ಭ್ರಷ್ಟ ಮಾಜಿ ಪ್ರಧಾನಿಗೆ ಪ್ರತಿ ತಿಂಗಳು 12 ಲಕ್ಷ ರೂಪಾಯಿ ಖರ್ಚು!
ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಭ್ರಷ್ಟರ ಕೂಪವಾಗಿ ಹೋಗಿದೆ. ಹೀಗಾಗಿಯೇ ಅಲ್ಲಿರುವ ಪ್ರತಿಯೊಬ್ಬ ರಾಜಕಾರಣಿ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗಾಗಲೇ ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿನ ಊಟ ತಿನ್ನುತ್ತಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ, ಪ್ರತಿ ತಿಂಗಳು 12 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರಂತೆ!
ಇಮ್ರಾನ್ ಖಾನ್ ಇದೀಗ ರಾವಲ್ಪಿಂಡಿ ಅಡಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ರೀತಿ ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವ್ಯವಸ್ಥೆಗೆ ಪ್ರತಿ ತಿಂಗಳು ₹12 ಲಕ್ಷ ವೆಚ್ಚವಾಗುತ್ತಿದೆ ಎಂದು, ಪಾಕ್‌ನ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 71 ವರ್ಷ ವಯಸ್ಸಿನ ಇಮ್ರಾನ್ ಖಾನ್ ಅವರಿಗೆ ಜೈಲಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ ಪಾಕ್‌ನ ಸರ್ಕಾರ. ಅಲ್ಲದೆ ಇಮ್ರಾನ್ ಜೀವಕ್ಕೆ ಅಪಾಯ ಇರುವ ಕಾರಣಕ್ಕೆ, ಜೈಲು ಆವರಣಕ್ಕೆ ಲಕ್ಷ ಲಕ್ಷ ಮೌಲ್ಯದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ ಪ್ರತಿ ತಿಂಗಳು ಭಾರಿ ದೊಡ್ಡ ಪ್ರಮಾಣದ ಹಣ ಖರ್ಚಾಗುತ್ತಿದೆ ಎನ್ನಲಾಗಿದೆ.

ಪ್ರತ್ಯೇಕ ಅಡುಗೆ ಮನೆ ವ್ಯವಸ್ಥೆ!
ಇಮ್ರಾನ್ ಖಾನ್ ಜೀವಕ್ಕೆ ಅಪಾಯ ಇರುವ ಕಾರಣ, ಅವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು ಎಂದು ಇಮ್ರಾನ್ ಖಾನ್ ಕುಟುಂಬ ಸದಸ್ಯರು ಬೇಡಿಕೆ ಇಟ್ಟಿದ್ದರು. ಹೀಗಾಗಿ ಪಾಕಿಸ್ತಾನದ ಜೈಲಿನಲ್ಲಿ ತಯಾರಿಸುವ ಊಟದ ಬದಲಾಗಿ ಇಮ್ರಾನ್ ಖಾನ್‌ಗೆ ಈಗ ಪ್ರತ್ಯೇಕ ಅಡುಗೆ ಕೋಣೆ ಕಟ್ಟಿಸಲಾಗಿದೆ. ಇಲ್ಲೇ ಇಮ್ರಾನ್ ಖಾನ್ ಅವರಿಗೆ ಆಹಾರ ತಯಾರಿಸಲಾಗುತ್ತೆ. ಹಾಗೇ ಇಮ್ರಾನ್ ಖಾನ್‌ಗೆ ಅಡುಗೆ ಮಾಡುವುದನ್ನು ಪರಿಶೀಲನೆ ಮಾಡಲು ಒಬ್ಬ ಅಧಿಕಾರಿ ನೇಮಕ ಮಾಡಲಾಗಿದೆ. ವೈದ್ಯಕೀಯ ಅಧಿಕಾರಿ ಕೂಡ ನೇಮಕ ಆಗಿದ್ದು, ತಪಾಸಣೆ ಮಾಡಿ ನಂತರ ಇಮ್ರಾನ್‌ಗೆ ಊಟ ನೀಡಲಾಗುತ್ತಿದೆ.
15 ಭದ್ರತಾ ಸಿಬ್ಬಂದಿ ನೇಮಕ
ಇದಿಷ್ಟು ಮಾತ್ರವಲ್ಲದೆ ಇಮ್ರಾನ್ ಖಾನ್ ಇರುವ ಜೈಲಿನ ಕೋಣೆಗೆ ಬಿಗಿ ಭದ್ರತೆ ಒದಗಿಸಿದ್ದು, ಇಮ್ರಾನ್ ಜೈಲು ಕೋಣೆ ಪ್ರವೇಶಕ್ಕೆ ಮೊದಲು ಅನುಮತಿ ಬೇಕು. ಭದ್ರತೆಗೆ ವೃತ್ತಿಪರವಾಗಿ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸಲಾಗಿದೆ. ಇಬ್ಬರು ಭದ್ರತಾ ಅಧಿಕಾರಿಗಳು ಸೇರಿದಂತೆಯೆ ಮೂವರು ವೈಯಕ್ತಿಕ ಭದ್ರತಾ ಸಿಬ್ಬಂದಿ ಕೂಡ ನೇಮಕವಾಗಿದ್ದಾರೆ. ಈ ಮೂಲಕ ಒಟ್ಟಾರೆ 15 ಸಿಬ್ಬಂದಿ ಇದೀಗ ಇಮ್ರಾನ್ ಖಾನ್‌ಗೆ ಭದ್ರತೆ ಒದಗಿಸುತ್ತಿದ್ದು ಈ ಎಲ್ಲಾ ಖರ್ಚುಗಳು ಸೆರಿ ತಿಂಗಳಿಗೆ 12 ಲಕ್ಷ ರೂಪಾಯಿ ಹಣವನ್ನು ಪಾಕ್ ಸರ್ಕಾರ ಖರ್ಚು ಮಾಡುತ್ತಿದೆಯಂತೆ.

ಪಾಕಿಸ್ತಾನ ಸೇನೆಯಿಂದ ಪಿತೂರಿ ನಡೆದಿತ್ತಾ?
ಪಾಕ್ ಸೇನೆ ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದ್ದ ಆರೋಪ ಇತ್ತು. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದರೆ ಹತ್ತಾರು ವರ್ಷ ಲಾಕ್ ಮಾಡಬಹುದು, ಎನ್ನುವ ಕುತಂತ್ರ ಕೂಡ ಇದೆ ಎಂಬ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲಾ ತಿಕ್ಕಾಟಗಳನ್ನು ಇಮ್ರಾನ್ ಖಾನ್ ಬೆಂಬಲಿಗರು ನಡೆಸಿದರೂ ಇಮ್ರಾನ್ ಖಾನ್ ಜೈಲು ಸೇರಿದರು. ಹಲವು ತಿಂಗಳಿಂದ ಕೂಡ ಜೈಲಿನಲ್ಲೇ ಇಮ್ರಾನ್ ಖಾನ್ ಪರದಾಡುತ್ತಿದ್ದಾರೆ.












Click it and Unblock the Notifications