ಪುಲ್ವಾಮಾ ದಾಳಿ ನೆನಪು ಮಾಸುವ ಮೊದಲೇ ಪಹಲ್ಗಾಮ್ ಅಟ್ಯಾಕ್... Pahalgam Terror Attack
ಭಾರತದ ಕಿರೀಟ ಜಮ್ಮು & ಕಾಶ್ಮೀರ ಪದೇ ಪದೇ ಜಾಗತಿಕ ಮಟ್ಟದಲ್ಲಿ ಉಗ್ರರ ವಿಚಾರದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಈಗಾಗಲೇ ಜಮ್ಮು & ಕಾಶ್ಮೀರ ರಕ್ತದಲ್ಲೇ ನೆಂದು ಹೋಗಿದೆ, ಆದರೂ ದುರಂತಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಇಂದು ಕೂಡ ಅದೇ ರೀತಿಯ ದುರಂತವು ನಡೆದು ಹೋಗಿದ್ದು, ಪುಲ್ವಾಮಾ ದಾಳಿ ನೆನಪು ಮಾಸುವ ಮೊದಲೇ ಪಹಲ್ಗಾಮ್ ಅಟ್ಯಾಕ್ ಭಯ ಹುಟ್ಟಿಸಿದೆ...
ಜಮ್ಮು & ಕಾಶ್ಮೀರ ಬಿಟ್ಟು ಭಾರತವನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ, ಹೀಗಿದ್ದಾಗಲೇ ಪಾಪಿ ಪಾಕಿಸ್ತಾನ ಸೇರಿದಂತೆ ಭಾರತದ ಶತ್ರು ದೇಶಗಳು ಜಮ್ಮು & ಕಾಶ್ಮೀರದ ಮೇಲೆ ಕಣ್ಣು ಹಾಕಿ ಕೂತಿವೆ. ಇದೇ ಕಾರಣಕ್ಕೆ ಜಮ್ಮು & ಕಾಶ್ಮೀರ ಭಾಗದಲ್ಲಿ ಉಗ್ರರಿಗೆ ಕೂಡ ಪ್ರಚೋದನೆ ನೀಡುತ್ತಿರುವ ಆರೋಪ ಪಾಪಿ ಪಾಕಿಸ್ತಾನದ ಮೇಲೆ ಇದೆ. ಹಲವು ವರ್ಷಗಳಿಂದಲೂ ಇಲ್ಲಿ ನೆಮ್ಮದಿಯೇ ಇಲ್ಲ, ಹೀಗಿದ್ದರೂ ಕಳೆದ ಕೆಲವು ವರ್ಷಗಳಿಂದ ಉಗ್ರರ ಹಾವಳಿಯು ಒಂದಷ್ಟು ಕಡಿಮೆ ಆಗಿತ್ತು. ಆದರೆ ಇದೀಗ ಮತ್ತೆ ಬಾಲ ಬಿಚ್ಚಿರುವ ಉಗ್ರರು, ಜಮ್ಮು & ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ್ದಾರೆ. ಈ ದುರ್ಘಟನೆಯು 2019ರ ಪುಲ್ವಾಮಾ ದಾಳಿ ನಂತರದ ಅತ್ಯಂತ ಘೋರ & ಭೀಕರ ದಾಳಿ ಆಗಿದೆ.

ಅಂದು 40 ಯೋಧರು ಹುತಾತ್ಮರಾಗಿದ್ದರು...
ಅದು 2019ರ ಫೆಬ್ರವರಿ 14, ಇಂಡಿಯಾದ ಪ್ರತಿಯೊಬ್ಬ ಪ್ರಜೆಯೂ ಮರೆಯಲು ಆಗದಿರುವ ದಿನ. ಯಾಕಂದ್ರೆ ಇದೇ ದಿನ ಭಾರತದ 40 ಹೆಮ್ಮೆಯ ಯೋಧರು ಹುತಾತ್ಮರಾಗಿದ್ದರು. ಆ ದಿನವನ್ನು ಇಡೀ ಜಗತ್ತೇ ಕರಾಳ ದಿನ ಎನ್ನುತ್ತದೆ. ಹೀಗೆ, ಇಂತಹ ಭೀಕರ ಘಟನೆ ನಡೆದು 6 ವರ್ಷಗಳ ನಂತರ ಮತ್ತೊಂದು ರಣಭೀಕರ ಘಟನೆಗೆ ಜಮ್ಮು & ಕಾಶ್ಮೀರ ಸಾಕ್ಷಿಯಾಗಿದೆ. ಈ ಘಟನೆಯು ಇದೀಗ ಭಾರತೀಯರನ್ನು ಬಡಿದೆಬ್ಬಿಸಿದ್ದು, ಉಗ್ರರ ಹೆಡೆಮುರಿ ಕಟ್ಟೋದಕ್ಕೆ ಆಗ್ರಹ ಕೇಳಿ ಬಂದಿದೆ.
ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ ಹತ್ಯೆ
ಅಷ್ಟಕ್ಕೂ ಇದೀಗ ಆಗಿದ್ದು ಏನು ಅಂದ್ರೆ, ಕಾಶ್ಮೀರದ ಪ್ರಮುಖ ನಗರ ಶ್ರೀನಗರ ಭಾಗದಿಂದ ಕೇವಲ 90 ಕಿ.ಮೀ. ದೂರದಲ್ಲಿ ಇರುವ ಪಹಲ್ಗಾಮ್ ಜಾಗದಲ್ಲಿ ಉಗ್ರರು ಅಟ್ಟಹಾಸವನ್ನ ಮೆರೆದಿದ್ದಾರೆ. ಪಹಲ್ಗಾಮ್ ಪ್ರದೇಶಕ್ಕೆ ಪ್ರವಾಸಕ್ಕೆ ಅಂತಾ ತೆರಳಿದ್ದ ಟೂರಿಸ್ಟ್‌ಗಳನ್ನೇ ಈಗ ಟಾರ್ಗೆಟ್ ಮಾಡಿ ಪಾಪಿ ಉಗ್ರರು ದಾಳಿ ಮಾಡಿದ್ದಾರೆ.
ಈ ರೀತಿಯಾಗಿ 25ಕ್ಕೂ ಹೆಚ್ಚು ಪ್ರವಾಸಿಗರು ಬಲಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ ಮತ್ತು ಇನ್ನೂ ಹಲವರು ನಾಪತ್ತೆ ಆಗಿದ್ದಾರೆಂಬ ಆರೋಪ ಇದ್ದು, ಗಾಯಾಳುಗಳ ಪರಿಸ್ಥಿತಿ ಕೂಡ ಚಿಂತಾಜನಕ ಎಂಬಂತಿದೆ. ಈ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭಯ ಕಾಡುತ್ತಿದೆ. ಮತ್ತೊಂದು ಕಡೆ ಕಣಿವೆ ರಾಜ್ಯದಲ್ಲಿ ಇದೀಗ ಪರಿಸ್ಥಿತಿ ಮತ್ತೆ ಸೂಕ್ಷ್ಮವಾಗಿದ್ದು, ಈ ಹಿನ್ನೆಲೆ ಭಾರತೀಯ ಸೇನೆ ಮತ್ತಷ್ಟು ಅಲರ್ಟ್ ಆಗಿದೆ.












Click it and Unblock the Notifications