AI Technology: ಪ್ರಧಾನಿ ಮೋದಿ ಫ್ರಾನ್ಸ್ ಭೇಟಿಗೆ ಮುಹೂರ್ತ ಫಿಕ್ಸ್, ಎಐ ಲೋಕದಲ್ಲಿ ಕ್ರಾಂತಿ?
ಪ್ರಪಂಚದಲ್ಲಿ 'ಎಐ ತಂತ್ರಜ್ಞಾನ' ಹವಾ ಎಬ್ಬಿಸಿದ್ದು, ಅಮೆರಿಕದಿಂದ ಹಿಡಿದು ಚೀನಾದ ತನಕ ಎಲ್ಲೆಲ್ಲೂ ಎಐ.. ಎಐ.. ಎಐ.. ಅಂತಿದ್ದಾರೆ ಜನ. ಆದರೆ, ಈ ವಿಚಾರದಲ್ಲಿ ನಮ್ಮ ಭಾರತ ಹಿಂದೆ ಉಳಿದಿದೆಯಾ? ಎಂಬ ಚರ್ಚೆ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮಹತ್ವದ ಶೃಂಗಸಭೆಗೆ ಸಜ್ಜಾಗಿದ್ದಾರೆ.
ಜಗತ್ತಿನಲ್ಲಿ ಈಗ ಕಂಪ್ಯೂಟರ್ ಯುಗ ಮುಗಿದು, ಎಐ ಯುಗ ಶುರುವಾಗಿದೆ. ಹೀಗಿದ್ದಾಗಲೇ ಸ್ಪರ್ಧೆ ಮಾಡಲು ಆಗದ ದೇಶಗಳು ಮೂಲೆ ಸೇರುವುದು ಗ್ಯಾರಂಟಿ. ಇದನ್ನು ಅಮೆರಿಕ & ಚೀನಾ ಸೇರಿದಂತೆ ಪ್ರಮುಖವಾಗಿ ಪಾಶ್ಚಿಮಾತ್ಯ ದೇಶಗಳು ಅಚ್ಚುಕಟ್ಟಾಗಿ ಅರ್ಥೈಸಿಕೊಂಡು ಮುಂದೆ ನುಗ್ಗಿವೆ. ಅದೇ ರೀತಿ ಭಾರತ ಕೂಡ ಇಂದಿನ ಪರಿಸ್ಥಿತಿಯಲ್ಲಿ 'ಎಐ ತಂತ್ರಜ್ಞಾನ' ಅಭಿವೃದ್ಧಿ ಪಡಿಸಿದ ದೇಶವಾಗಲು ಸಜ್ಜಾಗಿದೆ. ಇದಕ್ಕಾಗಿ ಭಾರತದ ಪ್ರಧಾನಿ ಮೋದಿ ಅವರು ಫ್ರಾನ್ಸ್ ದೇಶಕ್ಕೆ ಹಾರಲಿದ್ದಾರೆ.

ಯಾರೆಲ್ಲಾ ಬರಲಿದ್ದಾರೆ 'ಎಐ' ಶೃಂಗಸಭೆಗೆ?
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಇದೀಗ ಜಾಗತಿಕ AI ಶೃಂಗಸಭೆಗೆ ಸಜ್ಜಾಗಿದೆ. ಹೀಗಾಗಿ ಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಅವರು ಫ್ರಾನ್ಸ್ ದೇಶಕ್ಕೆ ಹೊರಡಲು ಸಜ್ಜಾಗಿದ್ದಾರೆ. ಹೀಗೆ ಫೆಬ್ರವರಿ 11ಕ್ಕೆ ಮಹತ್ವದ ಸಭೆ ಪ್ಯಾರಿಸ್‌ನಲ್ಲಿ ನಡೆಯಲಿದ್ದು, ಜಗತ್ತಿನ ಶಕ್ತಿಶಾಲಿ ದೇಶಗಳು ಸಭೆಯಲ್ಲಿ ಭಾಗಿಯಾಗಲಿವೆ. ಅಮೆರಿಕದ ಉಪಾಧ್ಯಕ್ಷರು, ಚೀನಾದ ಉಪ ಪ್ರಧಾನಿ ಸೇರಿದಂತೆ ಫ್ರಾನ್ಸ್ ದೇಶದ ಅಧ್ಯಕ್ಷರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದೇ ಕಾರಣಕ್ಕೆ ಖುದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಹೋಗುತ್ತಿದ್ದಾರೆ.
ಫೆಬ್ರವರಿ 12ಕ್ಕೆ ದ್ವಿಪಕ್ಷೀಯ ಮಾತುಕತೆ
'ಎಐ ತಂತ್ರಜ್ಞಾನ' ಶೃಂಗಸಭೆಯ ಜೊತೆಗೆ ಫ್ರಾನ್ಸ್ ಮೂಲದ ಪ್ರಮುಖ ಕಂಪನಿಗಳ CEOಗಳ ಜೊತೆ ಮೀಟಿಂಗ್ ನಡೆಸಲಿದ್ದಾರೆ ಪಿಎಂ ಮೋದಿ. ಹಾಗೂ ಫೆಬ್ರವರಿ 12ಕ್ಕೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಸಭೆ ನಡೆಸಲಿದ್ದಾರೆ ಭಾರತದ ಪ್ರಧಾನಿಗಳು. ಈ ವೇಳೆ ಭಾರತ & ಫ್ರಾನ್ಸ್‌ನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತುಕತೆ ಸೇರಿ, ನ್ಯೂಕ್ಲಿಯರ್ ರಿಯಾಕ್ಟರ್ ಹಾಗೂ ಸೇನಾ ಸಾಮಗ್ರಿಗಳ ವ್ಯಾಪಾರ & ವಹಿವಾಟಿನ ಬಗ್ಗೆ ಚರ್ಚೆ ನಡೆಯಲಿದೆ.
ಮತ್ತೊಂದು ಕಡೆಯಲ್ಲಿ ದಕ್ಷಿಣ ಫ್ರಾನ್ಸ್ ನಗರ ಮಾರ್ಸಿಲ್ಲೆಯಲ್ಲಿ ಭಾರತ ಹೊಸ ರಾಯಭಾರ ಕಚೇರಿಯನ್ನ ತೆರೆಯಲಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಧಾನಿಯವರ ಈ ಭೇಟಿ ಗಮನ ಸೆಳೆದಿದೆ. ಹಾಗೇ ಹಲವು ಮಹತ್ವದ ಒಪ್ಪಂದಗಳು ನಡೆಯಲಿವೆ, ಇಲ್ಲಿಂದ ನೇರವಾಗಿ ಪಿಎಂ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳಲಿದ್ದು, ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications