ಬಿತ್ತು.. ಬಿತ್ತು.. ಕ್ಷಿಪಣಿಗಳ ರಾಶಿ ಅರಬ್ ದೇಶಗಳ ಮೇಲೆ ಮತ್ತೆ ಬಿತ್ತು | Operation Roaring Lion
ಇರಾನ್ ಮಿಲಿಟರಿ ಮೈಮೇಲೆ ಈಗ ದೆವ್ವ ಬಂದಂತೆ ಆಗಿದ್ದು, ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಹತ್ಯೆ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಖಮೇನಿ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇನೆ ಒಟ್ಟಾಗಿ ಪ್ಲಾನ್ ಮಾಡಿ ದಾಳಿ ಮಾಡಿ ಕಥೆ ಮುಗಿಸಿದ್ದವು. ಆ ನಂತರ ರೊಚ್ಚಿಗೆದ್ದ ಇರಾನ್ ಮಿಲಿಟರಿ ಇದೀಗ ಎಲ್ಲಾ ರೀತಿ ಅಸ್ತ್ರಗಳನ್ನು ಬಳಕೆ ಮಾಡಿ ದಾಳಿ ಮಾಡುತ್ತಿದೆ, ಈ ಮೂಲಕ ಸಮುದ್ರ ಮಾರ್ಗ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಎದುರಾಳಿ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಆದರೆ ಇಂತಹ ಸಮಯದಲ್ಲಿ ಅರಬ್ ದೇಶಗಳು ಮಾತ್ರ ಇರಾನ್ ಕೊಡುತ್ತಿರುವ ಏಟಿಗೆ ನಲುಗಿ ಹೋಗುತ್ತಿವೆ. ಕ್ಷಿಪಣಿಗಳ ರಾಶಿಯನ್ನೇ ಅರಬ್ ದೇಶಗಳ ಮೇಲೆ ತಂದು ಸುರಿಯುತ್ತಿದೆ ಇರಾನ್.
ಫೆಬ್ರವರಿ 28 ಶನಿವಾರ ಶುರುವಾಗಿದ್ದ ಇರಾನ್ ಯುದ್ಧ ಈಗಾಗಲೇ ಒಂದು ವಾರವನ್ನು ಯಶಸ್ವಿಯಾಗಿ ಮುಗಿಸಿದ್ದು, ನೋಡ ನೋಡುತ್ತಲೇ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅತ್ತ ಸಾವಿರಾರು ಜನರು ಬಲಿ ಆಗಿದ್ದರೆ, ಇನ್ನೊಂದು ಕಡೆ ಯುದ್ಧದ ಪರಿಣಾಮ ಆರ್ಥಿಕವಾಗಿ ಮಧ್ಯಪ್ರಾಚ್ಯ ತತ್ತರಿಸಿ ಹೋಗುತ್ತಿದೆ. ಹಾಗೇ ತೈಲ ಮತ್ತಿತರ ಕಾರಣಗಳಿಗೆ ಅರಬ್ ದೇಶಗಳನ್ನೇ ನಂಬಿಕೊಂಡು ಬದುಕುತ್ತಿರುವ ಪ್ರಪಂಚದ ಇತರ ದೇಶಗಳು ಈಗ ಒದ್ದಾಡುವ ಪರಿಸ್ಥಿತಿ ಇದ್ದು, ತೈಲ ಹಾಗೂ ಅನಿಲದ ಬೆಲೆ ಭಾರಿ ಏರಿಕೆಯನ್ನ ಕಾಣುತ್ತಿದೆ.

ಅಮೆರಿಕ, ಯುರೋಪ್ & ಭಾರತ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಷೇರುಪೇಟೆಗಳು ಈಗಿನ ಯುದ್ಧದ ಒತ್ತಡಕ್ಕೆ ಸಿಲುಕಿ ನರಳಿ ಹೋಗುತ್ತಿವೆ. ಇದೇ ಕಾರಣಕ್ಕೆ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ಫಲ ನೀಡಿದೆ ಇದೀಗ ಮತ್ತೊಂದು ಸುತ್ತಿನಲ್ಲಿ ಇರಾನ್ ಸೇನೆಯು ಅಕ್ಕಪಕ್ಕದ ದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಹೀಗಾಗಿ ಅರಬ್ ದೇಶಗಳು, ಅದರಲ್ಲೂ ಅಮೆರಿಕದ ಸೇನಾ ನೆಲೆ ಇರುವ ದೇಶಗಳು ಈಗ ಫುಲ್ ಅಲರ್ಟ್ ಆಗಿವೆ.
ತೈಲ ಘಟಕ & ಏರ್ಪೋರ್ಟ್ ಟಾರ್ಗೆಟ್
ಇರಾನ್ ಸೇನೆ ಇದೀಗ ಸೌದಿ ಅರೇಬಿಯಾ, ದುಬೈ, ಕತಾರ್ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸಲು ತನ್ನ ಬಳಿ ಇರುವ ಆಧುನಿಕ ಕ್ಷಿಪಣಿ ಹಾಗೂ ಡ್ರೋನ್ ಬಳಕೆ ಮಾಡುತ್ತಿದೆ. ಪ್ರಮುಖವಾಗಿ ತೈಲ ಘಟಕಗಳು ಹಾಗೂ ವಿಮಾನ ನಿಲ್ದಾಣಗಳನ್ನೇ ಟಾರ್ಗೆಟ್ ಮಾಡಿ ಈ ರೀತಿ ದಾಳಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕೆಲವು ಗಂಟೆಗಳ ಹಿಂದಷ್ಟೇ ದುಬೈ ವಿಮಾನ ನಿಲ್ದಾಣದಲ್ಲಿ ಇರಾನ್ ಸೇನೆ ಡ್ರೋನ್ ದಾಳಿ ಮಾಡಿದ ನಂತರ ಎಲ್ಲಾ ವಿಮಾನಗಳ ಓಡಾಟ ಬಂದ್ ಆಗಿತ್ತು. ಮತ್ತೊಂದು ಕಡೆ ತೈಲ ಘಟಕಗಳ ಮೇಲೆ ದಾಳಿ ನಡೆಯುತ್ತಿರುವ ಪರಿಣಾಮ ಅಮಾಯಕ ಕಾರ್ಮಿಕರು ಜೀವ ಬಿಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಆಧುನಿಕ ತಂತ್ರಜ್ಞಾನ ಬಳಸುತ್ತಿರುವ ಅಮೆರಿಕ
ಅಮೆರಿಕ ಸೇನೆ ತನ್ನ ಬಳಿ ಇರುವ ಎಲ್ಲಾ ಹೊಸ ಹೊಸ ಅಸ್ತ್ರಗಳನ್ನು ಇರಾನ್ ಮೇಲೆ ಬಳಸುತ್ತಿದೆ. ಇರಾನ್ ವಿರುದ್ಧದ ಕಾರ್ಯಾಚರಣೆಗೆ ಅಮೆರಿಕ ಆಪರೇಷನ್ ಎಪಿಕ್ ಫ್ಯೂರಿ ಎಂಬ ಹೆಸರನ್ನ ಇಟ್ಟಿದ್ದು, ಘೋರವಾಗಿ ದಾಳಿ ಮಾಡುತ್ತಾ ಇದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ಅಂದ್ರೆ ಎಐ ಮೂಲಕ ಇರಾನ್ ದೇಶಕ್ಕೆ ಆಘಾತ ನೀಡುತ್ತಿರುವ ಅಮೆರಿಕ, ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇರಾನ್ ಮೇಲೆ ಬಾಂಬ್ ಹಾಕುತ್ತಿದೆ. ಅಮೆರಿಕ ಸೈನ್ಯ AI ಆಧಾರಿತ ವ್ಯವಸ್ಥೆ ವ್ಯಾಪಕವಾಗಿ ಬಳಸುತ್ತಿದೆ, ಈ ವ್ಯವಸ್ಥೆಯ ಮೂಲಕ ಗುಪ್ತಚರ ಮಾಹಿತಿಯ ವಿಶ್ಲೇಷಿಸಿ ನಿಖರವಾಗಿ ದಾಳಿ ಮಾಡಲು ಸಾಧ್ಯ ಎನ್ನಲಾಗಿದೆ. ಇಷ್ಟೆಲ್ಲಾ ಮಾಡಿದರೂ ಇರಾನ್ ಮಾತ್ರ ಹಿಡಿತಕ್ಕೆ ಸಿಗುತ್ತಿಲ್ಲ.












Click it and Unblock the Notifications