ಖಮೇನಿ ಬಳಿಕ ಇರಾನ್ ದೇಶಕ್ಕೆ ಹೊಸ ಸರ್ವಾಧಿಕಾರಿ, ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ದಾಳಿ | Operation Roaring Lion
ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ಪಾಲಿಗೆ ದೊಡ್ಡ ಶತ್ರುವಾಗಿದ್ದ ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿ ದೊಡ್ಡಣ್ಣ ಅಮೆರಿಕ ಖುಷಿಯಾಗಿದೆ. ಅಮೆರಿಕ ತನ್ನ ಮಿತ್ರ ದೇಶ, ಇಸ್ರೇಲ್ ಮೂಲಕ ಈ ಕೆಲಸ ಸಾಧಿಸಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಜೊತೆಗೆ ಉತ್ತಮ ನಂಟು ಹೊಂದಿರುವ ದೇಶಗಳೇ ಹೆಚ್ಚು. ಆದರೆ ಇರಾನ್ ಮಾತ್ರ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರ ಹಾಕುತ್ತಾ, ಶತ್ರುತ್ವ ಕಟ್ಟಿಕೊಂಡಿದೆ. ಅದರಲ್ಲೂ ಖಮೇನಿಯ ಆಡಳಿತ ಇದ್ದ ಇರಾನ್ ದೇಶದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದವು. ಯಾವಾಗ ಇರಾನ್ ಪರಮಾಣು ಬಾಂಬ್ ತಯಾರಿಸಲು ಸಿದ್ಧವಾಗಿದೆ ಎಂಬುದು ಗೊತ್ತಾಗಿತ್ತೋ ಅಲ್ಲಿಂದ ಮುಂದೆ ತಿಕ್ಕಾಟ ಜೋರಾಗಿತ್ತು.
ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ಇರಾನ್ ವಿರುದ್ಧ ಶನಿವಾರ ದಿಢೀರ್ ದಾಳಿ ಶುರು ಮಾಡಿತ್ತು ಇಸ್ರೇಲ್ ಸೇನೆ. ಹಾಗೇ ತನ್ನ ಮೊದಲ ದಿನದ ಕಾರ್ಯಾಚರಣೆಯ ಸಮಯದಲ್ಲೇ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿದೆ ಇಸ್ರೇಲ್. ಇದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಒಕ್ಕೂಟಕ್ಕೆ ಸಿಕ್ಕಾಪಟ್ಟೆ ಖುಷಿ ತರಿಸಿದೆ. ಹೀಗೆ ಖಮೇನಿ ಬಳಿಕ ಇರಾನ್ ದೇಶಕ್ಕೆ ಹೊಸ ಸರ್ವಾಧಿಕಾರಿಯ ಎಂಟ್ರಿ ಆಗಿದ್ದು, ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡ ದಾಳಿ ಹಿಂಸಾಚಾರವನ್ನ ಹೆಚ್ಚು ಮಾಡುತ್ತಿದೆ. ಹೀಗಾಗಿ ಖಮೇನಿ ರೀತಿಯೇ ಇರಾನ್‌ನ ನೂತನ ಸರ್ವಾಧಿಕಾರಿ ಕಥೆ ಮುಗಿದು ಹೋಗುತ್ತಾ? ಎಂಬ ಚರ್ಚೆ ಜೋರಾಗಿದೆ. ಈಗಾಗಲೇ ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ನಡೆಸಿದ ದಾಳಿ ಪರಿಣಾಮ ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ ಹಲವು ಭಾಗಗಳು ಅಲ್ಲಾಡಿ ಹೋಗಿವೆ.

ಭಾರತೀಯರಲ್ಲಿ ಕಾಡುತ್ತಿದೆ ತೀವ್ರ ಆತಂಕ
ಅಮೆರಿಕ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸೇನಾ ನೆಲೆಗಳನ್ನು ಹೊಂದಿದ್ದು, ಇದನ್ನೆಲ್ಲಾ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ ಇರಾನ್ ಮಿಲಿಟರಿ. ಹೀಗಾಗಿ ಕುವೈತ್, ಯುಎಇ, ಕತಾರ್ ಸೇರಿ ಹಲವು ದೇಶಗಳ ಮೇಲೆ ದಾಳಿ ನಡೆಸುತ್ತಿದೆ ಇರಾನ್ ಸೇನೆ. ಈಗಾಗಲೇ ಅಪಾರ ಪ್ರಮಾಣದ ಹಾನಿಯು ಆಗಿದ್ದು ಮಧ್ಯಪ್ರಾಚ್ಯ ಭಾಗದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ನೋಡ ನೋಡುತ್ತಲೇ ತೈಲ ರಾಷ್ಟ್ರಗಳ ಪಾಡು ಕರುಣಾಜನಕ ಸ್ಥಿತಿಗೆ ತಲುಪುತ್ತಿದ್ದು, ಯಾವುದೇ ಕ್ಷಣದಲ್ಲಿ ಇರಾನ್ ವಿರುದ್ಧ ಇವರು ಒಟ್ಟಾಗಿ ಮುಗಿಬೀಳುವ ಸಾಧ್ಯತೆ ಕೂಡ ಇದೀಗ ದಟ್ಟವಾಗಿದೆ. ಮತ್ತೊಂದು ಕಡೆ ಭಾರತದಿಂದ ವಲಸೆ ಹೋಗಿ, ಮಧ್ಯಪ್ರಾಚ್ಯ ಭಾಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೆ ಕೂಡ ಭಯ ಈಗ ಕಾಡುತ್ತಿದೆ.
ಅಮೆರಿಕ ನೌಕಾಪಡೆಗೆ ಇರಾನ್ ಶಾಕ್
ಮಧ್ಯಪ್ರಾಚ್ಯ ಭಾಗದ ಇರಾನ್ ದೇಶ ತನ್ನ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ಹೊರ ತೆಗೆಯುತ್ತಿದೆ. ಇರಾನ್ ಬಳಿ ಬೀಡುಬಿಟ್ಟು ಶತ್ರುಗಳ ಎದೆಯಲ್ಲಿ ನಡುಕ ತರಿಸಿದ್ದ USS ಅಬ್ರಹಾಂ ಲಿಂಕನ್ ಯುದ್ಧ ನೌಕೆ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಯುದ್ಧ ನೌಕೆಗಳ ಪೈಕಿ ಒಂದಾಗಿದೆ. USS ಅಬ್ರಹಾಂ ಲಿಂಕನ್‌ಗೆ ಇರುವ ಮತ್ತೊಂದು ಶಕ್ತಿ ಏನು ಎಂದರೆ, ಲಿಂಕನ್ ಶತ್ರುಗಳ ಜಲಗಡಿಗೆ ಹತ್ತಿರದಲ್ಲೇ ಇದ್ದರೂ ಅದನ್ನು ಗುರುತಿಸುವುದು ಕಷ್ಟ. ಎಲೆಕ್ಟ್ರಾನಿಕ್ ಸಂಕೇತಗಳು ಸೇರಿದಂತೆ ಯುದ್ಧ ನೌಕೆಗಳ ನಿಖರ ಜಾಗ ತಿಳಿಯಲು ಪ್ರಯೋಗಿಸುವ ತಂತ್ರಗಳನ್ನ ಕೂಡ ಅಬ್ರಹಾಂ ಲಿಂಕನ್ ನಿಭಾಯಿಸುತ್ತೆ. ಹೀಗೆ ಶತ್ರು ದೇಶಗಳಿಗೆ ಈ ನೌಕೆ ವಿರುದ್ಧ ಹೋರಾಡುವುದು ಕಷ್ಟದ ಕೆಲಸವಾಗುತ್ತದೆ. ಆದರೆ ಇಂತಹ ನೌಕೆ ಮೇಲೆ ಕೂಡ ಇರಾನ್‌ನ ಸೇನೆ ಇದೀಗ ದಾಳಿ ಮಾಡಿರುವುದು ಆತಂಕ ಹೆಚ್ಚಿಸಿದ್ದು, ಅಮೆರಿಕ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಇರಾನ್ ಮೇಲೆ ಮುಗಿಬೀಳುವ ಸಾಧ್ಯತೆ ಇದೆ.












Click it and Unblock the Notifications