Rain Death: ಈ ಪ್ರದೇಶದಲ್ಲಿ ದಾರಾಕಾರ ಮಳೆ: ಹಠಾತ್ ಪ್ರವಾಹ- 33 ಜನ ಸಾವು!
ಭಾರತದಲ್ಲಿ ಮಳೆ ಅಭಾವದಿಂದಾಗಿ ಜನ ಕಂಗಾಲಾಗಿದ್ದಾರೆ. ಕೆರೆ, ನದಿ, ಬೋರ್‌ವೆಲ್ ಮಾತ್ರವಲ್ಲದೆ ಪ್ರಮುಖ ಜಲಾಶಯಗಳಲ್ಲಿ ನೀರು ಬತ್ತಿ ಹೋಗಿದೆ. ಇದರಿಂದಾಗಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ಭಾರತದ ಹಲವಾರು ರಾಜ್ಯಗಳಲ್ಲಿ ಬರಗಾಲ ಆವರಿಸಿದೆ. ಎಲ್ಲಿ ನೋಡಿದರು ಖಾಲಿ ಬಿಂದಿಗೆ, ನೀರಿಗಾಗಿ ಕಾಯುತ್ತಿರುವ ಜನ, ಟ್ಯಾಂಕರ್ ನೀರು ಬೆಲೆ ಏರಿಕೆಗೆ ಪ್ರತಿಭಟನೆ, ನೀರು ಪಡೆಯಲು ಗುದ್ದಾಟಗಳು ಕಂಡು ಬರುತ್ತಿವೆ. ಇನ್ನೂ ಬಿಸಿಲಿನ ಝಳದ ಕಥೆಯಂತೂ ಹೇಳುವ ಹಾಗೇ ಇಲ್ಲ. ಎಲ್ಲ ನೋಡಿದರೂ ಅಧಿಕ ತಾಪಮಾನದಿಂದಾಗಿ ಚಿಗುರೊಡೆಯಬೇಕಾಗಿದ್ದ ಮರಗಿಡಗಳು ಒಣಗಲಾರಂಭಿಸಿವೆ. ಹಲವೆಡೆ ಒಣ ಹವೆ ಮುಂದುವರೆದಿದೆ. ಇದರಿಂದಾಗಿ ಜನ ಮನೆ ಬಿಟ್ಟು ಹೊರಬಾರದಂತಹ ಪರಿಸ್ಥಿತಿ ಎದುರಾಗಿದೆ.

ಅದಾಗ್ಯೂ ಇತ್ತೀಚೆಗೆ ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಕೊಂಚ ಮಳೆಯಾಗಿದೆ. ಆದರೆ ಹೇಳಿಕೊಳ್ಳುವಂತಹ ಮಟ್ಟಕ್ಕಿಲ್ಲ. ಹಾಗಂತ ಬೇರೆ ದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಕೆಲವೆಡೆ ಅಧಿಕ ಮಳೆಯಾಗಿದ್ದು ಜನ ತತ್ತರಿಸಿ ಹೋಗಿದ್ದಾರೆ. ಹಾಗಾದರೆ ಯಾವ ದೇಶದಲ್ಲಿ ಮಳೆಯಾಗಿದೆ ಎಂದು ತಿಳಿಯೋಣ.
ಅಫ್ಘಾನಿಸ್ತಾನದಲ್ಲಿ ಭಾರೀ ಮಳೆ:
ಅಫ್ಘಾನಿಸ್ತಾನದಲ್ಲಿ ಕಳೆದ ಕೆಲ ದಿನಗಳಿಂದ ಅಧಿಕ ಮಳೆಯಾಗುತ್ತಿದೆ. ಕಾಲೋಚಿತ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ತೀವ್ರ ಗಾಳಿ, ಗುಡುಗು, ಮಿಂಚಿನೊಂದಿಗೆ ದಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಮೂರು ದಿನಗಳಲ್ಲಿ ಕೆರೆ, ನದಿ, ಜಲಾಶಯಗಳು ತುಂಬಿ ಹರೆಯುತ್ತಿವೆ. ಮಳೆಗೆ ಉಂಟಾದ ಪ್ರವಾಹದಿಂದಾಗಿ ಮೂರು ದಿನದಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 27 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ಭಾನುವಾರ ತಿಳಿಸಿದ್ದಾರೆ.

ರಾಜಧಾನಿ ಕಾಬೂಲ್ ಮತ್ತು ಹಲವಾರು ಪ್ರಾಂತ್ಯಗಳಲ್ಲಿ ಹಠಾತ್ ಪ್ರವಾಹಗಳು ಸಂಭವಿಸಿವೆ ಎಂದು ನೈಸರ್ಗಿಕ ವಿಕೋಪ ನಿರ್ವಹಣೆಯ ರಾಜ್ಯ ಸಚಿವಾಲಯದ ತಾಲಿಬಾನ್ ವಕ್ತಾರ ಅಬ್ದುಲ್ಲಾ ಜನನ್ ಸೈಕ್ ಭಾನುವಾರ ಹೇಳಿದ್ದಾರೆ. ಈ ಪ್ರವಾಹದಿಂದಾಗಿ ಸುಮಾರು 200 ಜಾನುವಾರುಗಳು ಸತ್ತರೆ, 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಮಾತ್ರವಲ್ಲದೆ ಪ್ರವಾಹಕ್ಕೆ ಸುಮಾರು 800 ಹೆಕ್ಟೇರ್ ಕೃಷಿ ಭೂಮಿ ಸೇರಿದಂತೆ 85 ಕಿಲೋಮೀಟರ್ (53 ಮೈಲುಗಳು) ಗಿಂತ ಹೆಚ್ಚು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಅಪಾರ ಹಾನಿಯಾಗಿದೆ. ಅಫ್ಘಾನಿಸ್ತಾನದ ಪಶ್ಚಿಮ ಫರಾಹ್, ಹೆರಾತ್, ದಕ್ಷಿಣ ಝಬುಲ್ ಮತ್ತು ಕಂದಹಾರ್ ಅತಿ ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಲ್ಲಿ ಸೇರಿವೆ. ಮಾತ್ರವಲ್ಲದೆ ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತದ ಹವಾಮಾನ ವರದಿ:
ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಹವಾಮಾನ ಮುನ್ಸೂಚನೆಯ ಪ್ರಕಾರ, ವಾಯುವ್ಯ ಭಾರತದ ಹಲವು ಪ್ರದೇಶಗಳಲ್ಲಿ ಬಲವಾದ ಗಾಳಿ, ಆಲಿಕಲ್ಲು ಮತ್ತು ಮಳೆ ಮುಂದುವರಿಯುತ್ತದೆ. ಕೆಲವೆಡೆ ಪ್ರಬಲ ಚಂಡಮಾರುತ ಬೀಸುವ ಸಾಧ್ಯತೆಯೂ ಇದೆ. ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ತಾಪಮಾನವು ವೇಗವಾಗಿ ಏರುವ ನಿರೀಕ್ಷೆಯಿದೆ. ಇಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ.
ವಾಯವ್ಯ ಭಾರತದಲ್ಲಿ ಸಾಧಾರಣ ಗುಡುಗು, ಮಿಂಚು, ರಭಸದ ಗಾಳಿ ಮತ್ತು ಆಲಿಕಲ್ಲು ಮಳೆಯು ಮುಂದಿನ 48 ಗಂಟೆಗಳಲ್ಲಿ ಆಗುವ ಸಾಧ್ಯತೆಯಿದೆ. ಏಪ್ರಿಲ್ 16, 2024 ರಂದು ಹಿಮಾಲಯ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ. ಇನ್ನೂ ಏಪ್ರಿಲ್ 15-18 ರ ಅವಧಿಯಲ್ಲಿ ಒಡಿಶಾ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನ ಪ್ರತ್ಯೇಕ ಸ್ಥಳಗಳಲ್ಲಿ ಶಾಖದ ಅಲೆಯ ಸಾಧ್ಯತೆಯಿದೆ.
ಕರ್ನಾಟಕ ಹವಮಾನ ವರದಿ:
ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ 18ರ ಬಳಿಕ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ರಾಮನಗರ, ತುಮಕೂರು, ವಿಜಯಪುರದಲ್ಲಿ ಮಳೆಯಾಗಲಿದೆ.












Click it and Unblock the Notifications