India VS Canada: ಖಲಿಸ್ತಾನಿ ಉಗ್ರನ ಖತಂ ಮಾಡಿದ್ದು ಹೇಗೆ ಗೊತ್ತಾ?
ಭಾರತ ಮತ್ತು ಕೆನಡಾ ನಡುವೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದ್ದ ಖಲಿಸ್ತಾನಿ ಉಗ್ರನ ಹತ್ಯೆ ಕುರಿತು ಸ್ಫೋಟಕ ಮಾಹಿತಿ ಸಿಕ್ಕಿದೆ. ಹಾಗೇ ಭಾರತದ ವಿರುದ್ಧ ಬಾಯಿಗೆ ಬಂದಂತೆ ಆರೋಪ ಮಾಡಿದ್ದ ಕೆನಡಾ ನಾಯಕರಿಗೂ ಈ ಮೂಲಕ ಉತ್ತರ ಸಿಕ್ಕಿದೆ. ಹಾಗಾದರೆ ಈ ಖಲಿಸ್ತಾನಿ ಗ್ಯಾಂಗ್ ನಾಯಕನ ಕೊಲೆ ಆಗಿದ್ದು ಹೇಗೆ? ಹೊಸ ಸಾಕ್ಷ್ಯಗಳು ಹೇಳುತ್ತಿರುವುದು ಏನು? ಭಾರತದ ಪಾತ್ರದ ಬಗ್ಗೆ ಕೆನಡಾ ಮಾಡಿದ್ದ ಆರೋಪ ಏನಾಯ್ತು?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಇದೇ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ನಿಕೃಷ್ಟವಾಗಿ ಹತ್ಯೆ ಮಾಡಲಾಗಿತ್ತು. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಇರುವ ಗುರು ನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಜಾಗದಲ್ಲೇ ಕೊಲೆಯಾಗಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದೀಗ ಹತ್ಯೆಯ ಮತ್ತೊಂದು ವಿಡಿಯೋ ಆಧರಿಸಿ ಹೊಸ ವರದಿ ಬಿಡುಗಡೆಯಾಗಿದ್ದು, ಉಗ್ರನ ಹತ್ಯೆ ಬಗ್ಗೆ ಸಂಚಲನ ಸೃಷ್ಟಿಯಾಗಿದೆ.

ಕೊಲೆ ಆಗಿದ್ದು ಹೇಗೆ? ಮಾಡಿದ್ದು ಯಾರು?
ಹೌದು, ಹರ್ದೀಪ್ ಸಿಂಗ್ ನಿಜ್ಜರ್‌ನ ಕೊಲೆ ಮಾಡಿದ್ದು ಯಾರು? ಅನ್ನೋ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಈ ಹೊತ್ತಲ್ಲೇ ಸಿಸಿ ಕ್ಯಾಮೆರಾದ ವಿಡಿಯೋ ತುಣುಕು ಸಂಚಲನ ಸೃಷ್ಟಿಸಿದೆ. ವಿಡಿಯೋ ಸಾಕ್ಷ್ಯ ಹೇಳುವಂತೆ, ನಿಜ್ಜರ್ ಹತ್ಯೆಗೆ ಈ ಮೊದಲು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ತಯಾರಿ ನಡೆಸಿದ್ದರು ಹಂತಕರು ಎಂಬುದು ಗೊತ್ತಾಗಿದೆ. ಒಟ್ಟು 90 ಸೆಕೆಂಡ್‌ಗಳ ವಿಡಿಯೋ ತುಣುಕು ಆಧರಿಸಿ ನಿಜ್ಜರ್ ಹತ್ಯೆ ಬಗ್ಗೆ ಹೊಸ ವರದಿ ಪ್ರಕಟಿಸಿದೆ ವಾಷಿಂಗ್ಟನ್ ಪೋಸ್ಟ್. ಈ ವರದಿಯಲ್ಲಿ ಇರುವ ಅಂಶಗಳು ಉಗ್ರನ ಹತ್ಯೆ ಬಗ್ಗೆ ಮಾಹಿತಿ ತೆರೆದಿಟ್ಟಿದೆ.
6 ಮಂದಿ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ 2 ಕಾರುಗಳನ್ನ ಬಳಸಿಕೊಂಡಿದ್ದಾರೆ ಅಂತಾ ಹೇಳಲಾಗಿತ್ತು. ಇನ್ನು ಮತ್ತೊಂದ್ಕಡೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಹಿಂದೆಯೇ ಟ್ರ್ಯಾಕ್ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು. 2017 ರಲ್ಲಿ ಸ್ಥಾಪಿತವಾಗಿರುವ ಸಿಖ್ ಲಿಬರೇಶನ್ ಫ್ರಂಟ್ (SLF) ಮೊನಿಂದರ್ ಸಿಂಗ್ ಹೇಳಿದಂತೆ, ಈ ಹಿಂದೆ ಹರ್ದೀಪ್ ಸಿಂಗ್ ನಿಜ್ಜರ್ ಕಾರನ್ನು ಸಹ ಟ್ರ್ಯಾಕ್ ಮಾಡಲಾಗಿತ್ತು ಎನ್ನಲಾಗಿದೆ. ಇಷ್ಟೆಲ್ಲಾ ಚರ್ಚೆ ನಡುವೆ ಇದೀಗ ಸಿಕ್ಕಿರುವ 90 ಸೆಕೆಂಡ್‌ಗಳ ಸಿಸಿ ಕ್ಯಾಮೆರಾ ದೃಶ್ಯವು ಪ್ರಕರಣಕ್ಕೆ ದೊಡ್ಡ ತಿರುವನ್ನ ಕೊಟ್ಟಿದೆ.

ಕೊಲೆ ಮಾಡಿದ್ದು ಹೇಗೆ ಕಿರಾತಕರು?
ಅಷ್ಟಕ್ಕೂ ಈ ನಿಜ್ಜರ್ ಹತ್ಯೆಯಾದ ಜೂನ್ 18ರಂದು ಗುರುದ್ವಾರ ಪಕ್ಕದಲ್ಲೇ ತನ್ನ ಪಿಕಪ್ ಟ್ರಕ್ ನಿಲ್ಲಿಸಿದ್ದ. ಹೀಗೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೂದು ಬಣ್ಣದ ಪಿಕಪ್ ಟ್ರಕ್ ಹತ್ತಿ ತನ್ನ ಜಾಗಕ್ಕೆ ಹೋಗಲು ಹರ್ದೀಪ್ ಸಿಂಗ್ ನಿಜ್ಜರ್ ಸಿದ್ಧವಾಗಿದ್ದ. ಆದರೆ ನಿಜ್ಜರ್ ಗಾಡಿ ರಿವರ್ಸ್ ತೆಗೆದುಕೊಳ್ಳುವಾಗಲೇ ಸ್ಕೆಚ್ ಶುರುವಾಗಿತ್ತು. ನಿಜ್ಜರ್ ವಾಹನದ ಪಕ್ಕದಲ್ಲೇ ನಿಲ್ಲಿಸಿದ್ದ ಆ ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿ ಇದ್ದವರು ಮೊದಲಿಗೆ ಟ್ರಕ್ ಹೊರಗೆ ಹೋಗದಂತೆ ಲಾಕ್ ಮಾಡಿದ್ದಾರೆ. ಗೇಟ್ ಬಳಿ ಟ್ರಕ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ. ಅಪಾಯದ ಸೂಚನೆ ಸಿಕ್ಕವನಂತೆ ನಿಜ್ಜರ್ ತಕ್ಷಣ ಜೋರಾಗಿ ಟ್ರಕ್ ಓಡಿಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಏನೇ ಮಾಡಿದರೂ ಟ್ರಕ್ ಪಾರ್ಕಿಂಗ್ ಜಾಗ ದಾಟಿ ಹೊರಗೆ ಹೋಗಲು ಆಗಿಲ್ಲ.
ಕೂತ ಜಾಗದಲ್ಲೇ ಜೀವ ಬಿಟ್ಟ ಉಗ್ರ
ಹರ್ದೀಪ್ ಸಿಂಗ್ ನಿಜ್ಜರ್ ಹಣೆಬರಹ ಅಲ್ಲಿಗೆ ಮುಗಿದಿತ್ತು ಅಂತಾ ಕಾಣುತ್ತೆ. ಯಾಕೆ ಅಂದ್ರೆ ನಿಜ್ಜರ್ ಹತ್ಯೆಗೆ ಎಲ್ಲಾ ರೀತಿ ತಯಾರಿ ನಡೆಸಿದ್ದ ಹಂತಕರು, ದಾಳಿ ಆರಂಭಿಸಿ ಮನಸ್ಸಿಗೆ ಬಂದಂತೆ ಗುಂಡು ಹೊಡೆದಿದ್ದಾರೆ. ಇತ್ತ ನಿಜ್ಜರ್ ಟ್ರಕ್‌ನ ಹೊರಗಡೆ ಏನಾಗುತ್ತಿದೆ ಎಂದು ನೋಡುವ ಮೊದಲೇ ಹೊರಗೆ ಅಡಗಿದ್ದ ಇಬ್ಬರು ಹಂತಕರು ಪಿಕಪ್ ಟ್ರಕ್ ಒಳಗಿದ್ದ ಉಗ್ರನ ಮೇಲೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾರೆ. ಹೀಗೆ ಇಬ್ಬರೂ ಹಂತಕರು ಸೇರಿ, 50 ಸುತ್ತು ಗುಂಡು ಹಾರಿಸಿದ್ದಾರೆ. ಈ ಪೈಕಿ 34 ಗುಂಡು ನಿಜ್ಜರ್ ದೇಹ ಸೇರಿದೆ ಎನ್ನಲಾಗಿದೆ. ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಟ್ರಕ್ ಒಳಗಿನಿಂದ ಒಂದಿಂಚು ಕೂಡ ಅಲುಗಾಡಲು ಆಗದೆ ಇರುವ ರೀತಿ ಹತ್ಯೆ ಮಾಡಿ ಮುಗಿಸಲಾಗಿದೆ.
ಇನ್ನು ಇದೀಗ ಸಿಕ್ಕಿರುವ ಹೊಸ ಫುಟೇಜ್ ಮೂಲಕ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಕೆನಡಾದಲ್ಲಿ ಸಿಖ್ ಹಾಗೂ ಹಿಂದೂ ಧರ್ಮಿಯರ ಮಧ್ಯೆ ಕೂಡ ನಿಜ್ಜರ್ ಹತ್ಯೆಯು ಬಿರುಗಾಳಿ ಎಬ್ಬಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ಇನ್ನೊಂದು ಕಡೆ ನಿಜ್ಜರ್ ಹತ್ಯೆಯ ಮಾಡುವಾಗ, ಆ ಕೊಲೆಗಾರರು ಸಿಖ್ಖರ ವೇಶದಲ್ಲಿ ಇದ್ದರು ಎಂಬುದಾಗಿ ಪ್ರತ್ಯಕ್ಷ್ಯದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲ್ಲಾ ಆಯಾಮದಲ್ಲಿ ತನಿಖೆಗೆ ಕೆನಡಾ ನಿರ್ಧರಿಸಿದೆ. ಕೆನಡಾ ಭದ್ರತಾ ಅಧಿಕಾರಿಗಳು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಆದರೆ ಸೂಕ್ತ ಸಾಕ್ಷ್ಯವೇ ಸಿಗದೆ ಕೆನಡಾ ಪ್ರಧಾನಿ ಆರೋಪ ಮಾಡಿದ್ದರು ಅಂತಾ ಭಾರತ ಕೋಪಗೊಂಡಿದೆ. ಹೀಗೆ ಉಗ್ರನ ವಿಚಾರಕ್ಕೆ ಭಾರತ ಮತ್ತು ಕೆನಡಾ ಸಂಬಂಧ ಹಳಸಿ ಹೋಗಿದೆ.












Click it and Unblock the Notifications