ಇನ್ನು ಕತಾರ್ ಗೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ!
ಭಾರತ ಸೇರಿದಂತೆ 80 ರಾಷ್ಟ್ರಗಳಿಗೆ ವೀಸಾ ನಿಬಂಧನೆ ತೆಗೆದುಹಾಕಿದ ಕತಾರ್ ಸರ್ಕಾರ. ಪ್ರವಾಸೋದ್ಯಮ ಬೆಳೆಸಲು ಹೊಸ ನಿರ್ಧಾರ ಕೈಗೊಂಡ ಅಲ್ಲಿನ ಸರ್ಕಾರ.
ದೋಹಾ, ಆಗಸ್ಟ್ 10: ತನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸುಮಾರು 80 ರಾಷ್ಟ್ರಗಳಿಗೆ ಇದ್ದ ವೀಸಾ ನಿಬಂಧನೆಯನ್ನು ಕತಾರ್ ಸರ್ಕಾರ ತೆಗೆದುಹಾಕಿದೆ. ಇದರಿಂದಾಗಿ, ಭಾರತ, ಲೆಬನಾನ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ ಮುಂತಾದ ದೇಶಗಳ ಪ್ರಜೆಗಳು ಇನ್ನು ಕತಾರ್ ದೇಶಕ್ಕೆ ವೀಸಾ ಪಡೆಯುವ ಅಗತ್ಯವಿಲ್ಲದೆ ಪ್ರಯಾಣಿಸಬಹುದು.
ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಬುಧವಾರ (ಆಗಸ್ಟ್ 9) ಪ್ರಕಟಿಸಿದ ಕತಾರ್ ನ ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥ ಹಸನ್ ಅಲ್-ಇಬ್ರಾಹೀಂ, ''ವೀಸಾ ನಿಬಂಧನೆಯನ್ನು ತೆಗೆದುಹಾಕುವ ಮೂಲಕ ಕತಾರ್ ದೇಶವು ಸೌದಿ ರಾಷ್ಟ್ರಗಳಲ್ಲಿ ವೀಸಾ ಮುಕ್ತ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿದೆ'' ಎಂದು ತಿಳಿಸಿದ್ದಾರೆ.

ತನ್ನಲ್ಲಿಗೆ ಮುಕ್ತ ಭೇಟಿಗೆ ಬರುವ 80 ರಾಷ್ಟ್ರಗಳ ಪೈಕಿ, 33 ರಾಷ್ಟ್ರಗಳ ಪ್ರಜೆಗಳಿಗೆ 180 ದಿನ ಉಳಿಯುವ ಅವಕಾಶ ಸಿಗಲಿದೆ. ಇನ್ನುಳಿದ 47 ದೇಶಗಳ ಪ್ರಜೆಗಳಿಗೆ 30 ದಿನಗಳ ಕಾಲ ಉಳಿಯುವ ಅವಕಾಶ ಸಿಗಲಿದೆ ಎಂದು ಹಸನ್ ತಿಳಿಸಿದ್ದಾರೆ. ದೇಶದಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಕತಾರ್ ದೇಶ, ಉಗ್ರವಾದವನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದ ಈಜಿಪ್ಟ್, ಬಹರೇನ್, ಯುಎಇ ಸೇರಿದಂತೆ ಕೆಲವಾರು ಸೌದಿ ರಾಷ್ಟ್ರಗಳು ಕತಾರ್ ಮೇಲೆ ಜೂನ್ 4ರಂದು ಕತಾರ್ ಜತೆಗಿನ ಎಲ್ಲಾ ರೀತಿಯ ಬಾಂಧವ್ಯಗಳನ್ನು ಕಡಿದುಕೊಂಡಿದ್ದವು.












Click it and Unblock the Notifications