Narendra Modi: ನೀವೆ ಭಾರತದ ರಾಯಭಾರಿಗಳು; ಅಮೆರಿಕದ ಭಾರತೀಯರಿಗೆ ಪ್ರಧಾನಿ ಧನ್ಯವಾದ
ಯುಎಸ್‌ಗೆ ಮೂರು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲಾಂಗ್ ಐಲ್ಯಾಂಡ್‌ನ ನಸ್ಸೌ ಕೊಲಿಜಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಬ್ರಾಂಡ್ ಅಂಬಾಸಿಡರ್ ಗಳು ಎಂದು ಹಾಡಿ ಹೊಗಳಿರುವ ಮೋದಿ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಧನ್ಯವಾದ ತಿಳಿಸಿದರು.
ನಸ್ಸೌ ಕೊಲಿಜಿಯಂನಲ್ಲಿ ನಡೆದ ಮಹಾ ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಭಾಷಣ ಆರಂಭಿಸಲು ವೇದಿಕೆ ಮೇಲೆ ಬರುತ್ತಿದ್ದಂತೆ ನೆರೆದಿದ್ದ ಜನ "ಮೋದಿ, ಮೋದಿ" ಎಂದು ಕೂಗುವ ಮೂಲಕ ಸಂತಸ ವ್ಯಕ್ತಪಡಿಸಿದರು.

"ಭಾರತ ಮಾತೆಗೆ ಜೈ" ಎನ್ನುವ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ಆರಂಭಿಸಿದರು. ನಮಸ್ತೆ ಕೂಡ ಸ್ಥಳೀಯತೆಯಿಂದ ಜಾಗತಿಕ ಮಟ್ಟಕ್ಕೆ ಹೋಗಿದೆ ಎನ್ನುವ ಮೂಲಕ, ವಿಶ್ವ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆ ಎನ್ನುವುದನ್ನು ತಿಳಿಸಿದರು. ಅಲ್ಲದೆ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಧನ್ಯವಾದ ಹೇಳಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಯುಎಸ್‌ನಲ್ಲಿ ತಾವು ಹಿಂದೆ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಕಾರ್ಯಕ್ರಮಗಳನ್ನು ನೆನಒಉ ಮಾಡಿಕೊಂಡರು. ಅವರು 2014ರಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್, 2016ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್, 2018 ರಲ್ಲಿ ಹೂಸ್ಟನ್, ಟೆಕ್ಸಾಸ್, 2023 ವಾಷಿಂಗ್ಟನ್ ಮತ್ತು ಈ ಬಾರಿ ಲಾಂಗ್ ಐಲ್ಯಾಂಡ್‌ನಲ್ಲಿ ಭಾರತೀಯ ಸಮುದಾಯಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಧನ್ಯವಾದ ತಿಳಿಸಿದ ಅವರು, ಇಲ್ಲಿ ನೆಲೆಸಿರುವ ಭಾರತೀಯರು ಎರಡೂ ದೇಶಗಳ ನಡುವೆ ಸೇತುವೆಯಾಗಿದ್ದಾರೆ ಎಂದರು. ಭಾರತ-ಯುಎಸ್ ಸಂಬಂಧವನ್ನು ಬಲಪಡಿಸಲು ಇವರು ಸಹಾಯ ಮಾಡಿದ್ದಾರೆ ಎಂದು ಹೇಳಿದರು. ನೀವೆಲ್ಲರೂ ಏಳು ಸಮುದ್ರಗಳನ್ನು ದಾಟಿ ಬಂದಿದ್ದರೂ, ಭಾರತದ ಪ್ರೀತಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎಂದರು.
ಭಾರತದ ವಿವಿಧ ಭಾಗದ ಜನ ವಿದೇಶಗಳಲ್ಲಿ ನೆಲೆಸಿರಬಹುದು, ಯುಎಸ್‌ನಲ್ಲಿ ಕೂಡ ನೆಲೆಸಿದ್ದಾರೆ ಅವರು ಇಲ್ಲಿನ ಪ್ರಜೆಗಳಾಗಿದ್ದಾರೆ ಆದರೆ ನಮ್ಮನ್ನೆಲ್ಲಾ ಒಂದು ಮಾಡುವ ಭಾವನೆ 'ಭಾರತ ಮಾತೆಗೆ ಜೈ' ಘೋಷವಾಕ್ಯ ಎಂದು ಕೂಗಿದರು. ಪ್ರೇಕ್ಷಕರು ಕೂಡ ಜೈ ಎಂದು ಕೂಗುವ ಮೂಲಕ ಸಹಮತ ವ್ಯಕ್ತಪಡಿಸಿದರು.
ನಾವೆಲ್ಲರೂ ಭಾರತೀಯರು ಎನ್ನುವ ಭಾವನೆಯೇ ನಮ್ಮನ್ನು ಒಂದುಗೂಡಿಸುತ್ತದೆ. ಇದೇ ನಮ್ಮ ದೊಡ್ಡ ಶಕ್ತಿಯಾಗಿದೆ ಎಂದರು. ಯುಎಸ್‌ನಲ್ಲಿ ನೆಲೆಸಿರುವ ಭಾರತೀಯರನ್ನು ರಾಯಭಾರಿಗಳು ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಭಾರತವು ಈಗ ಗಳಿಸಿರುವ ಗೌರವಕ್ಕೆ ಯುಎಸ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ಧನ್ಯವಾದ ತಿಳಿಸಿದರು.












Click it and Unblock the Notifications