ಪ್ರಧಾನಿ ಮೋದಿ ಕಾರು ಡ್ರೈವ್ ಮಾಡುವ ರಹಸ್ಯ ಬಿಚ್ಚಿಟ್ಟ ರಾಹುಲ್ ಗಾಂಧಿ- ಏನದು ತಿಳಿಯಿರಿ
ನ್ಯೂಯಾರ್ಕ್, ಜೂನ್ 05: ಒಡಿಶಾ ರೈಲು ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. 'ಅವರು ( ಮೋದಿ ಹಾಗೂ ಬಿಜೆಪಿ ನಾಯಕರು ) ಯಾವಾಗಲೂ ಹಿಂದಿನದನ್ನು ಹಿಂತಿರುಗಿ ನೋಡುತ್ತಾರೆ. ವರ್ತಮಾನದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದಾಗಲೆಲ್ಲಾ ಕಾಂಗ್ರೆಸ್ ಅನ್ನು ದೂಷಿಸುತ್ತಾರೆ' ಎಂದು ರಾಹುಲ್ ಆರೋಪಿಸಿದರು.
ನ್ಯೂಯಾರ್ಕ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೀವು ಅವರಿಗೆ ( ಮೋದಿ ಹಾಗೂ ಬಿಜೆಪಿ ನಾಯಕರು ) ಏನು ಬೇಕಾದರೂ ಕೇಳಿ, ಅವರು ಹಿಂದೆ ನೋಡುತ್ತಾರೆ. ರೈಲು ಅಪಘಾತ ಏಕೆ ಸಂಭವಿಸಿತು ಎಂದು ನೀವು ಅವರನ್ನು ಕೇಳಿ, ಕಾಂಗ್ರೆಸ್ ಇದನ್ನು 50 ವರ್ಷಗಳ ಹಿಂದೆ ಮಾಡಿದೆ ಎಂದು ಅವರು ಹೇಳುತ್ತಾರೆ. ಪಠ್ಯಪುಸ್ತಕಗಳಿಂದ ನೀವು ಆವರ್ತಕ ಕೋಷ್ಟಕ ಮತ್ತು ವಿಕಾಸವನ್ನು ಏಕೆ ತೆಗೆದುಹಾಕಿದ್ದೀರಿ ಎಂದು ಕೇಳಿ, 60 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಇದನ್ನು ಮಾಡಿದೆ ಎಂಬುದಾಗಿ ಅವರು ಹೇಳುತ್ತಾರೆ' ಎಂದು ರಾಹುಲ್ ಟೀಕಿಸಿದರು.

ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 275 ಜನರಿಗೆ ರಾಹುಲ್ ಗಾಂಧಿ ಅಂತಿಮ ಗೌರವ ಸಲ್ಲಿಸಿದರು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದವರು ಒಂದು ನಿಮಿಷದ ಮೌನವನ್ನು ಆಚರಿಸಿದರು.
ಈ ವೇಳೆ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೀವು ಕಾರನ್ನು ಓಡಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನೀವು ಮುಂಬದಿಯನ್ನು ನೋಡಿಕೊಂಡು ಓಡಿಸುತ್ತೀರಿ. ಹಿಂದೆ ನೋಡಿಕೊಂಡು ಓಡಿಸಿದರೆ ನೀವು ಒಂದರ ನಂತರ ಒಂದರಂತೆ ಅಪಘಾತ ಮಾಡಿಕೊಳ್ಳುತ್ತೀರಿ. ಇದನ್ನೇ ನರೇಂದ್ರ ಮೋದಿಯವರ ಮಾಡುತ್ತಿದ್ದಾರೆ. ಅವರು ಕಾರನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರು ಹಿಂಬದಿಯ ಕನ್ನಡಿಯಲ್ಲಿ ಮಾತ್ರ ನೋಡುತ್ತಾರೆ. ನಂತರ ಅವರ ಕಾರು ಏಕೆ ಅಪಘಾತಕ್ಕೆ ಈಡಾಗುತ್ತಿದೆ ಎಂದು ಅವರಿಗೆ ಅರ್ಥವೇ ಆಗುವುದಿಲ್ಲ' ಎಂದು ರಾಹುಲ್ ಹೇಳಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಭೂತಕಾಲದ ಮೇಲೆ ಮಾತ್ರ ಅವರು ಕೇಂದ್ರೀಕರಿಸುತ್ತಾರೆ. ಅವರು ಯಾವಾಗಲೂ ಹಿಂದಿನದಕ್ಕಾಗಿ ಬೇರೆಯವರನ್ನು ದೂಷಿಸುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರೈಲು ಅಪಘಾತಗಳು ಸಂಭವಿಸಿದರೆ, ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ನೈತಿಕ ಜವಾಬ್ದಾರಿಯನ್ನು ಹೊರುತ್ತಿದ್ದರು. 'ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತಿದ್ದೆವು' ಎಂದು ರಾಹುಲ್ ಗಾಂಧಿ ಹೇಳಿದರು.
'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ರೈಲು ಅಪಘಾತ ನನಗೆ ನೆನಪಿದೆ. ಆಗ ಬ್ರಿಟಿಷರ ತಪ್ಪಿನಿಂದ ರೈಲು ಅಪಘಾತ ನಡೆದಿದೆ ಎಂದು ಕಾಂಗ್ರೆಸ್ ಓಡಿಹೋಗಲಿಲ್ಲ. ಕಾಂಗ್ರೆಸ್ ಸಚಿವರು ಇದು ನನ್ನ ಜವಾಬ್ದಾರಿ ಮತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಆದರೆ, ಬಿಜೆಪಿಯವರು ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ' ಎಂದು ರಾಹುಲ್ ಹೇಳಿದರು.

ಒಡಿಶಾದ ಬಾಲಸೋರ್ ಜಿಲ್ಲೆಯ ಬಹಂಗಾಬಜಾರ್ ನಿಲ್ದಾಣದ ಬಳಿ ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲು ಅಪಘಾತಕ್ಕೀಡಾಗಿದೆ. ದಶಕಗಳಲ್ಲಿ ಭಾರತ ಕಂಡ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ 275 ಕ್ಕೆ ಏರಿದೆ. ಈ ಘಟನೆ ಕುರಿತು ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications