ಇರಾಕ್‌ನಲ್ಲಿ ಅಮೆರಿಕ ಸೇನಾ ನೆಲೆ ಗುರಿಯಾಗಿರಿಸಿ ರಾಕೆಟ್ ದಾಳಿ
ಬಾಗ್ದಾದ್, ಫೆಬ್ರವರಿ 16: ಇರಾಕ್‌ನ ಉತ್ತರ ಭಾಗದಲ್ಲಿರುವ ಇರ್ಬಿಲ್‌ನ ವಿಮಾನ ನಿಲ್ದಾಣದ ಬಳಿಯಲ್ಲಿನ ಅಮೆರಿಕ ಪಡೆಗಳ ನೆಲೆಯನ್ನು ಗುರಿಯಾಗಿರಿಸಿಕೊಂಡು ಸೋಮವಾರ ರಾತ್ರಿ ಉಗ್ರಗಾಮಿ ಸಂಘಟನೆಗಳು ರಾಕೆಟ್ ದಾಳಿ ನಡೆಸಿವೆ. ಈ ದಾಳಿಯಲ್ಲಿ ಅಮೆರಿಕ ನೇತೃತ್ವದ ಮೈತ್ರಿಕೂಟದ ಗುತ್ತಿಗೆದಾರರೊಬ್ಬರು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ.
ಅರೆ ಸ್ವಾಯತ್ತ ಕುರ್ದಿಶ್ ಆಡಳಿತವಿರುವ ಈ ಪ್ರದೇಶದಲ್ಲಿ ಮೂರು ರಾಕೆಟ್ ದಾಳಿಗಳು ನಡೆದಿದ್ದು, ಅಮೆರಿಕ ಪಡೆಗಳ ನೆಲೆ ಇದರ ಸಮೀಪದಲ್ಲಿಯೇ ಇದೆ. ಅದೃಷ್ಟವಶಾತ್ ಅಮೆರಿಕದ ಪಡೆಗಳಿಗೆ ಹಾನಿಯಾಗಿಲ್ಲ. ದಾಳಿಯಿಂದ ಹಲವು ಕಾರುಗಳು ಮತ್ತು ಆಸ್ತಿಪಾಸ್ತಿ ನಾಶವಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೊಲೆಮನಿ ಹತ್ಯೆಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತೀಕಾರ: ಇರಾನ್ ಎಚ್ಚರಿಕೆ
ಗಾರ್ಡಿಯನ್ ಆಫ್ ಬ್ಲಡ್ ಬ್ರಿಗೇಡ್ ಎಂಬ ಹೆಸರಿನ ಭಯೋತ್ಪಾದನಾ ಸಂಘಟನೆಯೊಂದು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಐದು ತಿಂಗಳ ಬಳಿಕ ಮೊದಲ ಬಾರಿಗೆ ಈ ಪ್ರದೇಶದಲ್ಲಿ ನಡೆದ ಮೊದಲ ರಾಕೆಟ್ ದಾಳಿ ಇದಾಗಿದೆ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೋ ಬೈಡನ್ ಅವರಿಗೆ ಇದು ಮೊದಲ ಪರೀಕ್ಷೆಯಾಗಿದೆ. ಈ ಘಟನೆಯನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಇರಾಕ್‌ನಲ್ಲಿ ಇನ್ನೂ ಉಳಿದುಕೊಂಡಿರುವ ಅಮೆರಿಕದ ಪಡೆಗಳನ್ನು ಅಲ್ಲಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಡ ಹೇರುವ ಸಲುವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇರಾಕ್ ಅಧ್ಯಕ್ಷ ಬರ್ಹಾಮ ಸಲಿಹ್ ಈ ದಾಳಿಯನ್ನು ಖಂಡಿಸಿದ್ದಾರೆ. ಇರ್ಬಿಲ್ ನಿವಾಸಗಳು ಈ ಪ್ರದೇಶದಿಂದ ದೂರ ಇರುವಂತೆ ಹಾಗೂ ಮನೆಗಳಲ್ಲಿಯೇ ಉಳಿದುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.