ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!
ಬೆಂಗಳೂರು, ಜೂನ್ 12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಿಬ್ಬರು ಸಿಂಗಪುರದಲ್ಲಿ ನಡೆಸಿರುವ ಸಭೆ ಈಗ ವಿಶ್ವದ ಎಲ್ಲರ ಗಮನ ಸೆಳೆದಿದೆ.
ಉತ್ತರ ಕೊರಿಯಾದಿಂದ ಜಾಂಗ್ ಉನ್ ಅವರು ಬೇರೆ ದೇಶಕ್ಕೆ ಬಂದಿದ್ದು ಇದೆ ಮೊದಲು. ಈ ಮುಂಚೆ ಚೀನಾಕ್ಕೆ ಹೋಗಿ ಬಂದರೂ ರೈಲು ಮಾರ್ಗ ಅನುಸರಿಸುತ್ತಿದ್ದರು. ಆದರೆ, ವಿಮಾನ ಮಾರ್ಗವಾಗಿ ಸಿಂಗಪುರಕ್ಕೆ ತೆರಳಿ, ಸಂಚಲನ ಮೂಡಿಸಿದ್ದಾರೆ.
ರಹಸ್ಯಮಯ ಜೀವನ ಸಾಗಿಸುವ ಕಿಮ್ ಅವರು ಟ್ರಂಪ್ ಜತೆಗಿನ ಮಾತುಕತೆ ನಡೆಸಲು ಬಂದಿದ್ದು, ಕಿಮ್ ಅವರ ಜತೆಗೆ ಬಂದಿರುವ ನಿಯೋಗದಲ್ಲಿರುವ ಅವರ ತಂಗಿ ಕಿಮ್ ಯೋ ಜಾಂಗ್ ಎಲ್ಲರ ಗಮನ ಸೆಳೆದಿದ್ದಾರೆ.

ಕಿಮ್ ಯೋ ಜಾಂಗ್: ಕಿಮ್ ಜಾಂಗ್ ಉನ್ ಅವರ ಕಿರಿಯ ಸೋದರಿ ಕಿಮ್ ಯೋ ಅವರು ಪಾಲಿಟ್ ಬ್ಯೂರೋ ಸದಸ್ಯ ಅಷ್ಟೇ ಅಲ್ಲ, ದೇಶದ ಆಡಳಿತದ ನಡೆಸಿರುವ ಕಿಮ್ ಕುಟುಂಬದಲ್ಲಿ ನಂ.2 ಸ್ಥಾನ ಗಳಿಸಿದ್ದಾರೆ.
ಸಾಮಾನ್ಯವಾಗಿ ಕಿಮ್ ಜಾಂಗ್ ಜತೆ ಬರುವ ಅಧಿಕಾರಿಗಳು ಈ ಬಾರಿ ಪ್ರತ್ಯೇಕ ವಿಮಾನದಲ್ಲಿ ಸಿಂಗಪುರದಲ್ಲಿ ತೆರಳುವಂತೆ ಸೂಚಿಸಿದ್ದು ಕೂಡಾ ಕಿಮ್ ಯೋ. ಆಕೆ ಕೂಡಾ ಅಣ್ಣನ ಜತೆ ತೆರಳದೆ ನಂತರ ಸಿಂಗಪುರಕ್ಕೆ ಬಂದಿದ್ದಾರೆ.
ಉತ್ತರ ಕೊರಿಯಾದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರತ್ಯಕ್ಷವಾಗಿ ಪಾತ್ರವಹಿಸುವ ಕಿಮ್ ಯೋ, ಅಣ್ಣನ ಆಡಳಿತ ತಂತ್ರಗಾರಿಕೆಯ ಹಿಂದಿನ ಶಕ್ತಿ ಎನಿಸಿಕೊಂಡಿದ್ದಾರೆ.

2014ರಿಂದ ಕಿಮ್ ಜಾಂಗ್ ಉನ್ ಅವರ ರಾಜಕೀಯ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮದೆದುರು ವಿರಳವಾಗಿ ಕಾಣಿಸಿಕೊಳ್ಳುವ ಕಿಮ್ ಯೋ ಅವರು ಸರ್ವಾಧಿಕಾರಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
1996 ರಿಂದ 2000ರದವರೆಗೆ ಸ್ವಿಟ್ಜರ್ಲ್ಯಾಂಡ್ನಲ್ಲಿ ತಮ್ಮ ಶಿಕ್ಷಣ ಪೂರೈಸಿದ ಯೋ, ಇಲ್ ಸುಂಗ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.ಇಂಗ್ಲೀಷ್ ಹಾಗೂ ಜರ್ಮನ್ ಬಲ್ಲವರಾಗಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕಿಮ್ ಕುಟುಂಬದ ಸದಾ ಸುದ್ದಿಯಾಗುವುದರ ಹಿಂದೆ ಯೋ ಕೈವಾಡವಿದೆ ಎನ್ನಲಾಗುತ್ತದೆ. ಈಗ ಟ್ರಂಪ್ ಹಾಗೂ ಕಿಮ್ ನಡುವಿನ ಐತಿಹಾಸಿಕ ಭೇಟಿ ಹಾಗೂ ಮಾತುಕತೆ ಹಿಂದಿನ ರೂಪುರೇಷೆಯನ್ನು ಕೂಡಾ ಯೋ ವಹಿಸಿಕೊಂಡಿದ್ದಾರೆ.












Click it and Unblock the Notifications