
ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ, ಇಂದು ಫ್ರಾನ್ಸ್ ಭೇಟಿ
ಕೋಪನ್ ಹೇಗನ್ ಮೇ 04: 3 ದಿನಗಳ ಯುರೋಪ್ ಪ್ರವಾಸದ ಅಂತಿಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನೂತನವಾಗಿ ಮರು ಚುನಾಯಿತರಾದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಲು ಪ್ಯಾರಿಸ್‌ಗೆ ತೆರಳಲಿದ್ದಾರೆ.
ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದಾರೆ. 2018 ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಭಾರತ-ನಾರ್ಡಿಕ್ ಮೊದಲ ಶೃಂಗಸಭೆಯನ್ನು ನಡೆಸಲಾಗಿತ್ತು.
ಕೋಪನ್ ಹೇಗನ್ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿ ಡೆನ್ಮಾರ್ಕ್ ರಾಣಿ
ಭಾರತ-ನಾರ್ಡಿಕ್ ಶೃಂಗಸಭೆ: ಕಾರ್ಯಸೂಚಿಯಲ್ಲಿ ಏನಿದೆ
ಡೆನ್ಮಾರ್ಕ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ವಿಕಸನಗೊಳ್ಳುತ್ತಿರುವ ಜಾಗತಿಕ ಭದ್ರತಾ ಸನ್ನಿವೇಶ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ-ನಾರ್ಡಿಕ್ ಸಹಕಾರದಂತಹ ವಿಷಯಗಳ ಮೇಲೆ ಶೃಂಗಸಭೆಯು ಗಮನಹರಿಸುತ್ತದೆ.
ಭಾರತವು ನಾರ್ಡಿಕ್ ದೇಶಗಳೊಂದಿಗೆ ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟು ಹೊಂದಿದೆ. ಭಾರತವು ಯುರೋಪಿಯನ್ ಒಕ್ಕೂಟದೊಂದಿಗೆ ಪ್ರಮುಖ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. 2020 ರಲ್ಲಿ, ಯುರೋಪಿಯನ್ ಒಕ್ಕೂಟದೊಂದಿಗೆ ಸುಮಾರು 66.6 ಮಿಲಿಯನ್ ಡಾಲರ್‌ನಷ್ಟು ವಾಣಿಜ್ಯ ಸಂಬಂಧ ಹೊಂದಿದೆ.
ಇಂದು ಪ್ರಧಾನಿ ಮೋದಿ, ಮ್ಯಾಕ್ರನ್ ಭೇಟಿ
ಡೆನ್ಮಾರ್ಕ್ ಶೃಂಗಸಭೆಯ ನಂತರ ಫ್ರಾನ್ಸ್‌ನ ಹೊಸದಾಗಿ ಮರು ಆಯ್ಕೆಯಾದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಸಭೆಗಾಗಿ ಪಿಎಂ ಮೋದಿ ಪ್ಯಾರಿಸ್‌ನಲ್ಲಿ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಸೋಮವಾರ ಬರ್ಲಿನ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಆರನೇ ಭಾರತ-ಜರ್ಮನಿ ಅಂತರ ಸರ್ಕಾರಿ ಸಮಾಲೋಚನೆಯಲ್ಲಿ ಭಾಗವಹಿಸುವ ಮೊದಲು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು.

ಡೆನ್ಮಾರ್ಕ್ ರಾಣಿ ಮಾರ್ಗರೆಥೆ II ಮಂಗಳವಾರ ಕೋಪನ್ ಹ್ಯಾಗನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತವನ್ನು ಕೋರಿದರು. ರಾಣಿಯ ಆಳ್ವಿಕೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. 82 ವರ್ಷ ವಯಸ್ಸಿನ ರಾಣಿ 1972 ರಿಂದ ಡೆನ್ಮಾರ್ಕ್‌ನ ಆಳ್ವಿಕೆಯ ರಾಣಿಯಾಗಿದ್ದಾರೆ. ಡ್ಯಾನಿಶ್ ರಾಜಪ್ರಭುತ್ವವು ವಿಶ್ವದ ಅತ್ಯಂತ ಹಳೆಯದಾಗಿದೆ.