Operation Ajay: ಇಸ್ರೇಲ್‌ನಿಂದ 5ನೇ ವಿಮಾನ ಭಾರತಕ್ಕೆ: 286 ಮಂದಿ ಸುರಕ್ಷಿತವಾಗಿ ವಾಪಸ್
ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ 'ಆಪರೇಷನ್ ಅಜಯ್' ಅಡಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಮಂಗಳವಾರ ರಾತ್ರಿ ಮತ್ತೆ 286 ಪ್ರಯಾಣಿಕರು ಇಸ್ರೇಲ್‌ನ ಟೆಲ್ ಅವಿವ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ.
ಇಸ್ರೇಲ್‌ನಿಂದ ವಾಪಸಾಗಲು ಬಯಸುವ ಭಾರತೀಯರಿಗೆ ಮರಳಲು ಅನುಕೂಲವಾಗುವಂತೆ ಇದು ಸರ್ಕಾರದ ಆಪರೇಷನ್ ಅಜಯ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದನೇ ವಿಮಾನವಾಗಿದೆ. ಈ ಬಾರಿ 18 ನೇಪಾಳಿ ಪ್ರಜೆಗಳನ್ನು ಕೂಡ ಕರೆತರಲಾಗಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿದ್ದು, ಆಪರೇಷನ್ ಅಜಯ್ ಅಡಿಯಲ್ಲಿ ಐದನೇ ವಿಮಾನದಲ್ಲಿ 18 ನೇಪಾಳದ ಪ್ರಜೆಗಳು ಸೇರಿದಂತೆ 286 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
#OperationAjay
— Arindam Bagchi (@MEAIndia) October 17, 2023
286 passengers including 18 Nepalese nationals arrive onboard 5th flight in New Delhi.
Warmly received by MoS @Dept_of_AHD & @MIB_India @Murugan_MoS at the airport. pic.twitter.com/gHLS2HwjGZ
ಪ್ರಯಾಣಿಕರನ್ನು ಸ್ವಾಗತಿಸಿದ ಮುರುಗನ್
ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುತ್ತಿರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಇಸ್ರೇಲ್‌ನಿಂದ ಬಂದಿರುವ ವಿಮಾನದಲ್ಲಿ ಕೇರಳದ 22 ಮಂದಿ ಇದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.
ಭಾನುವಾರ ಟೆಲ್ ಅವಿವ್‌ನಲ್ಲಿ ಇಳಿದ ನಂತರ ಸ್ಪೈಸ್‌ಜೆಟ್ ವಿಮಾನ A340 ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು ಮತ್ತು ಸಮಸ್ಯೆಯನ್ನು ಸರಿಪಡಿಸಲು ವಿಮಾನವನ್ನು ಜೋರ್ಡಾನ್‌ಗೆ ಕೊಂಡೊಯ್ಯಲಾಯಿತು. ಸಮಸ್ಯೆಯನ್ನು ಪರಿಹರಿಸಿದ ನಂತರ, ವಿಮಾನವು ಮಂಗಳವಾರ ಟೆಲ್ ಅವಿವ್‌ನಿಂದ ಜನರೊಂದಿಗೆ ಮರಳಿತು. ಮೂಲತಃ ಸೋಮವಾರ ಬೆಳಿಗ್ಗೆ ದೆಹಲಿಗೆ ಮರಳಲು ನಿರ್ಧರಿಸಲಾಗಿತ್ತು.
ತೀವ್ರವಾದ ಇಸ್ರೇಲ್ ಹಮಾಸ್ ಸಂಘರ್ಷ
ಇನ್ನು ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ತೀವ್ರವಾಗಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್‌ಗೆ ಭೇಟಿ ನೀಡುವ ಮುನ್ನವೇ ಗಾಜಾದಲ್ಲಿ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆದಿದ್ದು 500 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಉಗ್ರರ ಕೃತ್ಯ ಎಂದು ಇಸ್ರೇಲ್ ಸೇನೆ ಹೇಳಿದ್ದರೆ, ಇಸ್ರೇಲ್ ಸೇನೆ ದಾಳಿ ಮಾಡಿದೆ ಎಂದು ಪ್ಯಾಲೆಸ್ಟಿನ್ ಅಧಿಕಾರಿಗಳು ಹೇಳಿದ್ದಾರೆ.
12ನೇ ದಿನಕ್ಕೆ ಸಂಘರ್ಷ ಕಾಲಿಟ್ಟಿದ್ದು ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾ ಪ್ರದೇಶದಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಸ್ರೇಲ್ ಕೇಳಿದ್ದು, ಸಾವಿರಾರು ಸೈನಿಕರನ್ನು ಗಡಿ ಭಾಗದಲ್ಲಿ ನಿಯೋಜಿಸಿದೆ. ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಇಸ್ರೇಲ್ ಸೇನೆ ಹೇಳಿದೆ.












Click it and Unblock the Notifications