ಉಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 60 ಮಂದಿ ಸಾವಿನ ಶಂಕೆ
ನವದೆಹಲಿ, ಮೇ 8: ಉಕ್ರೇನ್ ಮೇಲೆ ದಾಳಿಯ ತೀವ್ರತೆ ಹೆಚ್ಚಿಸಿರುವ ರಷ್ಯಾ ಇಂದು ಲುಹಾನಸ್ಕ್ (Luhansk Region of Ukraine) ಪ್ರದೇಶದಲ್ಲಿನ ಶಾಲೆಯೊಂದರ ಮೇಲೆ ಬಾಂಬ್ ದಾಳಿ ಎಸಗಿದೆ. ಈ ಘಟನೆಯಲ್ಲಿ 60 ಮಂದಿ ಸಾವನ್ನಪ್ಪಿರುವ ಶಂಕೆ ಇದೆ. ಈ ಬಗ್ಗೆ ಲುಹಾನಸ್ಕ್ ಪ್ರದೇಶದ ರಾಜ್ಯಪಾಲರು ನೀಡಿದ ಮಾಹಿತಿಯನ್ನ ಆಧರಿಸಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಲುಹಾನಸ್ಕ್ ಪ್ರದೇಶದ ಬಿಲೋಹೊರಿವ್ಕ ಎಂಬ ಗ್ರಾಮದ ಶಾಲೆಯ ಮೇಲೆ ಶನಿವಾರ ಮಧ್ಯಾಹ್ನ (ಉಕ್ರೇನ್‌ನ ಸ್ಥಳೀಯ ಕಾಲಮಾನ) ರಷ್ಯಾದ ಪಡೆಗಳು ಬಾಂಬ್ ಹಾಕಿವೆ. 90 ಜನರಿದ್ದ ಈ ಶಾಲೆಯ ಕಟ್ಟಡಕ್ಕೆ ಬೆಂಕಿ ತಗುಲಿದೆ. ಅಗ್ನಿಯ ಕೆನ್ನಾಲಿಗೆ ಬಹಳ ಬೇಗ ಕಟ್ಟಡವನ್ನು ವ್ಯಾಪಿಸಿದೆ. ಬೆಂಕಿ ನಂದಿಸುವ ಕೆಲಸ ಬರೋಬ್ಬರಿ ನಾಲ್ಕು ಗಂಟೆ ಹಿಡಿದಿದೆ. ಬಳಿಕ ಒಂದಿಬ್ಬರು ಮಂದಿಯ ಶವ ಸಿಕ್ಕಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ 30 ಮಂದಿಯನ್ನು ರಕ್ಷಿಸಲಾಗಿದೆ. ಇವರ ಪೈಕಿ ಏಳು ಮಂದಿ ಗಾಯಗೊಂಡಿದ್ಧಾರೆ. ಕಟ್ಟಡದ ಅವಶೇಷಗಳಡಿ 60 ಮಂದಿ ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮತ್ತೊಂದು ಮಾಹಿತಿ ಪ್ರಕಾರ, 20-30 ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಲುಹಾನಸ್ಕ್ ಪ್ರದೇಶದ ಪೋಪಾಸ್ನ ನಗರದಲ್ಲಿ ರಷ್ಯಾ ಪಡೆಗಳಿಗೆ ಮೇಲುಗೈ ಆಗಿದೆ. ರಷ್ಯನ್ನರ ದಾಳಿ ಎದುರಿಸಲಾಗದೆ ಉಕ್ರೇನ್ ಪಡೆಗಳು ಹಿಂದಕ್ಕೆ ಸರಿದಿವೆ ಎಂಬಂತಹ ವರದಿಗಳು ಬಂದಿವೆ. ರಷ್ಯಾದ ಚೆಚೆನ್ಯಾ ರಿಪಬ್ಲಿಕ್‌ನ ಮುಖ್ಯಸ್ಥ ರಮಜಾನ್ ಕಡಿರೋವ್ ತಮ್ಮ ಪಡೆಗಳು ಪೋಪಾಸ್ನ (Popasna) ನಗರದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿವೆ ಎಂದು ಹೇಳಿರುವುದ ವರದಿಯಾಗಿದೆ.
ಇದೇ ವೇಳೆ, ಉಕ್ರೇನ್ ದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಗದೇ ರಷ್ಯಾ ಹತಾಶೆಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ವಿಫಲವಾದ್ದರಿಂದ ರಷ್ಯಾ ಪಡೆಗಳ ಗಮನ ಇದೀಗ ದೊಂಬಾಸ್ ನಗರದ ಮೇಲೆ ನೆಟ್ಟಿದೆ. ಇಲ್ಲಿ ರಷ್ಯಾ ಬೆಂಬಲಿತ ಬಂಡುಕೋರರು 2014ರಿಂದಲೂ ಸಕ್ರಿಯವಾಗಿದ್ದು, ಹೋರಾಟ ನಡೆಸುತ್ತಲೇ ಇದ್ದಾರೆ.

ಒಡೆಸಾ ನಗರದ ಬಳಿ ಉಕ್ರೇನ್‌ನ ಒಂದು ಜಲನೌಕೆ ಮತ್ತು ಎರಡು ಸುಖೋಯ್-24 (Su-24) ಬಾಂಬರ್‌ಗಳನ್ನು ನಾಶ ಮಾಡಿರುವುದಾಗಿ ರಷ್ಯಾ ಹೇಳಿಕೊಂಡಿದೆ.
ಇನ್ನು, ಉಕ್ರೇನ್‌ನ ಮರಿಯೂಪೋಲ್ ನಗರದಲ್ಲಿ (Mariupol) ಭೀಕರ ಕದನ ಏರ್ಪಡುತ್ತಿದೆ. ಇಲ್ಲಿಂದ ಅನೇಕ ನಾಗರಿಕರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಉಕ್ರೇನ್ ಮತ್ತು ರಷ್ಯನ್ ಪಡೆಗಳ ಮಧ್ಯೆ ಆಲೌಟ್ ವಾರ್ ಆಗುವ ಸಂಭವ ಇದೆ. ಉಕ್ರೇನ್ ಅನ್ನು ನೈತಿಕವಾಗಿ ಕುಗ್ಗಿಸಲು ರಷ್ಯಾಗೆ ಮರಿಯೂಪೋಲ್ ಕದನದ ಗೆಲುವು ಬಹಳ ಮುಖ್ಯವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications