೆಟ್ ವಿಮಾನದಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ವರದಿಯಾಗುತ್ತಿವೆ.
ತಾಂತ್ರಿಕ ತೊಂದರೆ ಕಂಡು ಬಂದ ಬಳಿಕ ಮಂಗಳವಾರ ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನವನ್ನು ಕರಾಚಿಗೆ ಕಳಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ವಿಮಾನ ಕರಾಚಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಸ್ಪೈಸ್ ಜೆಟ್ ಬಿ737 ವಿಮಾನವನ್ನು ಜುಲೈ 5ರ ಮಂಗಳವಾರ ಕರಾಚಿ ವಿಮಾನ ನಿಲ್ದಾಣದ ಕಡೆಗೆ ಕಳಿಸಲಾಗಿದೆ. ಇಂಡಿಕೇಟರ್‌ನಲ್ಲಿನ ದೋಷದ ಕಾರಣ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ ಎಂದು ಘಟನೆ ಬಗ್ಗೆ ಸಂಸ್ಥೆ ಮಾಹಿತಿ ನೀಡಿದೆ.
ಯಾವುದೇ ಗೊಂದಲ ಉಂಟಾಗದಂತೆ, ಪ್ರಯಾಣಿಕರು ಆತಂಕಗೊಳ್ಳದಂತೆ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಸಂಸ್ಥೆ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕರಾಚಿ ತಲುಪಿರುವ ಪ್ರಯಾಣಿಕರು ಅಲ್ಲಿಂದ ಮುಂದೆ ಸಾಗಲು ಬದಲಿ ವಿಮಾನವನ್ನು ಈಗಾಗಲೇ ಕರಾಚಿಗೆ ಕಳಿಸಲಾಗಿದೆ. ಪ್ರಯಾಣಿಕರು ಆ ವಿಮಾನದಲ್ಲಿ ದುಬೈಗೆ ತೆರಳದ್ದಾರೆ ಎಂದು ಸ್ಪೈಸ್ ಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಘಟನೆ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಸಹ ಮಾಹಿತಿ ನೀಡಲಾಗಿದೆ. ಡಿಜಿಸಿಎ ಈ ಪ್ರಕರಣದ ಕುರಿತು ವಿವರವಾದ ವರದಿ ನೀಡುವಂತೆ ಸೂಚನೆ ನೀಡಿದೆ. 17 ದಿನಗಳ ಅವಧಿಯಲ್ಲಿ 6 ಬಾರಿ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.












Click it and Unblock the Notifications